ಮಗುವಿಗೆ `ಜಿಎಸ್‍ಟಿ’ ಅಂತಾ ಹೆಸರಿಟ್ರು!

By
2 Min Read

ಜೈಪುರ: ಭಾರತದಲ್ಲಿ ಜಿಎಸ್‍ಟಿ ಶಕೆ ಈಗಾಗಲೇ ಆರಂಭವಾಗಿದ್ದು, ಆಗ ತಾನೇ ಹುಟ್ಟಿದ ಮಗುವಿಗೆ `ಜಿಎಸ್‍ಟಿ’ ಅಂತಾ ನಾಮಕರಣ ಮಾಡಿದ ರಾಜಸ್ತಾನದ ದಂಪತಿ ಇದೀಗ ಸುದ್ದಿಯಾಗಿದ್ದಾರೆ.

ಹೌದು. ಜುಲೈ 1 ರಿಂದ ಜಿಎಸ್‍ಟಿ(ಏಕರೂಪ ತೆರಿಗೆ ನೀತಿ) ಜಾರಿಯಾಗಿದೆ. ಶುಕ್ರವಾರ ಮಧ್ಯರಾತ್ರಿ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜಿಎಸ್‍ಟಿಗೆ ಚಾಲನೆ ನೀಡಿದ ವೇಳೆ ಇತ್ತ ರಾಜಸ್ತಾನದ ಬೇವ್ವಾದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಗುವಿಗೆ ಜಿಎಸ್‍ಟಿ ಎಂದು ಹೆಸರಿಟ್ಟಿದ್ದಾರೆ. ಈ ಕುರಿತು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಟ್ವೀಟ್ ಮಾಡಿದ್ದು, ಬೇಬಿ `ಜಿಎಸ್ ಟಿ’ ಆರೋಗ್ಯವಾಗಿ, ಸುಖ-ಶಾಂತಿಯಿಂದ ಬಾಳಲಿ ಎಂದು ತಿಳಿಸಿದ್ದಾರೆ.

ಜೂನ್ 30ರ ಮಧ್ಯರಾತ್ರಿ ಇತಿಹಾಸ ಪ್ರಸಿದ್ಧ ಪಾರ್ಲಿಮೆಂಟ್‍ನ ಸೆಂಟ್ರಲ್ ಹಾಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಜಿಎಸ್ ಟಿಗೆ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಮೋದಿ, ಇದೊಂದು ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ ಎಂದು ಬಣ್ಣಿಸಿದ್ದರು.

ಜಿಎಸ್‍ಟಿ ಜಾರಿಗೆ ಸಂಸತ್‍ಗಿಂತ ಪವಿತ್ರ ಸ್ಥಳ ಮತ್ತೊಂದಿಲ್ಲ. ಬಡವರ ಹಿತದ ಬಗ್ಗೆ ಜಿಎಸ್‍ಟಿಯಲ್ಲಿ ಗಮನ ಹರಿಸಲಾಗಿದೆ. ನವಭಾರತ ಕಟ್ಟುವಲ್ಲಿ ಜಿಎಸ್‍ಟಿ ರಹದಾರಿಯಾಗಲಿದೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ದೇಶದ ಏಕೀಕರಣ ಮಾಡಿದ್ರು. ಅದರಂತೆ ಜಿಎಸ್‍ಟಿ ಮೂಲಕ ದೇಶದ ಆರ್ಥಿಕ ಏಕೀಕರಣಕ್ಕೆ ನಾಂದಿ ಹಾಡಿದ್ದೇವೆ. ಲೇಹ್‍ನಿಂದ ಲಕ್ಷದ್ವೀಪದವರೆಗೆ, ಗಂಗಾನಗರದಿಂದ ಇಟಾ ನಗರದವರೆಗೆ ಒಂದೇ ತೆರಿಗೆ. ಜಿಎಸ್‍ಟಿ ಯಶಸ್ಸು ಕೇವಲ ಒಂದು ಸರ್ಕಾರಕ್ಕೆ ಸೇರಿದ್ದಲ್ಲ. ಹಿಂದಿನ ಎಲ್ಲ ಸರ್ಕಾರಗಳ ಸಾಮೂಹಿಕ ಶ್ರಮದ ಫಲವಾಗಿ ಎರಡು ದಶಕಗಳ ಕನಸು ಸಾಕಾರಗೊಂಡಿದೆ. ಭಗವದ್ಗೀತೆಯಲ್ಲಿನ 18 ಅಧ್ಯಾಯಗಳಂತೆ ಜಿಎಸ್‍ಟಿ ಮಂಡಳಿ ಸಹ 18 ಸಭೆ ನಡೆಸಿತ್ತು. ಕಪ್ಪುಹಣಕ್ಕೆ ಕಡಿವಾಣ ಬೀಳಲಿದೆ. ಟೀಂ ಇಂಡಿಯಾದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಅಂತಾ ಹೇಳಿದ್ದರು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾತನಾಡಿ, ಹೊಸ ತೆರಿಗೆ ವ್ಯವಸ್ಥೆ ದೇಶದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದ್ದು, ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನದಿಂದಾಗಿ ಜಿಎಸ್‍ಟಿ ಜಾರಿ ಸುಲಭವಾಗಲಿದೆ. ವ್ಯಾಟ್ ಜಾರಿಯಾದ ಹೊಸದರಲ್ಲಿ ಎದುರಾದ ತೊಂದರೆಯೇ ಈಗಲೂ ಆಗಬಹುದು. ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ನಾನು ಕೂಡ ಜಿಎಸ್‍ಟಿ ಯಾತ್ರೆಯ ಭಾಗವಾಗಿದ್ದೆ. ದೇಶದ ಖ್ಯಾತ ಆರ್ಥಿಕ ತಜ್ಞರು, ಹಣಕಾಸು ಸಚಿವರ ಒಡನಾಟ ಲಭಿಸಿತು ಎಂದು ಮುಖರ್ಜಿ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಈ ವೇಳೆ ಮಾಜಿ ಪ್ರಧಾನಿ ಎಚ್ ಡಿ ದೇವೇ ಗೌಡ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *