ಲಕ್ನೋ: ವೃಂದಾವನದ ಯಮುನಾದಲ್ಲಿ (Yamuna River) ಪಂಜಾಬ್‌ನಿಂದ (Punjab) ಬಂದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಮಗುಚಿ 10 ಮಂದಿ ಸಾವನ್ನಪ್ಪಿದ್ದು, 22 ಜನರು ಗಾಯಗೊಂಡಿದ್ದಾರೆ. ಇನ್ನೂ ಐವರು ನಾಪತ್ತೆಯಾಗಿದ್ದಾರೆ.
ಕೇಸಿ ಘಾಟ್ ಬಳಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಆಳವಾದ ನೀರಿಗೆ ಹೋಗಿ ತೇಲುವ ಪಾಂಟೂನ್‌ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ನೀರಿನ ಮಟ್ಟ ಏರಿಕೆಯಿಂದಾಗಿ ಇತ್ತೀಚೆಗೆ ಈ ಪ್ರದೇಶದಲ್ಲಿ ಒಂದು ಪಾಂಟೂನ್ ಸೇತುವೆಯನ್ನು ತೆರವುಗೊಳಿಸಲಾಗಿತ್ತು. ಕೆಲವು ಪಾಂಟೂನ್ ಡ್ರಮ್‌ಗಳು ನದಿಯಲ್ಲಿ ಉಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವುಗಳಲ್ಲಿ ಒಂದು ಈ ಬೋಟ್‌ಗೆ ಡಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಸಿಸಿಟಿವಿ ಬಳಸಿ ಭಾರತ ಸೇನೆಯ ಚಲನವಲನದ ಮೇಲೆ ಪಾಕ್ ದುಷ್ಟ ಕಣ್ಣು – 11 ಮಂದಿ ಅರೆಸ್ಟ್
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿ, ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಭಗವಂತ್ ಮಾನ್, ಉತ್ತರ ಪ್ರದೇಶ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಮೃತರಲ್ಲಿ ಹೆಚ್ಚಿನವರು ಲುಧಿಯಾನದ ಜಗ್ರಾಂವ್ ಮತ್ತು ದುಗ್ರಿ ಪ್ರದೇಶದವರು ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಜಗ್ರಾಂವ್‌ನ ಶ್ರೀ ಬಂಕೆ ಬಿಹಾರಿ ಕ್ಲಬ್‌ನಿಂದ ಸುಮಾರು 120 ಯಾತ್ರಿಕರ ಗುಂಪು ಏಪ್ರಿಲ್ 9 ರಂದು ಎರಡು ಬಸ್‌ಗಳಲ್ಲಿ ವೃಂದಾವನಕ್ಕೆ ನಾಲ್ಕು ದಿನಗಳ ಪ್ರವಾಸಕ್ಕೆ ತೆರಳಿತ್ತು.
ಕವಿತಾ ರಾಣಿ (49), ಚರಂಜಿತ್ (40), ಸಪ್ನಾ ಹನ್ಸ್ (55), ರಿಕೇಶ್ ಗುಲಾಟಿ, ಮಧುರ್ ಬೆಹ್ಲ್, ಆಶಾ ರಾಣಿ, ಪಿಂಕಿ ಬೆಹ್ಲ್, ಅಂಜು ಗುಲಾಟಿ, ಇಶಾನ್ ಕಟಾರಿಯಾ, ಮಿನು ಬನ್ಸಾಲ್ ಮೃತಪಟ್ಟಿದ್ದಾರೆ. ಮಾಣಿಕ್ ಟಂಡನ್, ಪಂಕಜ್ ಮಲ್ಹೋತ್ರಾ, ರಿಷಬ್ ಶರ್ಮಾ, ಯಶ್ ಭಲ್ಲಾ ಮತ್ತು ಮೋನಿಕಾ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ಮೋದಿ ಭದ್ರತೆಯ ಗೌಪ್ಯ ಮಾಹಿತಿ ಶತ್ರುಗಳಿಗೆ ರವಾನೆ – ಆರೋಪಿ ಅರೆಸ್ಟ್
22 ಮಂದಿ ಗಾಯಗೊಂಡಿದ್ದಾರೆ. ಪಿಂಕಿ, ಮಂಜು, ಸವಿತಾ, ತನೀಶ್ ಜೈನ್, ರೇಖಾ, ರಾಜಿಂದರ್ ಕೌರ್, ಸರೋಜ್ ಮತ್ತು ಡಾಲಿ ಚಿಕಿತ್ಸೆ ಪಡೆಯುತ್ತಿದ್ದು, ಇತರರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣಾ ತಂಡಗಳು, ಸೇನೆ ಮತ್ತು ಸ್ಥಳೀಯ ಡೈವರ್‌ಗಳು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ.

