ಹನುಮಂತ ದೇವರ ಓಕುಳಿ ಜಾತ್ರೆಗೆ 600 ರೂ. ಹಣ ಕೊಡಲಿಲ್ಲ ಅಂತ 7 ಕುಟುಂಬಕ್ಕೆ ಊರಿಂದ ಬಹಿಷ್ಕಾರ

1 Min Read

ಬಾಗಲಕೋಟೆ: ಹನುಮಂತ ದೇವರ ಓಕುಳಿ ಜಾತ್ರೆಗೆ 600 ರೂ. ಪಟ್ಟಿ ಹಣ ಕೊಡದ ಕಾರಣಕ್ಕೆ ಏಳು ಕುಟುಂಬಗಳನ್ನ ಊರಿಂದ ಬಹಿಷ್ಕಾರ ಹಾಕಿರುವ ವಿಚಿತ್ರ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಹುಣಸಿಕಟ್ಟಿ ಗ್ರಾಮದ ಊರಿನ ಹಿರಿಯರು, ಹನುಮಂತ ದೇವರ ಜಾತ್ರೆಗೆ ಎಂದು ಪ್ರತೀ ಕುಟುಂಬಕ್ಕೆ 600 ರೂ. ಪಟ್ಟಿ ಹಾಕಿದ್ರು. ಆದರೆ, ಗ್ರಾಮದ ಏಳು ಕುಟುಂಬಗಳು ಪಟ್ಟಿ ಹಣ ಕೊಟ್ಟಿರಲಿಲ್ಲ. ಆ ಕಾರಣವನ್ನೇ ಮುಂದಿಟ್ಟುಕೊಂಡ ಹಿರಿಯರು, ಆ ಕುಟುಂಬಗಳನ್ನ ದೈವದಿಂದ‌ ಹೊರಗೆ ಇಟ್ಟಿದ್ದೇವೆ ಎಂದು ಡಂಗುರ ಸಾರಿಸಲಾಗಿದೆ.

ಯಲಪ್ಪ ಛಗಣ್ಣವರ, ಅಣ್ಣಪ್ಪ ಕಡಪಟ್ಟಿ, ಸಿದ್ದಪ್ಪ ಎಣ್ಣಿ, ಕರೆಪ್ಪ ಎಣ್ಣಿ, ಯಲ್ಲಪ್ಪ ಕುಲ್ಲೊಳ್ಳಿ, ಮಲ್ಲಪ್ಪ ಬಟಕುರ್ಕಿ, ರಾಮಪ್ಪ ಬಟಕುರ್ಕಿ ಬಹಿಷ್ಕಾರಕ್ಕೆ ಒಳಾಗದ ಕುಟುಂಬಗಳಾಗಿದ್ದು, ಇವರ ಮನೆಗೆ ಸ್ವಾಮಿಗಳು, ಪೂಜಾರಿಗಳು ಹೋಗುವ ಹಾಗಿಲ್ಲ. ಅವರ ಮನೆ ಕಾರ್ಯಗಳಿಗೆ ಯಾರೂ ಹೋಗುವಂತಿಲ್ಲ. ಅಲ್ಲದೇ ಕಿರಾಣಿ ಅಂಗಡಿಯವರು ಬಹಿಷ್ಕಾರಕ್ಕೆ ಒಳಗಾದ ಏಳು ಕುಟುಂಬಗಳಿಗೆ ಏನೂ ಕೊಡುವ ಹಾಗಿಲ್ಲ ಎಂದು ಡಂಗುರ ಸಾರಿಸಿದ್ದಾರೆ.

ಎ.7 ರಂದು ಊರಿನ ಓಕಳಿ ಜಾತ್ರೆ ಇದ್ದರೆ, ಎ.5 ರಂದು ಡಂಗುರ ಸಾರಲಾಗಿತ್ತು. ಆಗ ಬಹಿಷ್ಕಾರ ಹಾಕಿದ್ದನ್ನು ಪ್ರಶ್ನಿಸಿದ ಯಲ್ಲಪ್ಪ ಛಗಣ್ಣವರ, ಬಹಿಷ್ಕಾರ ಹಾಕಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಜಮಖಂಡಿ ತಹಸೀಲ್ದಾರ್, ಎಸಿ, ಡಿಸಿ ಅವರಿಗೆ ಪತ್ರ ಬರೆದಿದ್ದಾರೆ. ನಮಗೆ ಊರಲ್ಲಿ ಬಹಿಷ್ಕಾರ ಹಾಕಿದ್ದಕ್ಕೆ ಅಪಮಾನವಾಗಿದೆ. ನಮ್ಮ ಗೌರವಕ್ಕೆ ಧಕ್ಕೆಯಾಗಿದೆ. ಡಂಗುರ ಸಾರಿದವರು ಹಾಗೂ ಸಾರಿಸಿದವರ ಮೇಲೆ‌ ಕಾನೂನು ಕ್ರಮ ಆಗಬೇಕು. ಅವರಿಗೆ ಶಿಕ್ಷೆಯಾಗಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಅಧಿಕಾರಿಗಳು ಊರಿಗೆ ಬಂದು ಸಭೆ ನಡೆಸಿ ಎಲ್ಲರನ್ನೂ ಸಮಾಧಾನ ಮಾಡಿ ಹೋಗಿದ್ದಾರೆ.

Share This Article