ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನರ್ರಚನೆಯ(Cabinet Reshuffle) ಕಸರತ್ತು ಮತ್ತೆ ತೀವ್ರಗೊಂಡಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ್(Ashok Pattan) ಅವರು ಮೇ 6 ಅಥವಾ 7 ರಂದು ಮತ್ತೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್ ಪಟ್ಟಣ್, “ಸಂಪುಟದಲ್ಲಿ ನಮಗೂ ಅವಕಾಶ ನೀಡಬೇಕು ಎಂದು ಈ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharege) ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಚರ್ಚಿಸಿದ್ದೆವು. ನಮಗೆ ಅವಕಾಶ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ. ಮೇ 4ರ ಫಲಿತಾಂಶದ ನಂತರ ಈ ಪ್ರಕ್ರಿಯೆ ಚುರುಕುಗೊಳ್ಳಲಿದ್ದು, ಮೇ ಅಂತ್ಯದ ವೇಳೆಗೆ ಸಂಪುಟ ಪುನರ್ ರಚನೆಯಾಗುವ ವಿಶ್ವಾಸವಿದೆ” ಎಂದರು. ಇದನ್ನೂ ಓದಿ: ಸಚಿವ ಡಿ.ಸುಧಾಕರ್ ಆರೋಗ್ಯದ ಬಗ್ಗೆ ಜೆಡಿಎಸ್ ಅನುಮಾನ – ದಯವಿಟ್ಟು ಸತ್ಯ ಹೇಳಿ ಅಂತ ಅಗ್ರಹ
ಮೇ 4 ಫಲಿತಾಂಶ ಮುಗಿದ ಬಳಿಕ ಪ್ರಕ್ರಿಯೆ ಶುರು ಮಾಡೋದಾಗಿ ಸುರ್ಜೇವಾಲ ಹೇಳಿದ್ದಾರೆ. ಮೇ ಅಂತ್ಯದ ಒಳಗೆ ಸಂಪುಟ ಪುನರ್ ರಚನೆ ಮಾಡುವ ಭರವಸೆ ಇದೆ. ಸುರ್ಜೇವಾಲ 4 ಜನ ಹಿರಿಯರನ್ನ ಬಿಟ್ಟು 30 ಜನ ಸಚಿವರನ್ನ ಬದಲಾವಣೆ ಮಾಡುವುದಾಗಿ ನಮ್ಮ ಬಳಿ ಹೇಳಿದ್ದರು. ನಮಗೆ 30 ಸ್ಥಾನ ಬೇಡ, ಕನಿಷ್ಠ 25 ಮಂದಿಗಾದರೂ ಸಚಿವ ಸ್ಥಾನ ನೀಡಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂಬುದು ನಮ್ಮ ಒತ್ತಾಯ ಎಂದು ಬಹಿರಂಗಪಡಿಸಿದರು.
ರಾಜ್ಯದಲ್ಲಿ ನಾಲ್ಕು ಬಾರಿ ಗೆದ್ದ ಸುಮಾರು 40 ಮಂದಿ ಶಾಸಕರಿದ್ದೇವೆ. ಕಳೆದ ಬಾರಿಯೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದು ದೆಹಲಿಗೆ ಹೋಗಿದ್ದೆವು. ಸಚಿವ ಸ್ಥಾನ ಸಿಗುವವರೆಗೂ, ನಾವು ಪ್ರಮಾಣ ವಚನ ಸ್ವೀಕರಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪಟ್ಟಣ್ ಎಚ್ಚರಿಕೆ ನೀಡಿದ್ದಾರೆ.

