ನೀವು ಆರ್‌ಎಸ್‌ಎಸ್‌ ಸಂಯೋಜಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀರಿ: ದೆಹಲಿ ಹೈಕೋರ್ಟ್‌ನಲ್ಲಿ ಕೇಜ್ರಿವಾಲ್‌ ವಾದ

2 Min Read

ನವದೆಹಲಿ: ಹೈಕೋರ್ಟ್‌ ನ್ಯಾ. ಸ್ವರ್ಣ ಕಾಂತ ಶರ್ಮಾ(Justice Swarana Kanta Sharma) ಅವರು ಆರ್‌ಎಸ್‌ಎಸ್ (RSS) ಮತ್ತು ಬಿಜೆಪಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ  ಅವರು ಈ ಕೇಸಿನ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಅರವಿಂದ್ ಕೇಜ್ರಿವಾಲ್ (Arvind Kejriwal) ದೆಹಲಿ ಹೈಕೋರ್ಟ್‌ನಲ್ಲಿ (Delhi High Court) ಮನವಿ ಮಾಡಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣದ (Delhi Excise Policy Case) ವಿಚಾರಣೆ ಇಂದು ನ್ಯಾ. ಸ್ವರ್ಣ ಕಾಂತ ಶರ್ಮಾ ಅವರ ಪೀಠದ ಮುಂದೆ ನಡೆಯಿತು. ಈ ವೇಳೆ ತಮ್ಮ ಮೇಲೆ ದಾಖಲಾಗಿದ ಪ್ರಕರಣಕ್ಕೆ ಸಂಬಂಧಿಸಿದ ವಾದಿಸಿದ ಅವರು, ನ್ಯಾಯಮೂರ್ತಿಗಳು ಆರ್‌ಎಸ್‌ಎಸ್ ಸಂಯೋಜಿತ ‘ಅಧಿವಕ್ತ ಪರಿಷತ್’ ಕಾರ್ಯಕ್ರಮಗಳಲ್ಲಿ ನಾಲ್ಕು ಬಾರಿ ಭಾಗವಹಿಸಿದ್ದಾರೆ. ಇದರಿಂದಾಗಿ ತನಗೆ ಈ ಪ್ರಕರಣದಲ್ಲಿ ನ್ಯಾಯ ಸಿಗುವ ಬಗ್ಗೆ ಆತಂಕವಿದೆ ಎಂದು ಹೇಳಿದರು.

ಒಂದು ವೇಳೆ ನ್ಯಾಯಾಧೀಶರು ನಿರ್ದಿಷ್ಟ ಸಿದ್ಧಾಂತದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರೆ ವಿರೋಧ ಸಿದ್ಧಾಂತದ ವ್ಯಕ್ತಿಗೆ ನ್ಯಾಯ ಸಿಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಕೇಳಿದ್ದಾರೆ.

ನಾನು ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ವಿರುದ್ಧವಾದ ರಾಜಕೀಯ ಪಕ್ಷದಲ್ಲಿದ್ದೇನೆ. ಹಾಗಾಗಿ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನ್ಯಾಯಮೂರ್ತಿಗಳಿಂದ ನನಗೆ ನಿಷ್ಪಕ್ಷಪಾತ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

ವಿಚಾರಣೆ ಮುಗಿಯುವ ಮುನ್ನವೇ ನ್ಯಾಯಾಲಯವು ನನ್ನನ್ನು ‘ದೋಷಿ’ ಅಥವಾ ‘ಭ್ರಷ್ಟ’ ಎಂಬಂತೆ ಪರಿಗಣಿಸುತ್ತಿದೆ ಎಂಬ ಭಾವನೆ ಮೂಡುತ್ತಿದೆ ಎಂದು ಅವರು ವಾದಿಸಿದರು.

ಕೇಜ್ರಿವಾಲ್ ಅವರ ಈ ಮನವಿಯನ್ನು ಸಿಬಿಐ ವಿಷಾದನೀಯ ಎಂದು ಕರೆದಿದೆ. ನ್ಯಾಯಾಧೀಶರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಮಾತ್ರಕ್ಕೆ ಅವರು ಪಕ್ಷಪಾತಿಗಳಾಗುವುದಿಲ್ಲ ಎಂದು ಸಿಬಿಐ ಪರ ವಕೀಲರು ವಾದಿಸಿದ್ದಾರೆ.

ಕೇಜ್ರಿವಾಲ್‌ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನನ್ನ ಜೀವನದಲ್ಲಿ ಮೊದಲ ಬಾರಿಗೆ ವಿಚಾರಣೆಯಿಂದ ಹಿಂದೆ ಸರಿಯುವಂತೆ ಅರ್ಜಿ ಸಲ್ಲಿಕೆಯಾಗಿದೆ. ನಾನು ಈಗ ಕೇವಲ ಹಿಂದೆ ಸರಿಯುವ (recusal) ಅರ್ಜಿಯ ಬಗ್ಗೆ ಮಾತ್ರ ವಿಚಾರಣೆ ನಡೆಸುತ್ತಿದ್ದೇನೆ. ಪ್ರಕರಣದ ಗುಣದೋಷಗಳ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು. ವಾದ ಆಲಿಸಿದ ನಂತರ ಕೇಜ್ರಿವಾಲ್ ಅವರ ಮನವಿಗೆ ಸಂಬಂಧಿಸಿದಂತೆ ಆದೇಶವನ್ನು ಕಾಯ್ದಿರಿಸಿದ್ದಾರೆ.

ಏನಿದು ಪ್ರಕರಣ?
ಈ ಹಿಂದೆ ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಅಬಕಾರಿ ಹಗರಣದಲ್ಲಿ ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಆ ಅರ್ಜಿಯ ವಿಚಾರಣೆಯನ್ನು ಈಗ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ನಡೆಸುತ್ತಿದ್ದಾರೆ.

Share This Article