ಆದಿಚುಂಚನಗಿರಿ ಮಠ ಆಧ್ಯಾತ್ಮಿಕ ಪರಂಪರೆ ಹೊಂದಿದೆ: ಮೋದಿ ಬಣ್ಣನೆ

2 Min Read

– ಕಾಲಭೈರವನ ದರ್ಶನ ಪಡೆದಿದ್ದು ನನ್ನ ಸೌಭಾಗ್ಯ
– ಸಕ್ಕರೆ ನಾಡು ಮಧುರ ಮಂಡ್ಯ ಎಂದು ಕೊಂಡಾಡಿದ ‘ನಮೋ’

ಮಂಡ್ಯ: ಆದಿಚುಂಚನಗಿರಿ ಮಠ (Sri Adichunchanagiri Math) ಆಧ್ಯಾತ್ಮಿಕ ಪರಂಪರೆ ಹೊಂದಿದೆ. ಮಠವು ನೈತಿಕ ಮೌಲ್ಯಗಳಿಂದ ದಾರಿದೀಪವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದರು.

ಶ್ರೀಗುರು ಭೈರವೈಕ್ಯ ಮಂದಿರ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ ಕನ್ನಡದಲ್ಲೇ ಮಾತನ್ನು ಆರಂಭಿಸಿದರು. ಕರ್ನಾಟಕದ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತನಾಡಿದರು. ಇದನ್ನೂ ಓದಿ: ಸಣ್ಣ ಮಠವನ್ನು ದೊಡ್ಡ ಮರವನ್ನಾಗಿ ಬೆಳೆಸಿದ್ದು ಬಾಲಗಂಗಾಧರನಾಥರು: ಹೆಚ್‌ಡಿಕೆ ಸ್ಮರಣೆ

ಕಾಲಭೈರನ ದರ್ಶನ ಪಡೆದುಕೊಂಡಿದ್ದೇನೆ. ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿದ್ದೇನೆ. ನಿಮ್ಮೆಲ್ಲರ ದರ್ಶನ ಪಡೆದುಕೊಂಡಿದ್ದೇನೆ. ಶಬ್ದದಲ್ಲಿ ಈ ಭಾವವನ್ನು ಹೇಳಲು ಸಾಧ್ಯವಿಲ್ಲ. ಪ್ರತಿ ಸಲ ಕರ್ನಾಟಕಕ್ಕೆ ಬಂದಾಗ ಪ್ರೇರಣೆ ಸಿಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಶ್ರೀ ಆದಿಚುಂಚನಗಿರಿ ಮಠದಂತಹ ಆಧ್ಯಾತ್ಮಿಕ ಕೇಂದ್ರ ಈ ರಾಜ್ಯದಲ್ಲಿದೆ. ಇವೆಲ್ಲವೂ ಸಮಾಜಕ್ಕೆ ದಾರಿಯನ್ನು ತೋರಿಸುತ್ತಿದೆ. ಜಗತ್ತಿನಲ್ಲಿ ಎಲ್ಲೂ ನಮ್ಮ ತರಹದ ದೊಡ್ಡ ಪರಂಪರೆ ಇಲ್ಲ. ಈ ಮಠದಲ್ಲಿ ನಿರಂತರತೆ ರೂಪದಲ್ಲಿ ಪರಂಪರೆ ಮುಂದುವರಿದಿದೆ. ಬಾಲಗಂಗಾಧರನಾಥ ಸ್ವಾಮೀಜಿಯವರಂತಹ ಮಹಾತ್ಮರು ಈ ಮಣ್ಣನಲ್ಲಿ ಹುಟ್ಟಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಮೋದಿ ಮಾತನಾಡಿದರು.

ಸ್ವಾಮೀಜಿಯ ಶರೀರ ನಮ್ಮದೊಂದಿಗಿಲ್ಲ. ಅವರ ಆಶೀರ್ವಾದ ನಮ್ಮೊಂದಿಗೆ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ದೂರದೃಷ್ಟಿಯ ಹೆಜ್ಜೆಯನ್ನು ಇಟ್ಟಿದ್ದಾರೆ. ಇಂದು ನಮ್ಮ ಸರ್ಕಾರ ಇದೇ ರೀತಿಯ ದೃಷ್ಟಿಯಿಂದ ಕೆಲಸ ಮಾಡುತ್ತಿದೆ. ಭೈರವೈಕ್ಯ ಮಂದಿರ ಉದ್ಘಾಟನೆ ಮಾಡಿ ನಿರ್ಮಲಾನಂದ ಸ್ವಾಮೀಜಿ ಆಶೀರ್ವಾದ ಪಡೆದಿದ್ದು ನನ್ನ ಸೌಭಾಗ್ಯ ಎಂದು ಕೃತಜ್ಞತೆ ಸಲ್ಲಿಸಿದರು.

ಸ್ವಾಮೀಜಿಗಳು ಕೇವಲ ಮನುಷ್ಯರ ಉದ್ಧಾರ ಮಾಡ್ತಿಲ್ಲ. ಜೀವ ಸಂಕುಲದ ರಕ್ಷಣೆ ಮಾಡ್ತಿದ್ದಾರೆ. ನವಿಲಿನ ರಕ್ಷಣೆಯನ್ನು ಮಾಡ್ತಿದ್ದಾರೆ. ಅದಕ್ಕಾಗಿ ನವಿಲಿನ ಕಲಾಕೃತಿಯ ಉಡುಗೊರೆ ನೀಡಿದ್ದಾರೆ. ಸುಬ್ರಹ್ಮಣ್ಯನ ವಾಹನ ನವಿಲು. ನವಿಲು ನಮ್ಮಲ್ಲೂ ಇದೆ. ಅವುಗಳು ನನ್ನ ದೋಸ್ತಿ ಕೂಡ. ಭೈರವೈಕ್ಯ ಮಂದಿರ ಕೇವಲ ಕಟ್ಟಡ ಮಾತ್ರವಲ್ಲ, ಭಾವನೆಗಳ ಸಾಕಾರ. ಸೇವೆ ಸಾಧನ, ಪ್ರೇರಣೆಯ ಕೇಂದ್ರ ಆಗಿದೆ. ಇಲ್ಲಿ ಅನ್ನ ಅಕ್ಷರ, ಆರೋಗ್ಯ, ಅರಣ್ಯ, ಆಕಳು, ಅನುಗ್ರಹ, ಅನುಕಂಪದ ಸಿದ್ಧಾಂತದ ಮೇಲೆ ಕೆಲಸ ಮಾಡ್ತಿದೆ. ಇದಕ್ಕಾಗಿ ನಾವು ಸಾಮೂಹಿಕ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಆದಿಚುಂಚನಗಿರಿ ಮಠದ ಗುರುಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ

ನಮ್ಮ ಮಂಡ್ಯದ ನೀರಿನ ಮಹತ್ವ ಗೊತ್ತಿದೆ. ಈ ಕ್ಷೇತ್ರ ಕಾವೇರಿಯ ಪವಿತ್ರ ಭೂಮಿ. ನಾವು ನೀರನ್ನು ಉಳಿಸುವ ಕೆಲಸ ಮಾಡಬೇಕು. ಕಾವೇರಿಗಾಗಿ ನಿಮ್ಮ ಅಮ್ಮನ ಹೆಸರಿನಲ್ಲಿ ಕೋಟಿ ಗಿಡಗಳನ್ನು ನೆಡಲು ಮೋದಿ ಕರೆ ನೀಡಿದರು. ನಿಮ್ಮ ಗ್ರಾಮದಲ್ಲಿ ಸ್ವಚ್ಛತೆ ಮಾಡಿ. ಸ್ವದೇಶಿ ಉತ್ಪಾದನೆಯನ್ನು ಬೆಂಬಲಿಸಿ. ‘ವೋಕಲ್ ಫಾರ್ ಲೋಕಲ್’ಗಾಗಿ ಬದುಕಿ. ಸ್ವದೇಶಿ ಟೂರಿಸಂ ಅನ್ನು ಬೆಂಬಲಿಸಿ. ಕೆಮಿಕಲ್ ಮುಕ್ತ ಕೃಷಿಯನ್ನು ಮಾಡಿ ಎಂದು ತಿಳಿಸಿದರು.

ನವಿಲು ಆಕೃತಿ ಉಡುಗೊರೆ
ಭೈರವೈಕ್ಯ ಮಂದಿ ಉದ್ಘಾಟಿಸಿದ ಬಳಿಕ ಪ್ರಧಾನಿ ಮೋದಿ ಅವರನ್ನು ನಿರ್ಮಲಾನಂದನಾಥ ಶ್ರೀಗಳು ಗೌರವಿಸಿದರು. ರೇಷ್ಮೆ ಶಾಲು ಹಾಕಿ, ಹಾರ ಹಾಕಿ ಅಭಿನಂದನೆ ಸಲ್ಲಿಸಿದರು. ಬಳಿಕ ಮೋದಿ ಅವರಿಗೆ ನವಿಲಿನ ಆಕೃತಿ ಉಡುಗೊರೆ ನೀಡಿದರು. ವೇದಿಕೆಯಲ್ಲಿ ಸ್ವಾಮಿ ಪರಮಾತ್ಮಾನಂದ ಸರಸ್ವತಿ ಜೀ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಸಚಿವ ಚಲುವರಾಯಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಉಪಸ್ಥಿತರಿದ್ದರು.

Share This Article