ಪೀಠಕ್ಕೆ ಬರುವ ಗುರುಕಾಣಿಕೆ ಶ್ವಾಸಕೇಂದ್ರಕ್ಕೆ ವರ್ಗಾವಣೆ – ವಂಚನಾನಂದ ಶ್ರೀಗಳ ಉಚ್ಚಾಟನೆ ಟ್ರಸ್ಟ್‌ ಕೊಟ್ಟ 10 ಕಾರಣಗಳೇನು?

2 Min Read

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ (Harihara Panchamasali Mutt) ಲೆಕ್ಕ ಕೊಡಿ ಅಭಿಯಾನ ತೀವ್ರಗೊಂಡ ಬೆನ್ನಲ್ಲೇ ವಚನಾನಂದ ಶ್ರೀಗಳನ್ನು (Vachanananda Swamiji) ಪೀಠದಿಂದ ಉಚ್ಚಾಟನೆ ಮಾಡಲು ಟ್ರಸ್ಟಿಗಳು ಸಭೆಯಲ್ಲಿ ನಿರ್ಧರಿಸಿದ್ದಾರೆ. 10 ಕಾರಣಗಳನ್ನು ನೀಡಿ ಉಚ್ಚಾಟನೆ ಮಾಡಲಾಗಿದ್ದು, ಮಠದ ಕಚೇರಿಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ.

ಟ್ರಸ್ಟಿಗಳು ಹೇಳೋದೇನು?
ಸ್ವಾಮೀಜಿ ಶ್ವಾಸ ಪೀಠದಲ್ಲಿ ಇರಬೇಕು, ಇಲ್ಲವೇ ಹರಿಹರ ಪಂಚಮಸಾಲಿ ಪೀಠದಲ್ಲಿ ಇರಬೇಕು. ಆದರೆ ಎರಡೂ ಕಡೆ ಇರುವುದು ಸೂಕ್ತವಲ್ಲ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಈಗಾಗಲೇ ಮಾರ್ಚ್ 24ಕ್ಕೆ ಗಡುವು ನೀಡಿದ್ದೆವು. ಇದರ ಬಗ್ಗೆ ಯಾವುದೇ ಮಾಹಿತಿ ನೀಡದೇ, ಎರಡು ಕಡೆ ಇರುವುದರಿಂದ ತೆಗೆದುಹಾಕಲಾಗಿದೆ. ಸ್ವಾಮಿಜಿಗಳು ಗೌರವಯುತವಾಗಿ ಮಠವನ್ನು ಬಿಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಪಂಚಮಸಾಲಿ ಗುರುಪೀಠದ ಟ್ರಸ್ಟಿ ಬಾವಿ ಬೆಟ್ಟಪ್ಪ ಹೇಳಿದ್ದಾರೆ. ಇದನ್ನೂ ಓದಿ: ಹಿಂದೂಗಳು ಅಂತ ಹೇಳಬಾರದು, ಪಂಚಮಸಾಲಿಗಳು ಪ್ರಬಲರಾಗುತ್ತಿರುವುದ್ದಕ್ಕೆ ಟಾರ್ಗೆಟ್‌: ವಚನಾನಂದ ಸ್ವಾಮೀಜಿ

ಭಕ್ತರ ಆರೋಪವೇನು?
ಸರ್ಕಾರದಿಂದ ಬಂದ ಅನುದಾನ, ಭಕ್ತರ ದೇಣಿಗೆ ಹಣವನ್ನು ಟ್ರಸ್ಟಿಗಳು ಗೋಲ್‍ಮಾಲ್ ಮಾಡಿದ್ದಾರೆ ಎಂದು ಆರೋಪಿಸಿ ಭಕ್ತರು ಲೆಕ್ಕ ಕೊಡಿ ಅಭಿಯಾನ ನಡೆಸಿದ್ದರು. 2008ರಿಂದ ಬಂದ ಅನುದಾನ ಹಾಗೂ ದೇಣಿಗೆಯನ್ನು ಪೀಠದ ಪ್ರಧಾನ ಧರ್ಮದರ್ಶಿ ಉಮಾಪತಿ ಹಾಗೂ ಟ್ರಸ್ಟಿ ಚಂದ್ರಶೇಖರ್ ಪೂಜಾರ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಠದ ಭಕ್ತರು ಆರೋಪಿಸಿದ್ದಾರೆ.

ಭಕ್ತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಟ್ರಸ್ಟಿಗಳೇ ಸ್ವಾಮೀಜಿಗಳಿಗೆ ಗೇಟ್‍ಪಾಸ್ ಕೊಟ್ಟಿದ್ದು, ತೀವ್ರ ಜಟಾಪಟಿಗೆ ಕಾರಣವಾಗಿದೆ. ಸ್ವಾಮೀಜಿಗಳ ಪದಚ್ಯುತಿ ಮಾಡುತ್ತಿದ್ದಂತೆ ಭಕ್ತರು ಟ್ರಸ್ಟಿಗಳಿಗೆ ಚಪ್ಪಲಿ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ.

ಶ್ರೀಗಳು ಹೇಳಿದ್ದೇನು?
ಈ ವೇಳೆ ಪ್ರತಿಕ್ರಿಯಿಸಿದ ಶ್ರೀಗಳು, ಗುರುಪೀಠದ ಟ್ರಸ್ಟಿಗಳೇ ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ. ಸರ್ಕಾರದ 10 ಕೋಟಿ ರೂ. ಅನುದಾನದಲ್ಲೂ ಅವ್ಯವಹಾರ ಆಗಿದೆ. ಸರ್ಕಾರ ಕೊಟ್ಟ ಅನುದಾನ, ದೇಣಿಗೆ ಹಣ ಲೂಟಿಯಾಗಿದೆ. ಅವ್ಯವಹಾರ ಮರೆಮಾಚಲು ನನ್ನ ಉಚ್ಚಾಟನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ – ಟ್ರಸ್ಟಿಗಳ ಸಭೆಯಲ್ಲಿ ನಿರ್ಧಾರ

ಉಚ್ಚಾಟನೆ ಯಾಕೆ?
1. ಬೆಂಗಳೂರಿನ `ಶ್ವಾಸ ಕೇಂದ್ರ’ ಆರಂಭಿಸಿ, ಹರಿಹರದ ಮಠದಿಂದ ದೂರ, ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.
2. ಪೀಠಕ್ಕೆ ಬರುವ ಗುರುಕಾಣಿಕೆ, ಭಕ್ತರ ಕಾಣಿಕೆ ಗೌಪ್ಯವಾಗಿ ಶ್ವಾಸಕೇಂದ್ರಕ್ಕೆ ಬಳಕೆ ಮಾಡುತ್ತಿದ್ದಾರೆ.
3. ವೀರಶೈವ ಲಿಂಗಾಯತ ಸಂಪ್ರದಾಯ ಪಾಲಿಸದೆ, ಅಘೋರಿ, ವಾಮಾಚಾರ ಆಚರಣೆ ಮಾಡುತ್ತಿದ್ದಾರೆ.
4. ಕಾವಿಧರಿಸಿಯೂ ಸಭೆಗಳಲ್ಲಿ ಅತ್ಯಂತ ಕೀಳು ಪದ ಬಳಕೆ ಮಾಡುತ್ತಾರೆ.
5. ಮಕ್ಕಳಿಗೆ ಶೈಕ್ಷಣಿಕ, ಧಾರ್ಮಿಕ ಮಾರ್ಗದರ್ಶನ ಬದಲು ಮಸಾಜ್‍ಗೆ ಬಳಕೆ ಮಾಡಿಕೊಳ್ಳುತ್ತಾರೆ.
6. ಭಕ್ತರ ಬದಲಿಗೆ ವಿಐಪಿಗಳಿಗಷ್ಟೇ ಸಮಯ ಕೊಡುತ್ತಾರೆ.
7. ಟ್ರಸ್ಟ್ ವತಿಯಿಂದ ಪೂಜಾ ಕಾರ್ಯಗಳಿಗೆ ಉಚಿತವಾಗಿ ನಿಯೋಜಿತಗೊಂಡವರ ಜೊತೆ ಅನುಚಿತ ವರ್ತನೆ ಮಾಡುತ್ತಾರೆ.
8. ಮಠದ ವಾಸ್ತವ್ಯ ಬದಲಿಗೆ ಐಷಾರಾಮಿ ನಗರಗಳ ಪಂಚತಾರಾ ಹೊಟೇಲ್‍ಗಳಲ್ಲಿ ವಾಸ್ತವ್ಯ ಮಾಡುತ್ತಾರೆ.
9. ತಿಂಗಳುಗಟ್ಟಲೇ ವಿದೇಶ ಪ್ರವಾಸಕ್ಕೆ ತೆರಳುತ್ತಾರೆ.
10. ಪರಿತ್ಯಾಗಿಗಳಾಗಿ ಅಧ್ಯಾತ್ಮಿಕ ಚಿಂತನೆ ಬದಲಿಗೆ ಸುಂದರವಾಗಿ ಕಾಣುವ ಹಂಬಲ ಅವರಿಗಿದೆ. ತಲೆ, ಗಡ್ಡಕ್ಕೆ ಬಣ್ಣ ಹಚ್ಚುತ್ತಾರೆ ಎಂದು ಆರೋಪಿಸಲಾಗಿದೆ.

Share This Article