ಅವಳ ನೋವು, ಅವಮಾನ ಊಹಿಸಿ – ಅತ್ಯಾಚಾರ ಕೇಸಲ್ಲಿ 20 ವಾರ ಮೀರಿದ ಗರ್ಭಪಾತಕ್ಕೆ ಅವಕಾಶ ನೀಡಿ: ಕೇಂದ್ರಕ್ಕೆ ಸುಪ್ರೀಂ ತರಾಟೆ

3 Min Read

– ಗರ್ಭಪಾತದ ಅಂತಿಮ ನಿರ್ಧಾರವು ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಮೇಲಿದೆ

ನವದೆಹಲಿ: ಅವಳ ನೋವು, ಅವಮಾನ ಊಹಿಸಿ ನೋಡಿ, 20 ವಾರಗಳಿಗಿಂತ ಹೆಚ್ಚಿನ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಕಾನೂನನ್ನು ತಿದ್ದುಪಡಿ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಕೇಂದ್ರ ಸರ್ಕಾರವನ್ನು (Central Govt) ತರಾಟೆಗೆ ತೆಗೆದುಕೊಂಡಿದೆ.

15 ವರ್ಷದ ಬಾಲಕಿಗೆ ತನ್ನ 30 ವಾರಗಳ ಗರ್ಭದಾರಣೆಯನ್ನು ಅಂತ್ಯಗೊಳಿಸಲು ನೀಡಿದ ಆದೇಶವನ್ನು ರದ್ದುಗೊಳಿಸುವಂತೆ ಏಮ್ಸ್ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ.ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಅತ್ಯಾಚಾರದಿಂದಾಗಿ ಗರ್ಭಧಾರಣೆ ಸಂಭವಿಸಿದಾಗ ಅದಕ್ಕೆ ಯಾವುದೇ ಸಮಯ ಮಿತಿ ಇರಬಾರದು ಮತ್ತು ಕಾಲಕ್ಕೆ ತಕ್ಕಂತೆ ಕಾನೂನು ಬದಲಾಗಬೇಕು. ಅಂತಿಮ ನಿರ್ಧಾರವು ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಮೇಲಿರುವುದರಿಂದ, ಸಂತ್ರಸ್ತೆಯ ಪೋಷಕರಿಗೆ ಈ ವಿಷಯದ ಬಗ್ಗೆ ಸೂಕ್ತ ಸಮಾಲೋಚನೆ ನೀಡುವಂತೆ ಏಮ್ಸ್‌ಗೆ ನಿರ್ದೇಶನ ನೀಡಿದೆ.ಇದನ್ನೂ ಓದಿ: ಒಟಿಪಿ ಬರಲ್ಲ ಆದ್ರೂ ಬ್ಯಾಂಕ್‌ ಖಾತೆ ಓಪನ್‌| AI, ಡೀಪ್‌ಫೇಕ್‌ ಬಳಸಿ ಆಧಾರ್‌ ಬೈಪಾಸ್‌ – ಕೊನೆಗೂ ಹೈಟೆಕ್‌ ಕಳ್ಳರು ಅರೆಸ್ಟ್‌

ಇದು ಮಕ್ಕಳ ಮೇಲಿನ ಅತ್ಯಾಚಾರದ ಪ್ರಕರಣವಾಗಿದ್ದು, ಗರ್ಭಪಾತವನ್ನು ಅನುಮತಿಸದಿದ್ದರೆ ಸಂತ್ರಸ್ತೆ ಜೀವನಪರ್ಯಂತ ಮಾನಸಿಕ ಆಘಾತವನ್ನು ಅನುಭವಿಸಬೇಕಾಗುತ್ತದೆ. ತಾಯಿಗೆ ಯಾವುದೇ ರೀತಿಯ ಶಾಶ್ವತ ದೈಹಿಕ ಹಾನಿಯಾಗದಿದ್ದರೆ, ಗರ್ಭಪಾತ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.

ವಿಚಾರಣೆಯ ಸಮಯದಲ್ಲಿ, ದೇಶದಲ್ಲಿ ದತ್ತು ಪಡೆಯಲು ಸಾಕಷ್ಟು ಮಕ್ಕಳಿವೆ. ಅನೇಕ ಮಕ್ಕಳನ್ನು ಬೀದಿಗೆ ಬಿಡಲಾಗಿದೆ. ಇದರಲ್ಲಿ ಮಾಫಿಯಾ ಕೂಡ ನಡೆಯುತ್ತಿದೆ. ಇದು 15 ವರ್ಷದ ಬಾಲಕಿಯೊಬ್ಬಳ ಅನಗತ್ಯ ಗರ್ಭಧಾರಣೆಯಾಗಿದೆ. ಯಾವುದೇ ವ್ಯಕ್ತಿಯ ಮೇಲೆ ಬೇಡದ ಗರ್ಭದಾರಣೆಯನ್ನು ಹೇರಲು ಸಾಧ್ಯವಿಲ್ಲ. ಅವಳಿನ್ನು ಮಗು. ಅವಳು ಓದಬೇಕು, ಆದರೆ ನಾವು ಅವಳನ್ನು ತಾಯಿಯಾಗಲು ಒತ್ತಾಯಿಸುತ್ತಿದ್ದೇವೆ. ಅವಳು ಅನುಭವಿಸಿದ ನೋವು ಮತ್ತು ಅವಮಾನವನ್ನು ಊಹಿಸಿ ಎಂದು ಪೀಠ ಹೇಳಿದೆ.ಇದನ್ನೂ ಓದಿ: ದ್ರಾಕ್ಷಿಗೆ ಬಂಪರ್ ಬೆಲೆ – ರೈತರ ಮೊಗದಲ್ಲಿ ನಗು, ಕೈಗೆ ಕಾಂಚಾಣ ತಂದ ಬೆಳೆ

ಏಮ್ಸ್ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಈ ಹಂತದಲ್ಲಿ ಗರ್ಭಪಾತ ಸಾಧ್ಯವಿಲ್ಲ ಎಂದು ವಾದಿಸಿದರು. 30 ವಾರಗಳ ಹೊತ್ತಿಗೆ, ಭ್ರೂಣವು ಜೀವಂತ ಮಗುವಾಗಿ ಬೆಳೆದಿರುತ್ತದೆ. ಇದಲ್ಲದೆ, ಅಪ್ರಾಪ್ತ ತಾಯಿಯು ಜೀವಿನಪರ್ಯಂತ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು ಅಥವಾ ಗರ್ಭಧರಿಸಲು ಸಾಧ್ಯವಾಗದೇ ಇರಬಹುದು. ಜನನದ ನಂತರ ಮಗುವನ್ನು ದತ್ತು ಪಡೆಯಲು ನೀಡಬಹುದು ಎಂದು ತಿಳಿಸಿದರು.

ಗರ್ಭಾವಸ್ಥೆಯನ್ನು ಅಂತ್ಯಗೊಳಿಸುವ ನಿರ್ಧಾರವು ಬಲಿಪಶು ಮತ್ತು ಆಕೆಯ ಪೋಷಕರ ಇಚ್ಛೆಯನ್ನು ಅವಲಂಬಿಸಿರುತ್ತದೆ ಮತ್ತು ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಅವರಿಗೆ ಏಮ್ಸ್ ಸಹಾಯ ಮಾಡುವುದು ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಇದೇ ವೇಳೆ ಯಾವುದೇ ನ್ಯಾಯಾಲಯವು ಯಾವುದೇ ಮಹಿಳೆಯನ್ನು, ವಿಶೇಷವಾಗಿ ಅಪ್ರಾಪ್ತ ವಯಸ್ಕಳನ್ನು ಗರ್ಭಿಣಿಯಾಗುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಆಕೆಯ ಇಚ್ಛೆಗೆ ವಿರುದ್ಧವಾಗಿ ಗರ್ಭಿಣಿಯಾಗುವಂತೆ ಒತ್ತಾಯಿಸುವುದು ಆಕೆಯ ಸ್ವಾತಂತ್ರ‍್ಯವನ್ನು ಉಲ್ಲಂಘಿಸುವುದಲ್ಲದೆ, ಆಕೆಗೆ ಗಂಭೀರ ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಆಘಾತವನ್ನುಂಟು ಮಾಡುತ್ತದೆ ಎಂದು ತಿಳಿಸಿದೆ.

ಏ.24ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಯಾವುದೇ ಮಹಿಳೆ, ವಿಶೇಷವಾಗಿ ಅಪ್ರಾಪ್ತ ವಯಸ್ಕಳು, ತನ್ನ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲಾಗುವುದಿಲ್ಲ ಎಂದು ಹೇಳಿತ್ತು. ಈ ತೀರ್ಪಿನೊಂದಿಗೆ, ಏಳು ತಿಂಗಳಿಗಿಂತ ಹೆಚ್ಚು ವಾರಗಳಗಳ ಗರ್ಭಿಣಿಯಾಗಿರುವ ಅಪ್ರಾಪ್ತ ವಯಸ್ಕಳು ವೈದ್ಯಕೀಯ ಗರ್ಭಪಾತವನ್ನು ಪಡೆಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.ಇದನ್ನೂ ಓದಿ: ಪಶ್ಚಿಮ ಬಂಗಾಳ ಕಲ್ಲಿದ್ದಲು ಹಗರಣ| I-PAC ನಿರ್ದೇಶಕನಿಗೆ ಜಾಮೀನು ಮಂಜೂರು

Share This Article