ಆಧಾರ್‍ನಿಂದ 2 ವರ್ಷಗಳ ನಂತರ ಹೆತ್ತವರನ್ನ ಮತ್ತೆ ಸೇರಿದ 9ರ ಬುದ್ಧಿಮಾಂದ್ಯ ಬಾಲಕ

Public TV
1 Min Read

 

ನವದೆಹಲಿ: ಕುಟುಂಬದಿಂದ ಬೇರ್ಪಟ್ಟಿದ್ದ ಬುದ್ಧಿಮಾಂದ್ಯ ಬಾಲಕನೊಬ್ಬ ಆಧಾರ್ ನೆರವಿನಿಂದ ಸೋಮವಾರದಂದು ಮತ್ತೆ ಹರಿಯಾಣದ ಪಾಣಿಪತ್‍ನಲ್ಲಿರುವ ತನ್ನ ಪೋಷಕರ ಮಡಿಲು ಸೇರಿದ್ದಾನೆ.

9 ವರ್ಷದ ಗೌರವ್ ಎರಡು ವರ್ಷಗಳ ಬಳಿಕ ತನ್ನ ಪೋಷಕರನ್ನ ಭೇಟಿಯಾಗಿದ್ದಾನೆ. ಮಕ್ಕಳ ಆಶ್ರಯ ಗೃಹದಲ್ಲಿ ಅಧಿಕಾರಿಗಳು ಆಧಾರ್ ನೋಂದಣಿಗಾಗಿ ಎಲ್ಲಾ ಹುಡುಗರ ಬಯೋಮೆಟ್ರಿಕ್ ವಿವರಗಳನ್ನ ಪಡೆದಿದ್ರು. ಆದ್ರೆ ಒಬ್ಬ ಹುಡುಗನ ವಿವರವನ್ನ ಮಾತ್ರ ನೊಂದಾಯಿಸಲು ಆಗಿರಲಿಲ್ಲ. ಯಾಕಂದ್ರೆ ಆತನ ಹೆಸರು ಅದಾಗಲೇ ನೋಂದಣಿಯಾಗಿತ್ತು. ಬಳಿಕ ದಹಲಿ ಮಹಿಳಾ ಆಯೋಗ ನಡೆಸುತ್ತಿದ್ದ ಸರ್ಕಾರೇತರ ಸಂಸ್ಥೆ ಪಾಲ್ನಾ ದಲ್ಲಿದ್ದ ಬಾಲಕ ಗೌರವ್‍ನನ್ನ ಸಲಾಮ್ ಬಾಲಕ್ ಟ್ರಸ್ಟ್‍ಗೆ ಕಳಿಸಲಾಗಿತ್ತು.

ಪಾಲ್ನಾದಲ್ಲಿ 8 ವರ್ಷ ವಯಸ್ಸಿನವರೆಗಿನ ಮಕ್ಕಳನ್ನ ಮಾತ್ರ ನೋಡಿಕೊಳ್ಳಲಾಗುತ್ತದೆ. ಆದ್ದರಿಂದ ಗೌರವ್‍ನನ್ನು ಇಲ್ಲಿಗೆ ವರ್ಗಾಯಿಸಲಾಯ್ತು. ನಿಯಮಿತವಾಗಿ ನಡೆಸಲಾಗುವ ಆರೋಗ್ಯ ಪರೀಕ್ಷೆ ವೇಳೆ ಬಾಲಕ ಎಡಿಎಸ್‍ಪಿ(ಆಲ್ಝಿಮರ್ಸ್ ಡಿಸೀಸ್ ಸೀಕ್ವೆನ್ಸಿಂಗ್ ಪ್ರಾಜೆಕ್ಟ್) ನಿಂದ ಬಳಲುತ್ತಿದ್ದಾನೆ ಎಂದು ಗೊತ್ತಾಯಿತು. ಆದ್ದರಿಂದ ಆತನಿಗೆ ತನ್ನ ಹಾಗೂ ಪೋಷಕರ ಹೆಸರು ಬಿಟ್ಟರೆ ಬೇರೆ ಯಾವುದೂ ನೆನಪಿರಲಿಲ್ಲ ಅಂತ ಟ್ರಸ್ಟ್‍ನ ಕೋ-ಆರ್ಡಿನೇಟರ್ ಸಂಜಯ್ ದುಬೇ ಹೇಳಿದ್ದಾರೆ.

ಬಯೋಮೆಟ್ರಿಕ್ ಪರಿಶೀಲನೆ ವೇಳೆ ಬಾಲಕನ ವಿವರಗಳು ಪಾಣಿಪತ್‍ನಲ್ಲಿದ್ದ ಆತನ ಪೋಷಕರೊಂದಿಗೆ ಹೊಂದಿಕೆ ಆಗಿತ್ತು. ಇದನ್ನ ಬೆನ್ನತ್ತಿ ಆತನ ಪೋಷಕರನ್ನು ದೆಹಲಿಗೆ ಕರೆಸಲಾಗಿತ್ತು. ಈ ಮೂಲಕ ಬುದ್ಧಿಮಾಂದ್ಯ ಬಾಲಕ ಕೊನೆಗೂ ತನ್ನ ಪೋಷಕರನ್ನ ಸೇರುವಂತಾಯ್ತು ಎಂದು ಅವರು ಹೇಳಿದ್ದಾರೆ. 2 ವರ್ಷಗಳ ನಂತರ ಮಗ ಸಿಕ್ಕಿದ್ದಕ್ಕೆ ಗೌರವ್ ತಂದೆ ವಿಕಾಸ್ ಸಂತೋಷಗೊಂಡಿದ್ದಾರೆ.

ನನಗೆ ನೆನಪಿದೆ, ಅಂದು 2015ರ ಭಾನುವಾರ. ಮನೆಯ ಹೊರಗಡೆ ಆಟವಾಡ್ತಿದ್ದ ಗೌರವ್ ಕಾಣೆಯಾಗಿದ್ದ. ನಾವು ಆತನಿಗಾಗಿ ಎಲ್ಲಾ ಕಡೆ ಹುಡುಕಾಡಿದೆವು. ಕೊನೆಗೆ ಪೊಲೀಸ್ ಠಾಣೆಗೂ ದೂರು ಕೊಟ್ಟೆವು. ಟಿವಿ, ನ್ಯೂಸ್‍ಪೇಪರ್‍ಗಳಲ್ಲಿ ಜಾಹಿರಾತು ಕೊಟ್ಟರೂ ನಮ್ಮ ಮಗನನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಆದ್ರೆ ನಮ್ಮ ನಂಬಿಕೆ ಕುಗ್ಗಿರಲಿಲ್ಲ. ಅಂತೂ ಆಧಾರ್‍ನಿಂದ ನಮ್ಮ ದೊಡ್ಡ ಮಗ ಮತ್ತೆ ನಮಗೆ ಸಿಕ್ಕಿದ್ದಾನೆ ಅಂತ ತಂದ ವಿಕಾಸ್ ಸಂತೋಷ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *