ಪಾಕಿಗೆ ಅರಾಗ್ಚಿ ಆಗಮನ – ಸಂಧಾನಕ್ಕೆ ಮೊದಲೇ ಅಮೆರಿಕ ಜೊತೆ ನೇರ ಮಾತುಕತೆ ಇಲ್ಲವೆಂದ ಇರಾನ್‌

1 Min Read

ಇಸ್ಲಾಮಾಬಾದ್‌: ಇರಾನ್‌- ಅಮೆರಿಕ (Iran-USA) ಮಧ್ಯೆ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಕೌಂಟ್‌ಡೌನ್‌ ಆರಂಭವಾಗಿದೆ. ಸಂಧಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ(Abbas Araqchi) ನೇತೃತ್ವದ ನಿಯೋಗ ಪಾಕಿಸ್ತಾನಕ್ಕೆ (Pakistan) ಆಗಮಿಸಿದೆ.

ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಗೆ ಶುಕ್ರವಾರ ತಡರಾತ್ರಿ ಆಗಮಿಸಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರನ್ನು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಷಾಕ್ ದಾರ್, ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಸ್ವಾಗತಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರು ಶನಿವಾರ ಪಾಕಿಸ್ತಾನಕ್ಕೆ ಆಗಮಿಸುವ ನಿರೀಕ್ಷೆಯಿದೆ.

ನೇರ ಮಾತುಕತೆ ಇಲ್ಲ:
ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸುವ ಸಾಧ್ಯತೆಯನ್ನು ಇರಾನ್ ಸದ್ಯಕ್ಕೆ ತಿರಸ್ಕರಿಸಿದೆ. ಇರಾನ್ ತನ್ನ ಅಭಿಪ್ರಾಯಗಳನ್ನು ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ತಿಳಿಸಲಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಹಾರ್ಮುಜ್ ಜಲಸಂಧಿಯ(Strait of Hormuz) ದಿಗ್ಬಂಧನ ತೆರವುಗೊಳಿಸುವುದು ಮತ್ತು ಕದನ ವಿರಾಮವನ್ನು(Ceasefire) ಶಾಶ್ವತಗೊಳಿಸುವ ನಿಟ್ಟಿನಲ್ಲಿ ಈ ಮಾತುಕತೆಗಳು ನಿರ್ಣಾಯಕವಾಗಿವೆ.
ಸಂಧಾನದ ಭಾಗವಾಗಿ ಇರಾನ್ ತನ್ನ ಮೇಲಿರುವ ಆರ್ಥಿಕ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಒತ್ತಾಯಿಸುತ್ತಿದೆ

ಸದ್ಯಕ್ಕೆ ಪಾಕಿಸ್ತಾನವು ಎರಡೂ ರಾಷ್ಟ್ರಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದು, ಈ ವಾರಾಂತ್ಯದಲ್ಲಿ ಇಸ್ಲಾಮಾಬಾದ್‌ನಲ್ಲಿ ಈ ರಾಜತಾಂತ್ರಿಕ ಪ್ರಕ್ರಿಯೆಗಳು ಮುಂದುವರಿಯಲಿವೆ.

ಈ ಉನ್ನತ ಮಟ್ಟದ ಭೇಟಿಗಳ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಭಾರೀ ಭದ್ರತೆ ಕಲ್ಪಿಸಲಾಗಿದೆ. ಸರಿಸುಮಾರು 10,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Share This Article