ಖಾಸಗಿತನ ಮೂಲಭೂತ ಹಕ್ಕು – ಸಾಂವಿಧಾನಿಕ ಪೀಠದಿಂದ ಸರ್ವಸಮ್ಮತ ತೀರ್ಪು

Public TV
2 Min Read

ನವದೆಹಲಿ: ತ್ರಿವಳಿ ತಲಾಕ್ ಬ್ಯಾನ್ ಮಾಡುವ ಮೂಲಕ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಇಂದು ಮತ್ತೊಂದು ಐತಿಹಾಸಿಕ ತೀರ್ಪು ನೀಡಿದೆ. ಖಾಸಗಿತನ ಮೂಲಭೂತ ಹಕ್ಕು ಎಂದು ಮಹದತ್ವದ ಆದೇಶ ನೀಡಿದೆ. ಇದರಿಂದ ಕೇಂದ್ರ ಸರ್ಕಾರದ ಆಧಾರ್ ಯೋಜನೆಗೆ ಹಿನ್ನಡೆ ಉಂಟಾದಂತಾಗಿದೆ.

ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಒಂಭತ್ತು ನ್ಯಾಯಾಧೀಶರ ಸಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ. ಆದ್ರೆ ಎಲ್ಲಾ ಹಣಕಾಸು ವ್ಯವಹಾರಗಳಿಗೆ ಆಧಾರ್ ಸಂಖ್ಯೆಯನ್ನು ಸಂಯೋಜನೆಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಒತ್ತಾಯ ಖಾಸಗಿತನದ ಉಲ್ಲಂಘನೆಯೇ ಎಂಬ ಬಗ್ಗೆ ಕೋರ್ಟ್ ಯಾವುದೇ ಹೇಳಿಕೆ ನೀಡಿಲ್ಲ. ಈ ನಿರ್ಧಾರವನ್ನ ಸುಪ್ರೀಂ ಕೋರ್ಟ್‍ನ ಪ್ರತ್ಯೇಕ ಹಾಗೂ ಸಣ್ಣ ಪೀಠದಲ್ಲಿ ಕೈಗೊಳ್ಳಲಾಗುತ್ತದೆ ಎಂದು ವರದಿಯಾಗಿದೆ.

ಕೇಂದ್ರ ಸರ್ಕಾರದ ಆಧಾರ್ ಯೋಜನೆಯಿಂದ ಪಡೆದ ಖಾಸಗಿ ದಾಖಲೆಗಳು ದುರುಪಯೋಗವಾಗುವ ಸಾಧ್ಯತೆ ಇದೆ. ಹಾಗೂ ಒಬ್ಬ ವ್ಯಕ್ತಿಯ ಎಲ್ಲ ಮಾಹಿತಿಯನ್ನು ಸರ್ಕಾರ ಒಂದೆಡೆ ದಾಖಲಿಸುವುದು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಬರಲಿದೆ ಅಂತಾ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಕಳೆದ ತಿಂಗಳು ಸುಪ್ರೀಂಕೋರ್ಟ್ ಆರು ದಿನಗಳ ದೀರ್ಘ ವಿಚಾರಣೆ ನಡೆಸಿತ್ತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಗೋಪಾಲ್ ಸುಬ್ರಮಣ್ಯ ಮತ್ತು ಶಾಮ್ ದಿವಾನ್, ಖಾಸಗಿತನ ಮಾನವನ ಪ್ರತಿಯೊಂದು ಪ್ರಕ್ರಿಯೆಯಲ್ಲಿದ್ದು, ಖಾಸಗಿತನವನ್ನು ಸಂವಿಧಾನಿಕವಾಗಿ ಮೂಲಭೂತ ಹಕ್ಕೆಂದು ಪರಿಗಣಿಸಬೇಕು ಅಂತಾ ವಾದ ಮಂಡಿಸಿದ್ರು. ಇನ್ನೂ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಮಾಜಿ ಅರ್ಟಾನಿ ಜನರಲ್ ಮುಕುಲ್ ರೊಹ್ಟಗಿ ಹಾಗೂ ಹಾಲಿ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಭಾರತೀಯರಿಗೆ ಖಾಸಗಿತನ ಸಂವಿಧಾನಿಕ ಮೂಲಭೂತ ಹಕ್ಕಲ್ಲ ಎಂದು ವಾದಿಸಿದ್ರು.

ಆಧಾರ್ ಒಂದು ಉತ್ತಮ ಯೋಜನೆಯಾಗಿದ್ದು ಆಹಾರ, ಆಶ್ರಯ, ಅಭಿವೃದ್ಧಿ ಯೋಜನೆಗಳನ್ನು ಲಕ್ಷಾಂತರ ಜನರಿಗೆ ತಲುಪಿಸಲು ಸಹಾಯವಾಗಲಿದೆ. ಈಗಾಗಲೇ ಸುಮಾರು 6300 ಕೋಟಿ ವ್ಯಯ ಮಾಡಲಾಗಿದ್ದು ನೂರು ಕೋಟಿ ಜನರಿಗೆ ಆಧಾರ್ ನೀಡುವ ವ್ಯವಸ್ಥೆ ಮಾಡಲಾಗಿದೆ. ನ್ಯಾಯಲಯ ಇದನ್ನು ಪರಿಗಣಿಸಿ ಖಾಸಗಿತನ ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಬೇಕು ಅಂತಾ ಪ್ರತಿವಾದ ಮಂಡಿಸಿದ್ರು.

ಈ ಹಿಂದೆ 1954 ರಲ್ಲಿ 8 ನ್ಯಾಯಾಧೀಶರ ಪೀಠ ಹಾಗೂ 1962ರಲ್ಲಿ 6 ನ್ಯಾಯಧೀಶರು ಪೀಠ ಖಾಸಗಿತನ ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿದ್ದವು.

Share This Article
Leave a Comment

Leave a Reply

Your email address will not be published. Required fields are marked *