3 ತಿಂಗಳ ಮಗು ಬಿಟ್ಟು ಮಹಿಳೆ ಆತ್ಮಹತ್ಯೆ – ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

1 Min Read

ಬೆಂಗಳೂರು: ವರದಕ್ಷಿಣೆ (Dowry) ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬಳು (Housewife) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಹುಳಿಮಾವು (Hulimavu) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಬೆಟ್ಟದಾಸನಪುರ ಮೂಲದ ವಂದನಾ (23) ಮೃತಪಟ್ಟ ದುರ್ದೈವಿ. ಕಳೆದ ಮೂರು ವರ್ಷಗಳ ಹಿಂದೆ ಹುಳಿಮಾವಿನ ನಿವಾಸಿಯಾಗಿದ್ದ ವಿಕ್ರಂ ಶೇಷ ಎಂಬಾತನೊಂದಿಗೆ ವಂದನಾ ಅವರ ವಿವಾಹವಾಗಿತ್ತು. ಮದುವೆಯಾದ ಆರಂಭದಿಂದಲೂ ಹಣಕ್ಕಾಗಿ ಪೀಡಿಸುತ್ತಿದ್ದ ಧನಪಿಶಾಚಿ ಗಂಡ ವಿಕ್ರಂ ಹಾಗೂ ಆತನ ಕುಟುಂಬಸ್ಥರು, ವಂದನಾ ಅವರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಗುರುವಾರ ಸಂಜೆ ಹುಳಿಮಾವಿನ ಹಳೆ ಪೋಸ್ಟ್ ಆಫೀಸ್ ಸಮೀಪವಿರುವ ಮನೆಯಲ್ಲಿ ಅನುಮಾನಾಸ್ಪದವಾಗಿ ವಂದನಾ ಸಾವನ್ನಪ್ಪಿದ್ದಾರೆ. ಈ ದಂಪತಿಗೆ ಮೂರು ತಿಂಗಳ ಮಗು ಕೂಡ ಇದೆ. ಇದನ್ನೂ ಓದಿ: ಮೇ 14 ರಿಂದ 16 ರ ನಡುವೆ ಭಾರತಕ್ಕೆ ಮುಂಗಾರು ಪ್ರವೇಶ – ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸಾಧ್ಯತೆ

ಈ ಸಾವಿನ ಹಿಂದೆ ಪತಿ ಹಾಗೂ ಆತನ ಕುಟುಂಬದವರ ಕೈವಾಡವಿದೆ ಎಂದು ಮೃತಳ ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ. ಘಟನಾ ಸ್ಥಳದಲ್ಲಿ ಫ್ಯಾನ್‌ನ ರೆಕ್ಕೆಗಳಿಗೆ ಸೀರೆ ಸಿಲುಕಿಕೊಂಡಿದ್ದು, ಅಂತಹ ಸ್ಥಿತಿಯಲ್ಲಿ ನೇಣು ಬಿಗಿದುಕೊಳ್ಳಲು ಸಾಧ್ಯವೇ ಇಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕಿರುಕುಳದ ಸಂಬಂಧ ಪೊಲೀಸರು ರಾಜಿ ಸಂಧಾನಕ್ಕೆ ಪ್ರಯತ್ನಿಸಿದ್ದರು. ಆದರೆ ಕಠಿಣ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಸದ್ಯ ಬೆಟ್ಟದಾಸನಪುರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ವಂದನಾಳ ಗಂಡ ಹಾಗೂ ಆತನ ಕುಟುಂಬಕ್ಕೆ ಕಠಿಣ ಶಿಕ್ಷೆಯಾಗಬೇಕೆಂದು ಗ್ರಾಮಸ್ಥರಾದ ನಾರಾಯಣಸ್ವಾಮಿ ಹಾಗೂ ಚಾಮರಾಜು ಸೇರಿದಂತೆ ಹಲವರು ಆಗ್ರಹಿಸಿದ್ದು, ಹುಳಿಮಾವು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: 3 ವರ್ಷಗಳ ಹಿಂದೆ ಬೈಕ್ ಕಳ್ಳತನ – ಬೈಕ್ ಕಳ್ಕೊಂಡ ಟೆಕ್ಕಿಗೆ ದಂಡ ಕಟ್ಟುವಂತೆ ನೋಟಿಸ್

Share This Article