ಮಹಾ ಸಚಿವ ನಿತೇಶ್ ರಾಣೆಗೆ 1 ತಿಂಗಳು ಜೈಲು ಶಿಕ್ಷೆ

2 Min Read

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ನಾರಾಯಣ ರಾಣೆ(Nitesh Rane) ಅವರಿಗೆ ಸ್ಥಳೀಯ ಕೋರ್ಟ್‌ (Court) 1 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಎಂಜಿನಿಯರ್‌ ಮೇಲೆ ಕೆಸರು ಸುರಿದ ಪ್ರಕರಣಕ್ಕೆ (Mud Attack Case) ಸಂಬಂಧಿಸಿದಂತೆ ಸಿಂಧುದುರ್ಗದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ನಿತೇಶ್ ರಾಣೆ ಅವರನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 504 (ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ದೋಷಿ ಎಂದು ಘೋಷಿಸಿದೆ. ಇದನ್ನೂ ಓದಿ: ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಕೇಸ್‌ – ಉಗ್ರ ಶಾರಿಕ್‌ಗೆ 10 ವರ್ಷ ಜೈಲು ಶಿಕ್ಷೆ

court order law

ನ್ಯಾಯಾಲಯ ಒಂದು ತಿಂಗಳ ಜೈಲು ಶಿಕ್ಷೆಯ ಜೊತೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಮೊತ್ತದಲ್ಲಿ 50 ಸಾವಿರ ರೂ.ಗಳನ್ನು ಸಂತ್ರಸ್ತ ಎಂಜಿನಿಯರ್‌ಗೆ ಪರಿಹಾರವಾಗಿ ನೀಡಲು ಆದೇಶಿಸಿದೆ. ಶಾಸಕರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಸಾರ್ವಜನಿಕ ಸೇವಕರ ಘನತೆಗೆ ಧಕ್ಕೆ ತರುವಂತೆ ವರ್ತಿಸಬಾರದು ತೀರ್ಪಿನಲ್ಲಿ ಉಲ್ಲೇಖಿಸಿದೆ.

ನ್ಯಾಯಾಲಯವು ಈ ಶಿಕ್ಷೆಯನ್ನು ಪ್ರಕಟಿಸಿದ ಬಳಿಕ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಇದರಿಂದಾಗಿ ನಿತೇಶ್ ರಾಣೆ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಸಿಕ್ಕಿದ್ದು, ಸದ್ಯಕ್ಕೆ ಬಂಧನದಿಂದ ಪಾರಾಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ 29 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಖುಲಾಸೆಗೊಳಿಸಿದೆ. ಇದನ್ನೂ ಓದಿ: ಇದು ನನ್ನ ಸತ್ಯಾಗ್ರಹ – ಹಿಂದೆ ಸರಿಯಲ್ಲ ಎಂದು ಜಡ್ಜ್‌ ಹೇಳಿದ ಬೆನ್ನಲ್ಲೇ ವಿಚಾರಣೆಗೆ ಬರಲ್ಲ ಎಂದ ಕೇಜ್ರಿವಾಲ್‌

ಏನಿದು ಪ್ರಕರಣ?
ಮುಂಬೈ-ಗೋವಾ ಹೆದ್ದಾರಿಯ ಕಂಕಾವ್ಲಿ ಭಾಗದಲ್ಲಿ ರಸ್ತೆಯ ಉದ್ದಕ್ಕೂ ದೊಡ್ಡ ಗುಂಡಿಗಳಿದ್ದವು ಮತ್ತು ಮಳೆಯಿಂದಾಗಿ ರಸ್ತೆ ಜಲಾವೃತಗೊಂಡು ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿತ್ತು. ರಸ್ತೆ ಅಗಲೀಕರಣ ಕಾಮಗಾರಿ ಅತ್ಯಂತ ಕಳಪೆಯಾಗಿ ನಡೆಯುತ್ತಿದೆ ಮತ್ತು ಸರಿಯಾಗಿ ಚರಂಡಿ ವ್ಯವಸ್ಥೆ ಮಾಡದ ಕಾರಣ ಪ್ರತಿದಿನ ಸಂಚರಿಸುತ್ತಿದ್ದ ಸಾವಿರಾರು ಜನರಿಗೆ ಸಮಸ್ಯೆಯಾಗುತ್ತಿತ್ತು. ದೂರು ನೀಡಿದ್ದರೂ ಸಮಸ್ಯೆ ಪರಿಹಾರ ಮಾಡದ್ದಕ್ಕೆ ಸಿಟ್ಟಾದ ರಾಣೆ 2019 ರಲ್ಲಿ ಅಧಿಕಾರಿಗಳಿಗೆ ಪಾಠ ಕಲಿಸಲು ಬೆಂಬಲಿಗರ ಜೊತೆ ಸೇರಿ NHAI ಎಂಜಿನಿಯರ್ ಮೇಲೆ ಕೆಸರು ಎರಚಿ ಪ್ರತಿಭಟನೆ ನಡೆಸಿದ್ದರು.

Share This Article