ಬಾಬಾಗೆ 20 ವರ್ಷ ಜೈಲು ಶಿಕ್ಷೆ ಆಗಿದ್ದು ಹೇಗೆ? ಇಂದು ಕೋರ್ಟ್ ನಲ್ಲಿ ಏನಾಯ್ತು?

By
3 Min Read

ಪಂಚಕುಲಾ: ನಾನು ದೇವರ ಅಪರಾವತರ. ದೇವರ ಸಂದೇಶಗಾರ ಎಂದು ಸ್ವಂಘೋಷಿತ ದೇವಮಾನವನ ಸೋಗಿನಲ್ಲಿ ಅತ್ಯಾಚಾರ ನಡೆಸಿದ ಡೇರಾ ಸಚ್ಛಾಸೌದದ ಗುರ್ಮಿತ್ ರಾಮ್ ರಹೀಂ ಸಿಂಗ್‍ಗೆ ಕೋರ್ಟ್ 20 ವರ್ಷ ಜೈಲು ಶಿಕ್ಷೆ ಮತ್ತು ಒಟ್ಟು 29 ಲಕ್ಷ ರೂ.ದಂಡ ವಿಧಿಸಿದೆ.

ಸಿರ್ಸಾ ಆಶ್ರಮದಲ್ಲಿ ಇಬ್ಬರು ಸಾಧ್ವಿಗಳ ಮೇಲೆ ಮೂರು ವರ್ಷ ನಿರಂತರ ಅತ್ಯಾಚಾರ ಎಸಗಿದ್ದ ಅಪರಾಧಿ ಬಾಬಾಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) 506(ಜೀವ ಬೆದರಿಕೆ) ಅಡಿ ಕಠಿಣ ಜೈಲುಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಜಡ್ಜ್ ಜಗದೀಪ್ ಸಿಂಗ್ ಆದೇಶಿಸಿದ್ದಾರೆ.

ಮೊದಲಿಗೆ 10 ವರ್ಷ ಅಷ್ಟೇ ಎಂದೇ ಸುದ್ದಿಯಾಗಿತ್ತು. ಮಧ್ಯಾಹ್ನ 3.30ಕ್ಕೆ ಮೊದಲ ಮತ್ತು 4.30ಕ್ಕೆ ಎರಡನೇ ತೀರ್ಪು ಪ್ರಕಟಿಸಿದರು. ಕೋರ್ಟ್ ಆದೇಶ ಓದಿದ ಬಳಿಕ 2 ಅತ್ಯಾಚಾರ ಕೇಸ್‍ಗಳಲ್ಲಿ ತಲಾ 10ರಂತೆ 20 ವರ್ಷ ಶಿಕ್ಷೆ ಮತ್ತು 15 ಲಕ್ಷ ದಂಡ ಹಾಗೂ 14 ಲಕ್ಷವನ್ನ ಸಂತ್ರಸ್ತೆಯರಿಗೆ ನೀಡುವಂತೆ ಜಡ್ಜ್ ಒಟ್ಟು 29 ಲಕ್ಷ ದಂಡ ವಿಧಿಸಿದ್ದಾರೆ.

ಸಿಬಿಐ ಕೋರ್ಟ್ ತೀರ್ಪನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸುತ್ತೇವೆ ಎಂದು ರಾಮ್ ರಹೀಮ್ ಪರ ವಕೀಲರು ಸ್ಪಷ್ಟ ಪಡಿಸಿದ್ದಾರೆ. ಶಿಕ್ಷೆಯಲ್ಲಿ ಗೊಂದಲ ಇಲ್ಲ ಎಂದು ಸಿಬಿಐ ವಕ್ತಾರರು ಸಹ ಖಾತ್ರಿ ಪಡಿಸಿದರು. ಆದರೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಸಂತ್ರಸ್ತೆಯೊಬ್ಬರು ಹೈಕೋರ್ಟ್‍ಗೆ ಹೋಗುವುದಾಗಿ ಹೇಳಿದ್ದಾರೆ.

ತೀರ್ಪಿನ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ಅದೇ ಜೈಲಿನಲ್ಲಿ ರಾಮ್ ರಹೀಂಗೆ ಜೈಲು ಉಡುಪು ಕೊಡಲಾಯ್ತು. ಆಗಸ್ಟ್ 25ಕ್ಕೆ ತೀರ್ಪಿನಂತೆ ಹಿಂಸಾಚಾರ ಇವತ್ತು ನಡೆಯಲು ಭದ್ರತಾ ಪಡೆಗಳು ಆಸ್ಪದ ಕೊಡಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಪಂಜಾಬ್-ಹರ್ಯಾಣ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಇವತ್ತು ಕರ್ಫ್ಯೂ ವಿಧಿಸಿ ಕಂಡಲ್ಲಿ ಗುಂಡು ಹೊಡೆಯಲು ಆದೇಶಿಸಲಾಗಿತ್ತು. ಆದಾಗ್ಯೂ, ಸಿರ್ಸಾದ ಪುಲ್ಕನ್ ಗ್ರಾಮದ ಬಳಿ 2 ಕಾರುಗಳಿಗೆ ಭಕ್ತರು ಬೆಂಕಿ ಹಚ್ಚಿದ್ದರು.

ಲೈಬ್ರರಿಯಲ್ಲಿ ಕಲಾಪ:
ರೋಹ್ಟಕ್ ನ ಸುನಾರಿಯಾ ಜೈಲಿನ ಗ್ರಂಥಾಲಯದಲ್ಲಿ ತಾತ್ಕಾಲಿಕ ಕೋರ್ಟ್ ಹಾಲ್ ನಿರ್ಮಿಸಲಾಗಿತ್ತು. ಹೆಲಿಕಾಪ್ಟರ್ ಮೂಲಕ ಜಡ್ಜ್ ಜಗದೀಪ್ ಸಿಂಗ್ ಕೋರ್ಟ್ ಗೆ ಆಗಮಿಸಿದರು. ಶಿಕ್ಷೆ ಪ್ರಕಟಣೆಗೆ ಮುಂಚೆ ರೋಹ್ಟಕ್‍ನ ಸುನರಿಯಾ ಕೋರ್ಟ್ ನಲ್ಲಿ ಭಾರೀ ಹೈಡ್ರಾಮ ನಡೆಯಿತು. ಜಡ್ಜ್ ಜಗದೀಪ್ ಸಿಂಗ್, ಸಿಬಿಐ ಪರ ವಕೀಲ, ಬಾಬಾ ಪರ ವಕೀಲ, ಆರೋಪ ಬಾಬಾ ಸೇರಿ 7 ಮಂದಿ ಮಾತ್ರ ಕೋರ್ಟ್ ಹಾಲ್‍ನಲ್ಲಿದ್ದರು. 2.30ಕ್ಕೆ ಕಲಾಪ ಆರಂಭಿಸಿದ ಜಡ್ಜ್, ಇಬ್ಬರೂ ವಕೀಲರಿಗೆ ಹತ್ತತ್ತು ನಿಮಿಷ ಅವಕಾಶ ಕಲ್ಪಿಸಿದರು.

ಸಿಬಿಐ ಪರ ವಕೀಲರ ವಾದ ಏನಿತ್ತು?
ಧರ್ಮ ಮತ್ತು ನಂಬಿಕೆಯ ಹೆಸರಿನಲ್ಲಿ ಬಾಬಾ ರೇಪ್ ಮಾಡಿದ್ದು ತಮ್ಮನ್ನು ನಂಬಿ ಬಂದ ಹೆಣ್ಮಕ್ಕಳ ಜೀವನ ಹಾಳು ಮಾಡಿದ್ದಾರೆ. ಬಾಬಾ ಗುರ್ಮಿತ್ ಕೃತ್ಯವನ್ನು ಸಮಾಜ ಕ್ಷಮಿಸಲಾಗದು. ಅತ್ಯಾಚಾರ ಮಾಡಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ. ಬಾಬಾ ಬೆಂಬಲಿಗರು ತೀರ್ಪಿನ ದಿನ ದಾಂಧಲೆ ಮಾಡಿದ್ದು ಅಲ್ಲದೇ ಈಗಲೂ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಕನಿಷ್ಠ 10 ವರ್ಷ ಕಠಿಣ ಶಿಕ್ಷೆ ನೀಡಬೇಕು

ಬಾಬಾ ಪರ ವಕೀಲರ ವಾದ ಏನಿತ್ತು?
ಸಿಬಿಐ ಪರ ವಕೀಲರ ವಾದವನ್ನು ದಯವಿಟ್ಟು ಪರಿಗಣಿಸಬೇಡಿ. ನಮ್ಮ ಕಕ್ಷಿದಾರನಿಗೆ ವಯಸ್ಸಾಗಿದ್ದು ಆರೋಗ್ಯ ಬೇರೆ ಕೈಕೊಟ್ಟಿದೆ. ನಮ್ಮ ಕಕ್ಷಿದಾರ ಅಪಾರ ಸಮಾಜ ಸೇವೆ ಮಾಡಿದ್ದಾರೆ. ದಯವಿಟ್ಟು ಬಾಬಾ ಗುರ್ಮಿತ್‍ಗೆ ಕನಿಷ್ಠ ಶಿಕ್ಷೆಯನ್ನು ವಿಧಿಸಿ.

ಬಾಬಾ ಮನವಿ ಏನಿತ್ತು?
ಕೋರ್ಟ್ ಹಾಲ್‍ಗೆ ಎಂಟ್ರಿ ಕೊಡುತ್ತಲೇ ಭವಿಷ್ಯ ನೆನಪಿಸಿಕೊಂಡು ಕಣ್ಣೀರು ಹಾಕಿ ನನ್ನನ್ನು ಮನ್ನಿಸಬೇಕು. ದಯವಿಟ್ಟು ನನ್ನ ಮೇಲೆ ಕನಿಕರ ತೋರಿ ಕನಿಷ್ಠ ಶಿಕ್ಷೆ ವಿಧಿಸಿ. ನನ್ನ ನಂಬಿರುವ ಜನಕ್ಕೆ ಮತ್ತು ಸಮಾಜದ ಸೇವೆ ಸಲ್ಲಿಸಬೇಕಿದೆ. ಪ್ಲೀಸ್ ದಯವಿಟ್ಟು ನನ್ನನ್ನು ಕ್ಷಮಿಸಿ ಸಣ್ಣ ಪ್ರಮಾಣದ ಶಿಕ್ಷೆ ನೀಡಿ.

ಜಡ್ಜ್ ತೀರ್ಪು ಏನು?
ಅಪರಾಧಿ ಮಾಡಿದ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆಯೇ ಸರಿ(ಎರಡು ಕೇಸ್‍ನಲ್ಲಿ ತಲಾ ಹತ್ತತ್ತು ವರ್ಷ ಶಿಕ್ಷೆ). ಅಪರಾಧಿಗೆ ಜೈಲಿನಲ್ಲಿ ವಿವಿಐಪಿ ಸವಲತ್ತು ನೀಡುವಂತಿಲ್ಲ. ಅಷ್ಟೇ ಅಲ್ಲದೇ ಬಾಬಾಗೆ ಸಹಾಯಕನನ್ನು ಸಹ ನೀಡುವಂತಿಲ್ಲ. ನಂಬಿಕೆ ಹೆಸರಿನಲ್ಲಿ ಇಂತಹ ಕೃತ್ಯ ಎಸಗುವವರಿಗೆ ಇದು ಪಾಠ ಆಗಬೇಕು.

ರೇಪಿಸ್ಟ್ ಬಾಬಾನ ಮುಂದಿನ ಹಾದಿ ಏನು?
ಶಿಕ್ಷೆ ಅಮಾನತ್ತಿಡಲು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು. 20 ವರ್ಷ ಶಿಕ್ಷೆ ವಿಧಿಸಿರುವುದರಿಂದ ಶಿಕ್ಷೆ ಅಮಾನತ್ತಿನಲ್ಲಿಡುವುದು ಕಡಿಮೆ. ಸದ್ಯಕ್ಕೆ ಜಾಮೀನು ನೀಡುವ ಸಾಧ್ಯತೆ ಕಡಿಮೆ ಇರುವ ಕಾರಣ ಶೀಘ್ರದಲ್ಲೇ ವಿಚಾರಣೆ ನಡೆಸುವಂತೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು.

Share This Article
Leave a Comment

Leave a Reply

Your email address will not be published. Required fields are marked *