ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿ – ಕಾರ್ಯಪಾಲಕ ಎಂಜಿನಿಯರ್‌ ಅಮಾನತ್ತಿಗೆ ಸಿಎಂ ಆದೇಶ

1 Min Read

-ಗೋಡೆಗೆ ಹಾನಿಯಾಗುತ್ತೆ ಅಂತ ಗೊತ್ತಿದ್ರೂ ಮಣ್ಣು ಸುರಿದಿದ್ದು ಯಾಕೆ? ತರಾಟೆಗೆ ತೆಗೆದುಕೊಂಡ ಸಿಎಂ

ಬೆಂಗಳೂರು: ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿಯಾಗಿದ್ದ ಪ್ರಕರಣದಲ್ಲಿ ಸಂಬಂಧಪಟ್ಟ ಎಂಜಿನಿಯರ್ ಅನ್ನು ಕೂಡಲೇ ಅಮಾನತು ಮಾಡಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆದೇಶ ಹೊರಡಿಸಿದ್ದಾರೆ.

ಬೌರಿಂಗ್ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಜನರು ಸಾವು ಹಾಗೂ ಮಳೆ ಅವಾಂತ ಸಂಬಂಧ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸಿಎಂ ಸಭೆ ನಡೆಸಿದ್ದರು. ಈ ವೇಳೆ ಸಿಎಂ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗೋಡೆಗೆ ಹಾನಿ ಆಗಲಿದೆ ಅಂತ ಗೊತ್ತಿದ್ದರೂ ಕೂಡ ಕಾಮಗಾರಿ ಮಣ್ಣನ್ನು ಅಲ್ಲಿ ಸುರಿದಿದ್ದು ಯಾಕೆ ಎಂದು ಪ್ರಶ್ನಿಸಿ, ಸಂಬಂಧಪಟ್ಟ ಕಾರ್ಯಪಾಲಕ ಎಂಜಿನಿಯರ್ ಅನ್ನು ಅಮಾನತು ಮಾಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಬೌರಿಂಗ್‌ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಸಾವು – ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಇದೇ ವೇಳೆ ಮಣ್ಣು ಸುರಿದಿದ್ದರೂ ಕೂಡ ನೀವು ಯಾಕೆ ನೋಡಿಕೊಳ್ಳಲಿಲ್ಲ ಎಂದು ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಸಂಬಂಧ ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರಿಗೆ ನೋಟಿಸ್ ನೀಡಲು ಸಿಎಂ ಆದೇಶಿಸಿದ್ದಾರೆ.

ನಿನ್ನೆ (ಏ.25) ಬೆಂಗಳೂರಿನಲ್ಲಿ ಉಂಟಾದ ಮಳೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, 250ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಮುಂಗಾರು ಮಳೆ ಪ್ರಾರಂಭವಾಗುವ ಮೊದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬೆಂಗಳೂರಿನ ಐದೂ ವಲಯಗಳ ಆಯುಕ್ತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಒಣಗಿರುವ ಅಪಾಯಕಾರಿ ಮರಗಳ ರೆಂಬೆಗಳನ್ನು ಕತ್ತರಿಸಬೇಕು. ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ರಾಜಕಾಲುವೆಗಳಲ್ಲಿ ಹೂಳು ತೆಗೆಯುವುದು, ಪ್ರವಾಹ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಮಳೆಯಿಂದ ರಸ್ತೆಯಲ್ಲಿ ಬಿದ್ದಿರುವ ಕಸ, ರೆಂಬೆಗಳನ್ನು ಕೂಡಲೇ ತೆರವು ಮಾಡಲು ಸೂಚಿಸಿದರು. ಅಂಡರ್ ಪಾಸ್‌ಗಳಲ್ಲಿ ಮಳೆ ನೀರು ನಿಲ್ಲದಂತೆ ಹಾಗೂ ಜನ ಅಂಡರ್ ಪಾಸ್ ಬಳಸದಂತೆ ಕೂಡಲೇ ಬ್ಯಾರಿಕೇಡ್ ಹಾಕಿ ಎಂದು ಸಿಎಂ ಸೂಚಿಸಿದರು.

ಸಭೆ ಬಳಿಕ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, ಜಿಬಿಎ ಅಧಿಕಾರಿಗಳಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಮಳೆ ಎದುರಿಸಲು ಯಾವೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಅಂತ ಸೂಚಿಸಿದ್ದಾರೆ. ವಿಪತ್ತು ನಿರ್ವಹಣೆ ಇನ್ನಷ್ಟು ತೀವ್ರಗೊಳಿಸಲು ಸೂಚಿಸಿದ್ದಾರೆ. ನಿನ್ನೆಯ ದುರ್ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೂ ಸೂಚಿಸಲಾಗಿದೆ. ತನಿಖೆ ಬಳಿಕ ವರದಿ ಬಂದ ನಂತರ ಮತ್ತಷ್ಟು ಅಧಿಕಾರಿಗಳ ವಿರುದ್ಧ ಕ್ರಮ ಆಗಲಿದೆ. ಶಿಥಿಲವಾದ ಗೋಡೆ, ಕಾಂಪೌಂಡ್‌ಗಳ ಆಡಿಟ್ ಮಾಡಲು ಹೇಳಿದ್ದಾರೆ. ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಜಿಬಿಎ ಆಯುಕ್ತರು ಸಭೆಯಲ್ಲಿ ಭಾಗಿಯಾಗಿದ್ದರು.

ನಿನ್ನೆ (ಏ.29) ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಬಳಿಕ ಬೌರಿಂಗ್‌ ಆಸ್ಪತ್ರೆಗೆ ತೆರಳಿ ಗಾಯಾಳುಗಳು ಆರೋಗ್ಯ ವಿಚಾರಿಸಿದ ಸಿಎಂ ಉಚಿತ ಚಿಕಿತ್ಸೆ ನೀಡುವಂತೆ ತಿಳಿಸಿದ್ದರು.

ಬಳಿಕ ಮಾಧ್ಯಗಳೊಂದಿಗೆ ಮಾತನಾಡಿದ ಸಿಎಂ, ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 7 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರು ಸ್ಟೇಬಲ್‌ ಆಗಿ ಇದ್ದಾರೆ, ಎಲ್ಲರಿಗೂ ಉಚಿತ ಚಿಕಿತ್ಸೆ ಕೊಡಲು ಹೇಳಿದ್ದೇನೆ ಎಂದರಲ್ಲದೇ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಸುರಿದ ಭೀಕರ ಮಳೆಗೆ 7 ಬಲಿ – ಗೋಡೆ ಕುಸಿತಕ್ಕೆ ಕಾರಣ ಏನು?

Share This Article