ಖ್ಯಾತ ಗಾಯಕಿ ಮಂಗ್ಲಿ (Mangli) ಅವರ ವಿರುದ್ಧ 10 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಮಂಗ್ಲಿ ಹಾಗೂ ಅವರ ಸಹೋದರನ ವಿರುದ್ಧ ಕೇಸ್ ದಾಖಲಾಗಿದೆ. ಮಂಗ್ಲಿ ತಮಗೆ ಮೋಸ ಮಾಡಿದ್ದಾರೆ ಮತ್ತು ಅವರಿಂದ ಅಪಾಯವಿದೆ ಎಂದು ವಕೀಲ (Advocate) ಸುಬ್ಬರಾವ್ ಆರೋಪಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಪೊಲೀಸರು ಗಾಯಕಿ (Folk Singer) ಮತ್ತು ಆಕೆಯ ಸಹೋದರ ಶಿವ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 351 (2), 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೈಕ್ರೋ ಫೈನಾನ್ಸ್ (Micro Finance) ಹೆಸರಿನಲ್ಲಿ ಗಾಯಕಿ ಮಂಗ್ಲಿ ಮತ್ತು ಅವರ ಸಹೋದರ ಹೆಚ್ಚಿನ ಲಾಭದ ಆಮಿಷವೊಡ್ಡಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿತ್ತು. ಅವರು ಸುಮಾರು 100 ಜನರಿಂದ ಭಾರೀ ಹಣ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂಬ ಆಸೆ ತೋರಿಲಾಗಿತ್ತು. ಇದನ್ನು ನಂಬಿ ಅನೇಕರು ಹಣ ನೀಡಿದ್ದರು. ಮಂಗ್ಲಿ ಕಡೆಯಿಂದ ಸುಮಾರು 10 ಕೋಟಿ ರೂಪಾಯಿ ಮೋಸ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಿಗದಪಡಿಸಿದ ಸಮಯ ಕಳೆದರೂ ಲಾಭ ನೀಡಿಲ್ಲ, ಅಸಲನ್ನು ಕೂಡ ಕೊಟ್ಟಿಲ್ಲ ಎಂದು ಅನೇಕರು ಆರೋಪಿಸಿದ್ದಾರೆ. ಸಂತ್ರಸ್ತರು ವಕೀಲ ಸುಬ್ಬರಾವ್ ಅವರನ್ನ ಸಂಪರ್ಕಿಸಿ ಸಹಾಯ ಕೇಳಿದ್ದರು. ಈ ವೇಳೆ ಹಣ ಕೊಡುವಂತೆ ಕೇಳಿದಾಗ ಮಂಗ್ಲಿ ಮತ್ತು ಆಕೆಯ ಸಹೋದರ ಶಿವ ವಕೀಲರಿಗೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಕೂಡ ವಕೀಲ ಸುಬ್ಬರಾವ್ ದೂರು ನೀಡಿದ್ದಾರೆ.



