ಅಮೆರಿಕ ದಿಗ್ಭಂಧನಕ್ಕೆ ಸೆಡ್ಡು – ಹಾರ್ಮುಜ್‌ ದಾಟಿದ ಇರಾನ್‌ ಬಂದರಿನಿಂದ ಬಂದ 2 ಹಡಗು

1 Min Read

ಟೆಹ್ರಾನ್: ಅಮೆರಿಕದ (America) ಮಿಲಿಟರಿ ದಿಗ್ಬಂಧನದ‌ ನಡುವೆಯೂ ಸೋಮವಾರ ಕನಿಷ್ಠ ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಹಾದು ಹೋಗಿವೆ.

ಲೈಬೀರಿಯಾ ಧ್ವಜ ಹೊತ್ತ ಬೃಹತ್ ನೌಕೆ ಕ್ರಿಸ್ಟಿಯಾನ್ನಾ, ಇರಾನಿನ (Iran) ‘ಬಂದರ್‌ ಇಮಾಮ್ ಖೊಮೇನಿ’ ಬಂದರಿನಲ್ಲಿ ಜೋಳವನ್ನು ಇಳಿಸಿತು. ನಂತರ ಹಾರ್ಮುಜ್ ಜಲಸಂಧಿ ಮೂಲಕ ಸಾಗಿತು. ಬಳಿಕ ಇರಾನ್‌ನ ಲಾರಕ್ ದ್ವೀಪವನ್ನು ದಾಟಿತು.

ಕೊಮೊರೊಸ್ ಧ್ವಜವನ್ನು ಹೊಂದಿದ್ದ 2ನೇ ಹಡಗು ಟ್ಯಾಂಕರ್ ಎಲ್ಪಿಸ್, ಲಾರಕ್ ದ್ವೀಪದ ಬಳಿ ಇತ್ತು. ನಂತರ ಹಾರ್ಮುಜ್ ಜಲಸಂಧಿ‌ ದಾಟಿದೆ. ಇದು 31,000 ಟನ್ ಮೆಥನಾಲ್ ಅನ್ನು ಹೊತ್ತು ಮಾರ್ಚ್ 31 ರಂದು ಇರಾನಿನ ಬಂದರಿನ ಬುಶೆಹರ್‌ನಿಂದ ಹೊರಟಿತ್ತು. ಇದನ್ನೂ ಓದಿ: ಹಾರ್ಮುಜ್‌ಗೆ ಬಂದ್ರೆ ಕತೆ ಮುಗಿಸಿಬಿಡ್ತೀನಿ – ದಿಗ್ಬಂಧನ ಮುರಿಯುವ ಯಾವ್ದೇ ಪ್ರಯತ್ನ ಬೇಡ: ಟ್ರಂಪ್‌ ಬಿಗ್‌ ವಾರ್ನಿಂಗ್‌

‘ಇರಾನಿನ ಬಂದರುಗಳು ಮತ್ತು ಕರಾವಳಿ ಪ್ರದೇಶಗಳನ್ನು ಪ್ರವೇಶಿಸುವ ಅಥವಾ ನಿರ್ಗಮಿಸುವ ಎಲ್ಲಾ ರಾಷ್ಟ್ರಗಳ ಹಡಗುಗಳನ್ನು ದಿಗ್ಬಂಧನ ಗುರಿಯಾಗಿಸುತ್ತದೆ’ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿತ್ತು.

ಲಾರಾಕ್ ದ್ವೀಪದ ದಕ್ಷಿಣಕ್ಕೆ ಇರಾನಿನ ಅನುಮೋದಿತ ಪರಿಶೀಲನಾ ಮಾರ್ಗದ ಮೂಲಕ ಸೋಮವಾರದಿಂದ ಮಂಗಳವಾರದ ವರೆಗೆ ರಾತ್ರಿಯಿಡೀ ಚೀನಾದ ಟ್ಯಾಂಕರ್, ರಿಚ್ ಸ್ಟಾರಿ ಕೂಡ ಜಲಸಂಧಿಯನ್ನು ದಾಟಿತು. ಹಡಗು 31,500 ಟನ್ ಮೆಥನಾಲ್ ಅನ್ನು ಸಾಗಿಸುತ್ತಿತ್ತು. ಇದನ್ನೂ ಓದಿ: 7 ವರ್ಷಗಳಲ್ಲಿ ಫಸ್ಟ್‌ ಟೈಮ್‌ – ಭಾರತಕ್ಕೆ ಬಂತು ಇರಾನಿನ 20 ಲಕ್ಷ ಬ್ಯಾರಲ್‌ ಕಚ್ಚಾ ತೈಲ

ಈಚೆಗೆ ನಡೆದ ಶಾಂತಿ ಮಾತುಕತೆ ವಿಫಲವಾದ ನಂತರ, ಇರಾನಿನ ಬಂದರುಗಳು ಮತ್ತು ಕೊಲ್ಲಿಯ ಕರಾವಳಿ ಪ್ರದೇಶಗಳನ್ನು ಪ್ರವೇಶಿಸುವ ಅಥವಾ ನಿರ್ಗಮಿಸುವ ಹಡಗುಗಳನ್ನು ದಿಗ್ಬಂಧನಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದರು. ದಿಗ್ಬಂಧನವನ್ನು ವಿರೋಧಿಸುವ ಯಾವುದೇ ಇರಾನಿಯನ್‌ ಅಟ್ಯಾಕ್‌ ಬೋಟ್‌ಗಳನ್ನು ನಾಶಪಡಿಸಲಾಗುವುದು ಎಂದು ಟ್ರಂಪ್‌ ಎಚ್ಚರಿಸಿದ್ದರು.

Share This Article