IPL 2026 | ಸಂಜು ಸಿಡಿಲಬ್ಬರದ ಶತಕ – ಹ್ಯಾಟ್ರಿಕ್‌ ಸೋಲಿನ ಬಳಿಕ ಗೆಲುವಿನ ಖಾತೆ ತೆರೆದ ಚೆನ್ನೈ

0 Min Read

ಚೆನ್ನೈ: ಸಂಜು ಸ್ಯಾಮ್ಸನ್‌ ಸಿಡಿಲಬ್ಬರದ ಶತಕದ ಬ್ಯಾಟಿಂಗ್‌ ಹಾಗೂ ಜೇಮೀ ಓವರ್ಟನ್ ಕರಾರುವಕ್‌ ಬೌಲಿಂಗ್‌ ದಾಳಿ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 23 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ 19ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲಿನ ಬಳಿಕ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಚೆಪಾಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 213 ರನ್‌ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶಿಸಲು ಮುಂದಾಯಿತು. ಆರಂಭಿಕರಾದ ಪಥುಮ್‌ ನಿಸ್ಸಾಂಕ ಹಾಗೂ ಕನ್ನಡಿಗ ಕೆ.ಎಲ್‌ ರಾಹುಲ್‌ ಸಿಕ್ಸರ್‌, ಬೌಂಡರಿ ಅಬ್ಬರಿಸಲು ಶುರು ಮಾಡಿದ್ರು. ಮೊದಲ ವಿಕೆಟ್‌ಗೆ 5 ಓವರ್‌ಗಳಲ್ಲಿ 61 ರನ್‌ ಬಾರಿಸಿತ್ತು. ಈ ವೇಳೆ 10 ಎಸೆತಗಳಲ್ಲಿ 18 ರನ್‌ ಗಳಿಸಿದ್ದ ಕೆ.ಎಲ್‌ ರಾಹುಲ್‌‌ ಕ್ಯಾಚ್‌ ನೀಡಿ ಔಟಾದರು. ಆ ಬಳಿಕ ವಿಕೆಟ್‌ ಪತನ ಶುರುವಾಯಿತು. ಸಮೀರ್‌ ರಿಝ್ವಿ, ಡೇವಿಡ್‌ ಮಿಲ್ಲರ್‌, ಅಕ್ಷರ್‌ ಪಡೇಲ್‌, ಅಲ್ಪ ಮೊತ್ತಕ್ಕೆ ಔಟಾದರು.

ಆದ್ರೆ ಅರ್ಧಶತಕ ಗಳಿಸಿ ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಟ್ರಿಸ್ಟನ್‌ ಸ್ಟಬ್ಸ್‌ ತಂಡಕ್ಕೆ ಗೆಲುವು ತಂದುಕೊಡುವ ಭರವಸೆ ನೀಡಿದ್ದರು. ಆದ್ರೆ ಇನ್ನೂ 10 ಎಸೆತಗಳಲ್ಲಿ 30 ರನ್‌ ಬೇಕಿದ್ದಾಗ ಸಿಕ್ಸರ್‌ ಸಿಡಿಸಲು ಯತ್ನಿಸಿದ ಸ್ಟಬ್ಸ್‌ ಕ್ಯಾಚ್‌ ನೀಡಿ ಔಟಾದರು. ಇದರೊಂದಿಗೆ ಡೆಲ್ಲಿ ತಂಡದ ಗೆಲುವಿನ ಭರವಸೆ ಕಮರಿತು.

ಡಿಸಿ ಪರ ನಿಸ್ಸಾಂಕ 41 ರನ್‌, ಸ್ಟಬ್ಸ್‌ 60 ರನ್‌ (38 ಎಸೆತ, 3 ಸಿಕ್ಸರ್‌, 4 ಬೌಂಡರಿ), ಮಿಲ್ಲರ್‌ 17 ರನ್‌, ಕೆ.ಎಲ್‌ ರಾಹುಲ್‌ 18 ರನ್‌ ಗಳಿಸಿದ್ರೆ, ಉಳಿದವರು ಕಳಪೆ ಪ್ರದರ್ಶನ ನೀಡಿ ತಂಡದ ಸೋಲಿಗೆ ಕಾರಣರಾದರು.

ಓವರ್ಟನ್ ಬೆಂಕಿ ಬೌಲಿಂಗ್‌
ಇನ್ನೂ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟರ್‌ಗಳನ್ನು ಕಾಡಿದ ಜೇಮೀ ಓವರ್ಟನ್ 4 ಓವರ್‌ಗಳಲ್ಲಿ 18 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರೆ, ಅನ್ಶುಲ್‌ ಕಾಂಬೋಜ್‌ 3 ವಿಕೆಟ್‌, ಖಲೀಲ್‌ ಅಹ್ಮದ್‌, ಗುರುಪ್ರೀತ್‌ ಸಿಂಗ್‌, ನೂರ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಸಂಜು ಸಿಡಿಲಬ್ಬರದ ಶತಕ
ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಚೆನ್ನೈ ಪರ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (Sanju Samson) ಅಬ್ಬರಿಸಿ ಬೊಬ್ಬರಿದರು. ಐಪಿಎಲ್‌ನಲ್ಲಿ ಮೊದಲ ಬಾರಿಗೆ ಸಿಎಸ್​ಕೆ ತಂಡದ ಪರ ಆಡುತ್ತಿರುವ ಸಂಜುಗೆ ಮೊದಲ ಮೂರು ಪಂದ್ಯಗಳು ಉತ್ತಮವಾಗಿ ನಡೆದಿರಲಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಇನ್ನಿಂಗ್ಸ್ ಕಟ್ಟಿದ ಸಂಜು ಮೊದಲಿಗೆ ಸಿಎಸ್​ಕೆ ಪರ ಮೊದಲ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ಆ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಇದು ಸಂಜು ಅವರ ಐಪಿಎಲ್ ವೃತ್ತಿಜೀವನದಲ್ಲಿ 4ನೇ ಶತಕವಾಗಿದ್ದರೆ, ಸಿಎಸ್​ಕೆ ಪರ ಮೊದಲ ಶತಕವಾಗಿದೆ.

ಈ ಆವೃತ್ತಿಯ ಮೊದಲ ಶತಕ
ಸಂಜು ಸ್ಯಾಮ್ಸನ್ ಕೇವಲ 52 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಈ ಆವೃತ್ತಿಯಲ್ಲಿ ಶತಕ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಸಂಜು ಅವರ ಈ ಶತಕದ ಇನ್ನಿಂಗ್ಸ್​ನಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್​ಗಳು ಸೇರಿದ್ದವು. ಈ ಶತಕದೊಂದಿಗೆ, ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್‌ನಲ್ಲಿ 400 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಟಿ20 ಸ್ವರೂಪದಲ್ಲಿ 400 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ 4ನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

5 ವರ್ಷಗಳ ಕಾಯುವಿಕೆ ಅಂತ್ಯ
ಐದು ವರ್ಷಗಳಲ್ಲಿ ಸಂಜು ಸ್ಯಾಮ್ಸನ್ ಅವರ ಮೊದಲ ಐಪಿಎಲ್ ಶತಕ ಇದಾಗಿದೆ. ಅಂದರೆ ಸಂಜು ಸ್ಯಾಮ್ಸನ್ ಈ ಐಪಿಎಲ್​ನಲ್ಲಿ ಕೊನೆಯ ಬಾರಿಗೆ 2021 ರಲ್ಲಿ ಪಂಜಾಬ್ ವಿರುದ್ಧ ಶತಕ ಬಾರಿಸಿದ್ದರು. ಅದಕ್ಕೂ ಮುನ್ನ ಸಂಜು, 2019 ರಲ್ಲಿ ಹೈದರಾಬಾದ್ ವಿರುದ್ಧ ಮತ್ತು 2017 ರಲ್ಲಿ ಪುಣೆ ವಿರುದ್ಧ ಶತಕದ ಇನ್ನಿಂಗ್ಸ್ ಆಡಿದ್ದರು. ಹಾಗೆಯೇ ಸಂಜು ಸ್ಯಾಮ್ಸನ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪರ ಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮೊದಲು, ಮುರಳಿ ವಿಜಯ್ 2012 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 58 ಎಸೆತಗಳಲ್ಲಿ 113 ರನ್ ಗಳಿಸಿದ್ದರು.

ಶತಕದ ಜೊತೆಯಾಟ
ಸಂಜು ಸ್ಯಾಮ್ಸನ್ ತಮ್ಮ ಶತಕದ ಇನ್ನಿಂಗ್ಸ್ ಜೊತೆಗೆ ಆಯುಷ್ ಮ್ಹಾತ್ರೆ ಜೊತೆ ಎರಡನೇ ವಿಕೆಟ್‌ಗೆ 100 ಕ್ಕೂ ಹೆಚ್ಚು ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಅಂತಿಮವಾಗಿ ಸಂಜು ಈ ಪಂದ್ಯದಲ್ಲಿ ಅಜೇಯ 115 ರನ್ ಗಳಿಸಿದರೆ, ಆಯುಷ್ ಮ್ಹಾತ್ರೆ ಕೂಡ 59 ರನ್​ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ಶಿವಂ ದುಬೆ 10 ಎಸೆತಗಳಲ್ಲಿ ಅಜೇಯ 20 ರನ್ ಮತ್ತು ನಾಯಕ ಗಾಯಕ್ವಾಡ್ 15 ರನ್​ಗಳ ಇನ್ನಿಂಗ್ಸ್ ಆಡಿದರು.

Share This Article