ಬ್ಯಾಂಕ್ ಖಾತೆಯಲ್ಲಿದ್ದ ಹಣ ಪಡೆಯಲು ಸಾಕ್ಷಿ ಕೇಳಿದ ಬ್ಯಾಂಕ್ – ಮೃತ ತಂಗಿ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ಹೊತ್ತುತಂದ ಅಣ್ಣ

1 Min Read

ಭುವನೇಶ್ವರ: ಮೃತ ಸಹೋದರಿಯ ಠೇವಣಿ ಹಣವನ್ನು ಪಡೆಯಲು ವ್ಯಕ್ತಿಯೊಬ್ಬ ತನ್ನ ತಂಗಿ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ಹೊತ್ತು ತಂದ ಹೃದಯವಿದ್ರಾವಕ ಘಟನೆ ಒಡಿಶಾದಲ್ಲಿ (Odisha) ನಡೆದಿದೆ.

ಬುಡಕಟ್ಟು ಜನಾಂಗದ ಜಿತು ಮುಂಡಾ ಎಂಬ ವ್ಯಕ್ತಿ, ತನ್ನ ಮೃತ ಸಹೋದರಿಯ ಠೇವಣಿ ಹಣ ಪಡೆಯಲು ಬ್ಯಾಂಕ್‌ಗೆ ತೆರಳಿದ್ದ. ಈ ವೇಳೆ, ಅಕೌಂಟ್‌ ಹೋಲ್ಡರ್‌ರನ್ನೇ ಕರೆತರಬೇಕು ಎಂದು ಬ್ಯಾಂಕ್‌ ಸಿಬ್ಬಂದಿ ಹೇಳಿದ್ದರು. ಆಕೆ ಮೃತಪಟ್ಟಿದ್ದಾಳೆಂದು ಹೇಳಿದರೂ ಸಿಬ್ಬಂದಿ ನಂಬಲಿಲ್ಲ. ಇದರಿಂದ ಬೇಸತ್ತ ವ್ಯಕ್ತಿ ಕೊನೆಗೆ ತನ್ನ ತಂಗಿಯ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ಹೊತ್ತು ತಂದಿದ್ದಾನೆ. ಇದನ್ನೂ ಓದಿ: ಮತ್ತೊಂದು `ಮಹಾʼ ಲೈಂಗಿಕ ದೌರ್ಜನ್ಯ ಪ್ರಕರಣ – 350 ಅಶ್ಲೀಲ ವಿಡಿಯೋ ಪತ್ತೆ, ಕಾಮುಕ ಅಂದರ್‌

ಬಟ್ಟೆಯಲ್ಲಿ ಅಸ್ಥಿಪಂಜರ ಸುತ್ತಿಕೊಂಡು ಹೆಗಲ ಮೇಲೆ ಒತ್ತು ಬಿಸಿಲಿನಲ್ಲೇ 3 ಕಿಮೀ ನಡೆದು ಬ್ಯಾಂಕ್‌ಗೆ ತಂದಿದ್ದಾನೆ. ಈ ದೃಶ್ಯವನ್ನು ಕಂಡು ಬ್ಯಾಂಕ್‌ ಸಿಬ್ಬಂದಿ ಶಾಕ್‌ ಆಗಿದ್ದಾರೆ. ಅಸ್ಥಿಪಂಜರವನ್ನು ನೋಡಿದ ಬ್ಯಾಂಕ್ ಅಧಿಕಾರಿಗಳು ಭಯಭೀತರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ತಂಡ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿತು. ವ್ಯಕ್ತಿಗೆ ಮನವರಿಕೆ ಮಾಡಿದ ಮೇಲೆ ಅಸ್ಥಿಪಂಜರವನ್ನು ಮತ್ತೆ ಸ್ಮಾಶಾನಕ್ಕೆ ತೆಗೆದುಕೊಂಡು ಹೋಗಿ ಹೂತಿದ್ದಾನೆ.

ಜಿತು ಸಹೋದರಿ ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಅವರು ಮಲ್ಲಿಪಾಸಿಯ ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು 19,300 ರೂಪಾಯಿ ಠೇವಣಿ ಹೊಂದಿರುವ ಖಾತೆಯನ್ನು ಹೊಂದಿದ್ದರು. ತಂಗಿ ಮರಣದ ನಂತರ ಹಣವನ್ನು ಹಿಂಪಡೆಯಲು ಜಿತು ಬ್ಯಾಂಕ್‌ಗೆ ಹೋಗಿದ್ದ. ಆದರೆ, ಖಾತೆಯು ಆತನ ಸಹೋದರಿಯ ಹೆಸರಿನಲ್ಲಿರುವುದರಿಂದ ಹಣ ನೀಡಲು ಬ್ಯಾಂಕ್‌ ಅಧಿಕಾರಿಗಳು ನಿರಾಕರಿಸಿದ್ದರು. ಹಣ ಹಿಂಪಡೆಯಲು ಸಾವಿನ ಪುರಾವೆ ಮತ್ತು ಇತರ ದಾಖಲೆಗಳನ್ನು ಸಂಗ್ರಹಿಸಲು ಬ್ಯಾಂಕ್ ಅಧಿಕಾರಿ ಹೇಳಿದ್ದರು. ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ತೊಡಗಿದ್ದ 9,400 ವಾಟ್ಸಪ್‌ ಖಾತೆಗಳು ಡಿಲೀಟ್‌

ಜಿತು ಅನಕ್ಷರಸ್ಥನಾಗಿದ್ದರಿಂದ ಈ ವಿಚಾರ ಅರ್ಥವಾಗಲಿಲ್ಲ. ಮರಣ ಪ್ರಮಾಣಪತ್ರವನ್ನು ಪುರಾವೆಯಾಗಿ ತರುವ ಬದಲು, ಅವನು ಸಮಾಧಿ ಸ್ಥಳವನ್ನು ಅಗೆದು ತಂಗಿಯ ಅಸ್ಥಿಪಂಜರವನ್ನು ಚೀಲದಲ್ಲಿ ತುಂಬಿಕೊಂಡು ಬ್ಯಾಂಕ್ ಅಧಿಕಾರಿಗೆ ಪುರಾವೆಯಾಗಿ ತೋರಿಸಲು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Share This Article