19ರ ಯುವತಿಗೆ ಚಾಕುವಿನಿಂದ ಇರಿದ ಸೋದರಮಾವ!

Public TV
1 Min Read

ಚೆನ್ನೈ: ತನನ್ನು ಮದುವೆಯಾಗಲು ನಿರಾಕರಿಸಿದಳೆಂದು 19 ವರ್ಷದ ಯುವತಿಗೆ ಆಕೆಯ ಸೋದರಮಾವ ಚೂರಿಯಿಂದ ಇರಿದ ಘಟನೆ ತಿರುಚ್ಚಿಯ ಮನ್ನಚನಲ್ಲೂರ್ ನಲ್ಲಿ ನಡೆದಿದೆ.

ವಿ.ಯೋಗಲಕ್ಷ್ಮಿ ಚಾಕು ಇರಿತಕ್ಕೆ ಒಳಗಾದ ಯುವತಿ. ಈಕೆ ಜಿಲ್ಲೆಯ ಕರುಂಕಡು ಗ್ರಾಮದ ವೆಂಕಟಚಲಮ್ ಎಂಬವರ ಮಗಳಾಗಿದ್ದು, ತಿರುಚ್ಚಿಯ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ಓದುತ್ತಿದ್ದಾರೆ. ಕರುಂಕಡು ಸಮೀಪದ ಪಚುರ್ ಗ್ರಾಮದವನಾದ ಈಕೆಯ ಸೋದರಮಾವ ವೀರಪಿಳ್ಳೈ(26) ಈ ಕೃತ್ಯವೆಸಗಿದ್ದಾನೆ.

ಏನಿದು ಘಟನೆ?: ವೀರಪಿಳ್ಳೈ ಮದ್ಯವ್ಯಸನಿಯಾಗಿದ್ದು, ಹಲವು ವರ್ಷಗಳಿಂದ ಉದ್ಯೋಗವಿಲ್ಲದೇ ಅಲೆದಾಡುತ್ತಿದ್ದ. ತನ್ನ ತಾಯಿಯ ಜೊತೆಯಲ್ಲಿ ವಾಸವಿದ್ದ. ಈತ ಇತ್ತೀಚೆಗೆ ವೆಂಕಟಚಲಮ್ ಅವರ ಬಳಿ ಹೋಗಿ ತಮ್ಮ ಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ಕೇಳಿದ್ದ. ಈ ವೇಳೆ ವೆಂಕಟಚಲಮ್, ಆಕೆ ಇನ್ನೂ ಓದುತ್ತಿದ್ದಾಳೆ ಎಂದು ಹೇಳಿ ಮದುವೆ ನಿರಾಕರಿಸಿದ್ದರು. ಆದ್ರೆ ವೀರಪಿಳ್ಳೈ ಕುಟುಂಬಕ್ಕೆ ತೊಂದರೆ ಕೊಡುತ್ತಲೇ ಇದ್ದ. ಮತ್ತೊಮ್ಮೆ ವೀರಪಿಳ್ಳೈ ಮದುವೆ ಪ್ರಸ್ತಾಪ ಮುಂದಿಟ್ಟಾಗ ಆತ ಮದ್ಯವ್ಯಸನಿಯಾಗಿದ್ದ ಕಾರಣ ವೆಂಕಟಚಲಮ್ ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿದ್ದರು.

ಇದರಿಂದ ಕೋಪಗೊಂಡ ವೀರಪಿಳ್ಳೈ ಶನಿವಾರ ರಾತ್ರಿ ಸಹೋದರಿ ಮನೆಗೆ ತೆರಳಿ ಈ ವಿಚಾರವಾಗಿ ಜಗಳ ಮಾಡಿದ್ದಾನೆ. ಈ ವೇಳೆ ಆತ ಮದ್ಯದ ಅಮಲಿನಲ್ಲಿದ್ದ. ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ಮಗಳು ಅಪ್ಪನನ್ನು ರಕ್ಷಿಸಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ವೀರಪಿಳೈ ಯೋಗಲಕ್ಷ್ಮಿಗೆ ಚಾಕುವಿನಿಂದ ಇರಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಬಳಿಕ ಕುಟುಂಬಸ್ಥರು ಯುವತಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ತಂದೆ ವೆಂಕಟಾಚಲಮ್ ನೀಡಿದ ದೂರಿನನ್ವಯ ಮನ್ನಚನ್ನಲ್ಲೂರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವೀರಪಿಳ್ಳೈಗಾಗಿ ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *