ನವದೆಹಲಿ: ರಾಜ್ಯಸಭಾ (Rajya Sabha) ಸದಸ್ಯ ಹರಿವಂಶ್ ನಾರಾಯಣ್ ಸಿಂಗ್ (Harivansh Narayan Singh) ಅವರು ರಾಜ್ಯಸಭಾ ಉಪಾಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆ ಅವಿರೋಧ ಆಯ್ಕೆಯಾಯಿತು.
ಏಪ್ರಿಲ್ 9 ರಂದು ಹರಿವಂಶ್ ಅವರ ಅವಧಿ ಮುಗಿದ ನಂತರ ಈ ಹುದ್ದೆ ಖಾಲಿಯಾಗಿತ್ತು. ರಾಜ್ಯಸಭೆ ಅಧ್ಯಕ್ಷ ಸಿಪಿ ರಾಧಾಕೃಷ್ಣನ್, ರಾಜ್ಯ ಪರಿಷತ್ತಿನ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ ನಿಯಮ 7 ರ ಅಡಿಯಲ್ಲಿ ಚುನಾವಣೆಯ ದಿನಾಂಕವಾಗಿ ನಿಗದಿಪಡಿಸಿದರು. ಪ್ರಸ್ತಾವನೆಗಳ ನೋಟಿಸ್ಗಳನ್ನು ಸಲ್ಲಿಸಲು ಗುರುವಾರ ಮಧ್ಯಾಹ್ನ 12 ಗಂಟೆಯ ಗಡುವು ಇತ್ತು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಫೋನ್ ಕಾಲ್ – ಹಾರ್ಮುಜ್ನಲ್ಲಿ ಭದ್ರತಾ ಕಾಳಜಿ ಕುರಿತು ಚರ್ಚೆ
ಮೂರನೇ ಬಾರಿಗೆ ಉಪಸಭಾಪತಿಯಾಗಿ ಆಯ್ಕೆಯಾದ ಹರಿವಂಶ್ ನಾರಾಯಣ್ ಸಿಂಗ್ ಅವರನ್ನು ಸದನದ ಪರವಾಗಿ ನಾನು ಅಭಿನಂದಿಸುತ್ತೇನೆ. ಇದು ಸದನವು ನಿಮ್ಮ ಮೇಲೆ ಇಟ್ಟಿರುವ ಆಳವಾದ ನಂಬಿಕೆಯನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಹರಿವಂಶ್ ಅವರ ಪುನರಾಯ್ಕೆಗೆ ಅಭಿನಂದನೆ ಸಲ್ಲಿಸಿದರು.
ವಿರೋಧ ಪಕ್ಷದ ಅಭ್ಯರ್ಥಿ ಇಲ್ಲದ ಕಾರಣ ಚುನಾವಣೆಯು ಅವಿರೋಧವಾಗಿ ನಡೆಯಿತು. ರಾಜ್ಯಸಭೆ ಸದನದ ನಾಯಕ ಜೆ.ಪಿ ನಡ್ಡಾ ಮಂಡಿಸಿದ ಮೊದಲ ನಿರ್ಣಯವನ್ನು ಸದನವು ಧ್ವನಿಮತದ ಮೂಲಕ ಅಂಗೀಕರಿಸಿತು. ನಂತರ ಸಭಾಪತಿಗಳು ಹರಿವಂಶ್ ಅವರನ್ನು ಆಯ್ಕೆಯಾಗಿ ಘೋಷಿಸಿದರು. ಹರಿವಂಶ್ ಈಗಾಗಲೇ 2 ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದು ಅವರ 3 ನೇ ಅವಧಿಯಾಗಲಿದೆ.

