ಸೇಲಂ: ಕೆಎಸ್ಆರ್ಟಿಸಿ ಬಸ್ಸೊಂದು (KSRTC Bus) ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದ ಘಟನೆ ತಮಿಳುನಾಡಿನ ಸೇಲಂ(Salem) ಸಮೀಪ ಸಂಭವಿಸಿದೆ.
ಬೆಂಗಳೂರಿನಿಂದ ಮಧುರೈಗೆ (Bengaluru To Madurai) ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಪಲ್ಲಕ್ಕಿ ಬಸ್ ಬೆಳಗಿನ ಜಾವ 3 ಗಂಟೆಯ ವೇಳೆಗೆ ಸೇಲಂ ತಲುಪಿದಾಗ ಈ ಅವಘಡ ಸಂಭವಿಸಿದೆ. ಏಕಾಏಕಿ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಯಿಂದ ಪಕ್ಕಕ್ಕೆ ಸರಿದಿದೆ. ಕೂಡಲೇ ಎಚ್ಚೆತ್ತುಕೊಂಡ ಚಾಲಕ ಬದಿಯಲ್ಲಿದ್ದ ಮಣ್ಣಿನ ಗುಡ್ಡದ ಮೇಲೆ ಹತ್ತಿಸಿ ಬಸ್ ನಿಲ್ಲಿಸಿದ್ದಾನೆ.
ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಿಂದ ಆತಂಕಕ್ಕೊಳಗಾಗಿದ್ದ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: 100% ಮುಸ್ಲಿಂ ಮತದಾರರ ವಾರ್ಡ್ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಗೆ ಗೆಲುವು
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪರ್ಯಾಯ ಬಸ್ಸಿನ ಮೂಲಕ ಪ್ರಯಾಣಿಕರನ್ನು ಮದುರೈಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ.

