– ಯುದ್ಧಕ್ಕಾಗಿ ದಿನಕ್ಕೆ 3,040 ಕೋಟಿ ಖರ್ಚು ಮಾಡುತ್ತಿದೆ ಅಮೆರಿಕ
ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದಲ್ಲಿ ಅಮೆರಿಕಕ್ಕೆ ಮತ್ತೊಂದು ಹಿನ್ನಡೆಯಾಗುವ ಘಟನೆ ನಡೆದಿದೆ. ಅಮೆರಿಕದ ಅತ್ಯಂತ ದುಬಾರಿ ಬೆಲೆಯ ಡ್ರೋನ್ (US Drone) ಕಣ್ಮರೆಯಾಗಿದೆ.
ಅಮೆರಿಕದ ನೌಕಾಪಡೆಯ ವಿಶೇಷ ಕಣ್ಗಾವಲು ಡ್ರೋನ್, ಎಂಕ್ಯೂ-4ಸಿ ಟ್ರೈಟಾನ್ (MQ 4C Triton) ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. 1,859 ಕೋಟಿ ರೂಪಾಯಿ ಮೌಲ್ಯದ ಅಮೆರಿಕದ ಈ ಡ್ರೋನ್ ಹಾರ್ಮುಜ್ ಜಲಸಂಧಿ (Strait Of Hormuz) ಮೇಲೆ ಹಾರಾಡ್ತಿದ್ದಂತೆ ಮಾಯವಾಗಿದೆ. ಅತ್ಯಂತ ದುಬಾರಿ ಡ್ರೋನ್ ಎಂದು ಪರಿಗಣಿಸಲಾದ ಈ ಡ್ರೋನ್, ಹಾರಾಟದ ಸಮಯದಲ್ಲಿ ತುರ್ತು ಎಚ್ಚರಿಕೆಯನ್ನ ಕಳುಹಿಸಿತು ಎಂದು ವರದಿಯಾಗಿದೆ.
ಪರ್ಷಿಯನ್ ಕೊಲ್ಲಿ, ಹಾರ್ಮುಜ್ ಜಲಸಂಧಿಯಲ್ಲಿ ಮೂರು ಗಂಟೆಗಳ ಕಾಲ ನಿಗಾವಣೆ ಬಳಿಕ ಇದು ಇಟಲಿಯ ಸಿಗೊನೆಲ್ಲಾದಲ್ಲಿರುವ ತನ್ನ ಬೇಸ್‌ಗೆ ಹಿಂತಿರುಗುತ್ತಿತ್ತು. ಡ್ರೋನ್ ಇದ್ದಕ್ಕಿದ್ದಂತೆ ತನ್ನ ಮಾರ್ಗ ಸ್ವಲ್ಪಮಟ್ಟಿಗೆ ಇರಾನ್ ಕಡೆಗೆ ತಿರುಗಿಸಿ, ಅದೇ ಟೈಮಲ್ಲಿ 7700 ಕೋಡ್ ಕಳುಹಿಸಿದೆ. ಬಳಿಕ ವೇಗವಾಗಿ ಇಳಿದಿದ್ದು, ಅದಾದ ನಂತರ ರಾಡಾರ್‌ನಿಂದ ಕಣ್ಮರೆಯಾಗಿದೆ ಎಂದು ವರದಿಯಾಗಿದೆ. ಡ್ರೋನ್ ಪತನಗೊಂಡಿದೆಯೇ ಅಥವಾ ಹೊಡೆದುರುಳಿಸಲಾಗಿದ್ಯೋ ಅನ್ನೋದು ಸ್ಪಷ್ಟವಾಗಿಲ್ಲ.
ಡ್ರೋನ್ ವಿಶೇಷತೆ ಏನು?
ಇದು ನಿರ್ದಿಷ್ಟ ಕಡಲ ಕಣ್ಗಾವಲಿಗಾಗಿ ವಿನ್ಯಾಸಗೊಳಿಸಲಾದ ಅತ್ಯಂತ ಮುಂದುವರಿದ, ದುಬಾರಿ ಡ್ರೋನ್. ದೀರ್ಘಕಾಲದವರೆಗೆ ಎತ್ತರ ಪ್ರದೇಶದಲ್ಲಿ ಹಾಗೂ 24 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ದೊಡ್ಡ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಬಲ್ಲ ಚಾಣಾಕ್ಷ ಡ್ರೋನ್ ಇದಾಗಿದೆ.
50,000 ಅಡಿಗಿಂತ ಹೆಚ್ಚು ಎತ್ತರದಲ್ಲಿ ಹಾರಾಡಬಲ್ಲ ಡ್ರೋನ್ ಇದಾಗಿದ್ದು, ಇದರ ವ್ಯಾಪ್ತಿ ಸುಮಾರು 7,400 ನಾಟಿಕಲ್ ಮೈಲು (13,704 ಕಿಮೀ) ಇದೆ. ಗಸ್ತು ವಿಮಾನಗಳ ಜೊತೆಗೆ ಈ ಡ್ರೋನ್ ಕಾರ್ಯಾಚರಣೆ ನಡೆಸುತ್ತದೆ. ಅಮೆರಿಕ ನೌಕಾಪಡೆ ಇಂತಹ 20 ಡ್ರೋನ್‌ಗಳನ್ನ ಹೊಂದಿದೆ.
ಯುದ್ಧಕ್ಕೆ ಅಮೆರಿಕದ ವೆಚ್ಚ ಎಷ್ಟಾಗುತ್ತಿದೆ?
ಸದ್ಯ ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಪ್ರತಿ ಸೆಕೆಂಡಿಗೆ 10,300 ಡಾಲರ್ ಅಂದ್ರೆ ಸುಮಾರು 9.8 ಲಕ್ಷ ರೂ.ಗಳನ್ನ ಖರ್ಚು ಮಾಡುತ್ತಿದೆ ಅಂತ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ (SIPRI) ದತ್ತಾಂಶ ಹೇಳಿದೆ. ಇದರಲ್ಲಿ ಯುದ್ಧ ಸಾಮಗ್ರಿಗಳು, ಕ್ಷಿಪಣಿಗಳು ಅತಿದೊಡ್ಡ ಪಾಲನ್ನು ಒಳಗೊಂಡಿದೆ. ದಿನಕ್ಕೆ ಸರಿ ಸುಮಾರು 3,040 ಕೋಟಿ ರೂ.ಗಳಷ್ಟು ಹಣ ಯುದ್ಧಕ್ಕೆ ಖರ್ಚಾಗುತ್ತಿದೆ ಎಂದು SIPRI ಅಂದಾಜಿಸಿದೆ.



