ನರ್ಮದಾ ನದಿ ಬೋಟ್ ದುರಂತ‌ | ಊಟ ಮಾಡಲು ಆಗ್ತಿಲ್ಲ, ನಿದ್ರೆಯೂ ಬರುತ್ತಿಲ್ಲ – ಕಣ್ಣೀರಿಟ್ಟ ಚಾಲಕ

2 Min Read

ಭೋಪಾಲ್: ಮಧ್ಯಪ್ರದೇಶದ (Madhyar Pradesh) ಜಬಲ್‌ಪುರ ಬಳಿ ನರ್ಮದಾ ನದಿಯಲ್ಲಿ (Narmada River) ಸಂಭವಿಸಿದ ಕ್ರೂಸ್ ಬೋಟ್ ದುರಂತದಲ್ಲಿ (Boat Tragedy) 9 ಮಂದಿ ಸಾವನ್ನಪ್ಪಿದ್ದರ ಬಗ್ಗೆ ಬೋಟ್ ಚಾಲಕ ಮಹೇಶ್ ಪಟೇಲ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತಾಡಿರುವ ಅವರು, ಖಮರಿಯಾ ದ್ವೀಪದಿಂದ ಹೊರಟಾಗ ಹವಾಮಾನ ಸಾಮಾನ್ಯವಾಗಿತ್ತು. ನೀರಿನ ಮಧ್ಯಭಾಗ ತಲುಪಿದಾಗ ಗಾಳಿ ಬೀಸಲು ಪ್ರಾರಂಭಿಸಿತು. ಕೆಟ್ಟ ಹವಾಮಾನ ಇದೆ ವಾಪಸ್‌ ಆಗಿ ಎಂಬ ಯಾವ ಎಚ್ಚರಿಕೆ ಅಥವಾ ಸೂಚನೆ ನೀಡಲಿಲ್ಲ. ಗಾಳಿ ತೀವ್ರಗೊಂಡು ಅಲೆಗಳು ದೋಣಿಗೆ ಅಪ್ಪಳಿಸಲು ಪ್ರಾರಂಭಿಸಿದಾಗ, ದಡದ ಕಡೆಗೆ ವಾಪಸ್‌ ಆಗಲು ನಿರ್ಧರಿಸಿದೆ. ಇದನ್ನೂ ಓದಿ: ನರ್ಮದಾ ನದಿ ದೋಣಿ ದುರಂತದಲ್ಲಿ ಕರುಳು ಹಿಂಡುವ ದೃಶ್ಯ – 4 ವರ್ಷದ ಗಂಡು ಮಗು, ತಾಯಿ ಪರಸ್ಪರ ಅಪ್ಪಿಕೊಂಡೇ ಜಲಸಮಾಧಿ

ದೋಣಿಗೆ ನೀರು ಪ್ರವೇಶಿಸಲು ಪ್ರಾರಂಭಿಸಿದಾಗ ಪ್ರಯಾಣಿಕರು ಭಯಪಟ್ಟರು. ಪ್ರವಾಸಿಗರ ರಕ್ಷಣೆಗೆ ಮತ್ತೊಂದು ದೋಣಿಯನ್ನು ಕಳುಹಿಸಲು ಎಚ್ಚರಿಕೆ ನೀಡಲಾಯಿತು. ಬೋಟ್‌ನ ಎಂಜಿನ್‌ಗೆ ನೀರು ನುಗ್ಗಿ ದೋಣಿಯ ಮೇಲಿನ ನಿಯಂತ್ರಣ ಕಳೆದುಕೊಂಡಾಗ, ದಡ ತಲುಪಲು ಸಾಧ್ಯವಾಗುವುದಿಲ್ಲ ಎಂಬುದು ಗೊತ್ತಾಯಿತು. ಈ ವೇಳೆ ನಾನು ಪ್ರಯಾಣಿಕರ ರಕ್ಷಣೆಗೆ ಪ್ರಯತ್ನಿಸಿದೆ. 9 ಮಂದಿ ಸಾವನ್ನಪ್ಪಿದ್ದಕ್ಕೆ ನಾನು ಕ್ಷಮೆಯಾಚಿಸಿದ್ದೇನೆ ಎಂದಿದ್ದಾರೆ.

ದುರಂತದ ವೇಳೆ ದೋಣಿಯ ಸಿಬ್ಬಂದಿ ಲೈಫ್ ಜಾಕೆಟ್‌ಗಳನ್ನು ಆತುರದಿಂದ ಬಿಚ್ಚುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಪ್ರಯಾಣಿಕರು ಡ್ಯಾನ್ಸ್‌ ಮಾಡುತ್ತಾ ಸಂಭ್ರಮಿಸುತ್ತಿದ್ದರು. ಮೊದಲು ಅವರೆಲ್ಲ ಲೈಫ್ ಜಾಕೆಟ್‌ ನಿರಾಕರಿಸಿದ್ದರು ಎಂದು ಹೇಳಿದ್ದಾರೆ.

ಕ್ರೂಸ್ ಸಹಾಯಕ ಛೋಟೆಲಾಲ್ ಗೊಂಡ್ ಮತ್ತು ಟಿಕೆಟ್ ಕೌಂಟರ್ ಇನ್‌ಚಾರ್ಜ್ ಬ್ರಿಜೇಂದ್ರ ಹಾಗೂ ನನ್ನನ್ನು (ಮಹೇಶ್ ಪಟೇಲ್) ಕೆಲಸದಿಂದ ವಜಾಗೊಳಿಸಲಾಗಿದೆ. ಕೆಲಸದಿಂದ ಗಳಿಸಿದ ಕಡಿಮೆ ಸಂಬಳದಲ್ಲೇ ನಮ್ಮ ಕುಟುಂಬ ಜೀವನ ಮಾಡುತ್ತಿದೆ. ಈಗ ನಮ್ಮ ಕುಟುಂಬ ಸಮಸ್ಯೆ ಎದುರಿಸಲಿದೆ. ನಾನು ಆಘಾತಕ್ಕೊಳಗಾಗಿದ್ದೇನೆ, ಊಟ ಮಾಡಲು, ನಿದ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಮಧ್ಯಪ್ರದೇಶ ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿ, ಸೂಕ್ತ ತನಿಖೆ ನಡೆಸಲಾಗುವುದು. ಬದುಕುಳಿದವರಲ್ಲಿ ಒಬ್ಬರು ಎತ್ತಿರುವ ಲೈಫ್ ಜಾಕೆಟ್‌ಗಳ ಸಮಸ್ಯೆಯನ್ನು ಸಹ ತನಿಖೆ ಮಾಡಲಾಗುವುದು ಎಂದರು.

ನರ್ಮದಾ ನದಿಯಲ್ಲಿ ಗುರುವಾರ (ಏ.30) ಸಂಜೆ 6:15ರ ಸುಮಾರಿಗೆ ದೋಣಿ ಮಗುಚಿ ಒಂಬತ್ತು ಜನರು ಸಾವನ್ನಪ್ಪಿದ್ದರು. ಈ ವೇಳೆ 28 ಜನರನ್ನು ರಕ್ಷಿಸಲಾಗಿದೆ ಮತ್ತು ನಾಲ್ವರು ಕಾಣೆಯಾಗಿದ್ದಾರೆ. ಇದನ್ನೂ ಓದಿ: ನಿಮ್ಮ ಮೊಬೈಲ್‌ಗೆ ಅನಿರೀಕ್ಷಿತ ಮೆಸೇಜ್‌ ಬಂದ್ರೆ, ಸೈರನ್‌ ಮೊಳಗಿದ್ರೆ ಭಯಪಡಬೇಡಿ!

Share This Article