– 2028 ರ ವಿಧಾನಸಭಾ ಚುನಾವಣೆಗೆ ಜಿಬಿಎ ಚುನಾವಣೆ ದಿಕ್ಸೂಚಿ: ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಜೆಡಿಎಸ್ ಪಕ್ಷ ಸ್ಥಾಪನೆ ಆಗಿ 25 ವರ್ಷ ಕಳೆದ ಹಿನ್ನಲೆ ನಾಳೆ ಬೆಂಗಳೂರಿನ (Bengaluru) ಕೊಮ್ಮಘಟ್ಟದ ಬಳಿ ಜೆಡಿಎಸ್ ಬೆಳ್ಳಿ ಹಬ್ಬ ಸಮಾವೇಶ ನಡೆಸುತ್ತಿದೆ. ಸಮಾವೇಶ ಪೂರ್ವಭಾವಿ ಸಿದ್ಧತೆಯನ್ನ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವೀಕ್ಷಣೆ ಮಾಡಿದ್ರು. ನಾಳೆಯ ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.
ಜಿಬಿಎ ಚುನಾವಣೆಯಲ್ಲಿ ಹೊಸ ನಾಯಕರು ಸೃಷ್ಟಿ
ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ (Nikhil Kumaraswamy), 25 ವರ್ಷ ಪಕ್ಷ ಪೂರೈಕೆ ಮಾಡಿದೆ. ಬೆಂಗಳೂರಿನಲ್ಲಿ JDS ಶಕ್ತಿ ಕುಗ್ಗಿದೆ ಅಂತ ಅನೇಕರು ಹೇಳ್ತಾರೆ. ಆದರೆ ನಮಗೂ ಶಕ್ತಿ ಇದೆ. ಬೆಂಗಳೂರಿನಲ್ಲಿ ಸಂಘಟನೆ ಒತ್ತು ಕೊಡಬೇಕು. ಜಿಬಿಎ ಚುನಾವಣೆಗೆ ಸಿದ್ಧತೆ ಆಗ್ತಿದೆ. ಸುಪ್ರೀಂ ಕೋರ್ಟ್ (Supreme Court) ಕೂಡಾ ಚುನಾವಣೆ ಮಾಡಬೇಕು ಅಂತ ಹೇಳಿದೆ. ಜಿಬಿಎ ಚುನಾವಣೆಯಲ್ಲಿ ಹೊಸ ನಾಯಕರು ಸೃಷ್ಟಿ ಆಗ್ತಾರೆ. ಬೆಂಗಳೂರಿನಲ್ಲಿ ಅನೇಕ ಸಮಸ್ಯೆಗಳು ಇವೆ. ಜನರು ಎಚ್ಚೆತ್ತುಕೊಳ್ಳಲು ಇದೊಂದು ಸಮಾವೇಶ ಮಾಡ್ತಾ ಇದ್ದೇವೆ ಅಂತ ತಿಳಿಸಿದರು.
ಬೆಂಗಳೂರಲ್ಲಿ ಜೆಡಿಎಸ್ ಶಕ್ತಿಪ್ರದರ್ಶನ
ಜಿಬಿಎ ಚುನಾವಣೆಯಲ್ಲಿ (GBA Election) ಗೊಂದಲ ಇಲ್ಲ. ಫೈನಲ್ ನೋಟಿಫಿಕೇಶನ್ ಆಗಿದೆ. ಈಗಾಗಲೇ ಜಿಬಿಎ ಚುನಾವಣೆ ಸಭೆ ನಡೆದಿದೆ. ಇದಕ್ಕೆ ನಾಳೆ ಸಮಾವೇಶ ಮಾಡ್ತಾ ಇದ್ದೇವೆ. ಪಕ್ಷ ಸಂಘಟನೆ ಮಾಡೋದು, ದೇವೇಗೌಡ, ಕುಮಾರಸ್ವಾಮಿ ಕೊಡುಗೆ ಬಗ್ಗೆ ಬೆಂಗಳೂರು ಜನರಿಗೆ ತಿಳಿಸೋ ಕೆಲಸ ಮಾಡುತ್ತೇವೆ. ಜೆಡಿಎಸ್ ಸಂಘಟನೆ ಬೆಂಗಳೂರಿನಲ್ಲಿ ಇದೆ ಅಂತ ಸಾಬೀತು ಮಾಡ್ತೀವಿ. ಈಗಾಗಲೇ ಉಸ್ತುವಾರಿ ನೇಮಕ ಮಾಡಲಾಗಿದೆ. ಪಾರ್ಟಿ ಸಂಘಟನೆ ದೃಷ್ಟಿಯಿಂದ ಎಲ್ಲಾ ಕ್ರಮ ತೆಗೆದುಕೊಳ್ಳಲಾಗ್ತಿದೆ. ಹೊಸ ನಾಯಕತ್ವ ಸೃಷ್ಟಿಗೆ ಪಕ್ಷ ಸಹಕಾರ ನೀಡಲಿದೆ. ನಮ್ಮ ಅಭ್ಯರ್ಥಿಗಳು ಜನರ ಜೊತೆ ಇರಬೇಕು. ವಾರ್ಡ್ ಸಮಸ್ಯೆ ಬಗ್ಗೆ ಹೋರಾಟ ಮಾಡಬೇಕು. ಜನರ ಸಂಘಟನೆ ಮಾಡೋರಿಗೆ ಪಕ್ಷ ಅವಕಾಶ ಕೊಡಲಿದೆ ಅಂತ ತಿಳಿಸಿದರು.
ನಾಳೆ 1 ಲಕ್ಷಕ್ಕೂ ಹೆಚ್ಚು ಜನರು ಸಮಾವೇಶಕ್ಕೆ ಬರ್ತಾರೆ. ವಿಜಯಪುರದಲ್ಲಿ ಸಮಾವೇಶ ಮಾಡಿದ್ದೇವೆ. ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಹಳೇ ಮೈಸೂರು ಭಾಗದಲ್ಲಿ ಸಮಾವೇಶಗಳನ್ನ ಮಾಡ್ತೀವಿ ಎಂದರು. ದೇವೇಗೌಡರೇ ಸಮಾವೇಶಕ್ಕೆ ಸಮಯ ನಿಗದಿ ಮಾಡಿದ್ದು, ಅವರು ನಾಳೆ ಭಾಗಿಯಾಗ್ತಾರೆ. ಕುಮಾರಸ್ವಾಮಿ ಅವರು ಶಾಸಕರು, ಹಾಲಿ, ಮಾಜಿ ಎಲ್ಲರೂ ಭಾಗಿಯಾಗ್ತಾರೆ ಮಾಹಿತಿ ನೀಡಿದ್ರು.
ಮೈತ್ರಿ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ
2028 ಚುನಾವಣೆಗೆ ಜಿಬಿಎ ಚುನಾವಣೆ ದಿಕ್ಸೂಚಿ ಚುನಾವಣೆ ಆಗಲಿದೆ. ವಾರ್ಡ್ ಗಳು ವಿಂಗಡಣೆ ಆಗಿದೆ. ಯಾವ ರೀತಿ ಅವಕಾಶ ಬಳಕೆ ಮಾಡಿಕೊಳ್ಳಬೇಕು ಅಂತ ಸಭೆ ಮಾಡ್ತಾ ಇದ್ದೇವೆ. 28 ಕ್ಷೇತ್ರಗಳಲ್ಲಿ ಕ್ಷೇತ್ರದ ಸಮಸ್ಯೆ ಬಗ್ಗೆ ಪಾದಯಾತ್ರೆ ಸೇರಿ ಯಾವ ರೀತಿ ಹೋರಾಟ ಮಾಡಬೇಕು ಅಂತ ನಿರ್ಧಾರ ಮಾಡ್ತೀವಿ. ದೇವೇಗೌಡ- ಕುಮಾರಸ್ವಾಮಿ ಕೊಡುಗೆ ಬೆಂಗಳೂರಿಗೆ ಅಪಾರವಾಗಿದೆ. ಬೆಂಗಳೂರಿಗೆ ಕುಡಿಯೋ ನೀರು, ಟ್ರಾಫಿಕ್ ಸಮಸ್ಯೆ ಫ್ಲೈ ಓವರ್ ತಂದವರು ದೇವೇಗೌಡರು. ಮೈತ್ರಿ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಚುನಾವಣೆ ಘೋಷಣೆ ಆದ ಮೇಲೆ ಚರ್ಚೆ ಶುರು ಮಾಡ್ತೀವಿ. ಒಟ್ಟಾಗಿ ಹೋಗಬೇಕಾ? ಏಕಾಂಗಿಯಾಗಿ ಹೋಗಬೇಕಾ ಅಂತ ಎರಡು ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ. ನಾವು ಪಕ್ಷ ಸಂಘಟನೆ ಮಾಡೋ ಕೆಲಸ ಮಾಡ್ತೀವಿ ಅಂತ ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋಗಿದ್ವಿ. ಆಗಲೂ ಕೇಂದ್ರದ ನಾಯಕರು, ರಾಜ್ಯ ನಾಯಕರು ಮಾತುಕತೆ ಮೂಲಕ ಹೋದ್ವಿ. ಈಗಲೂ ಬಿಜೆಪಿ ಕೇಂದ್ರ ಮತ್ತು ರಾಜ್ಯದ ನಾಯಕರ ಜೊತೆ ಸೌಹಾರ್ದಯುತವಾಗಿ ಹೊಂದಾಣಿಕೆ ಮಾಡಿಕೊಳ್ತೀವಿ. ಒಟ್ಟಿನಲ್ಲಿ ರಾಜ್ಯದ ಅಭಿವೃದ್ಧಿ ಆಗಬೇಕು. ರಾಜ್ಯಕ್ಕೆ ಒಳ್ಳೆಯದಾಗಬೇಕು ಅನ್ನೋದು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಹೊಂದಾಣಿಕೆ ಬಗ್ಗೆ ಮಾತುಕತೆ ಆಗುತ್ತದೆ ಅಂತ ತಿಳಿಸಿದರು.



