ಚಿಕ್ಕಮಗಳೂರು: ರಾಜ್ಯದ ಅತ್ಯಂತ ಎತ್ತರದ ಪ್ರದೇಶ ಕಾಫಿನಾಡ ದತ್ತಪೀಠದ (Datta peetha) ಮಾಣಿಕ್ಯಾಧಾರ ಬಳಿ ಬಾಲಕಿ ನಾಪತ್ತೆಯಾದ ಪ್ರಕರಣ ಹೊಸ ಆಯಾಮ ಪಡೆದುಕೊಂಡಿದೆ. ಬಾಲಕಿ ಶ್ರೀನಂದಾ ತಾಯಿ ರೋಹಿಣಿ ಈ ಬಗ್ಗೆ ಪೊಲೀಸರ ಜೊತೆ ಚರ್ಚಿಸಿದ್ದು, ಮಗಳು ಆಕಸ್ಮಿಕವಾಗಿ ಬಿದ್ದಿರಲು ಸಾಧ್ಯವಿಲ್ಲ. ಯಾರೋ ಮಾದಕ ದ್ರವ್ಯ ಕೊಟ್ಟು ಅಪಹರಿಸಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ನಾಪತ್ತೆಯಾದ ಬಾಲಕಿಯ ಹುಡುಕಾಟಕ್ಕಾಗಿ ನೂರಾರು ಪೊಲೀಸ್, ಅಗ್ನಿಶಾಮಕ ಹಾಗೂ ಅರಣ್ಯ ಸಿಬ್ಬಂದಿಗಳು ಸೊಂಟಕ್ಕೆ ಹಗ್ಗ ಕಟ್ಕೊಂಡು 300 ಅಡಿ ಆಳಕ್ಕೆ ಇಳಿದಿದ್ದಾರೆ. ಇತ್ತ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಕೂಡ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ. ಈ ಮಧ್ಯೆ ಬಾಲಕಿ ನಾಪತ್ತೆ ಪ್ರಕರಣ ಸಂಬಂಧ ಆಕೆ ತಾಯಿ ಹೇಳಿಕೆ ಹೊಸ ಸಂಚಲನ ಸೃಷ್ಟಿಸಿದ್ದು ತನಿಖೆಯ ಆಯಾಮವೇ ಬದಲಾಗುವಂತಿದೆ. ಇದನ್ನೂ ಓದಿ: ದತ್ತಪೀಠದ ತಪ್ಪಲಿನಲ್ಲಿ ಬಾಲಕಿ ನಾಪತ್ತೆ ಪ್ರಕರಣ – 24 ಗಂಟೆ ಕಳೆದ್ರೂ ಸಿಗದ ಸುಳಿವು
ಕೇರಳದ (Kerala) ಪಾಲಕ್ಕಾಡ್ ಮೂಲದ 10ನೇ ತರಗತಿ ವಿದ್ಯಾರ್ಥಿನಿ (Student) ಶ್ರೀನಂದಾ ಮಂಗಳವಾರ (ಏ.7) ಸಂಜೆ ಜಲಪಾತ ವೀಕ್ಷಿಸಲು ಹೋಗುವಾಗ ಕಣ್ಮರೆಯಾಗಿದ್ದಳು. 41 ಕುಟುಂಬದ ಸದಸ್ಯರೊಂದಿಗೆ ಹಂಪಿ ಪ್ರವಾಸ ಮುಗಿಸಿ ಇಲ್ಲಿಗೆ ಬಂದಿದ್ದ ಶ್ರೀನಂದಾ, ನಾಪತ್ತೆಯಾಗುವ ಕೇವಲ ಐದು ನಿಮಿಷಗಳ ಮೊದಲು ತಂದೆಯ ಮೊಬೈಲ್‍ನಲ್ಲಿ ಅತ್ಯಂತ ಖುಷಿಯಿಂದ ರೀಲ್ಸ್ ಮಾಡಿದ್ದಳು. ಆದರೆ, ಜನದಟ್ಟಣೆಯ ನಡುವೆ ಮೆಟ್ಟಿಲುಗಳನ್ನು ಇಳಿದು ಬರುವಾಗ ಅವಳು ಹಠಾತ್ತನೆ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಟ್ಟುನಿಟ್ಟಿನ ಆದೇಶದಂತೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಶೋಧ ಕಾರ್ಯ ಆರಂಭಿಸಿದೆ. ಇದರ ನಡುವೆ ಬಾಲಕಿಯನ್ನು ಹುಡುಕಲು ಕಾಡಿನ ಮೂಲೆ ಮೂಲೆಗಳಲ್ಲಿ ಸುತ್ತುತ್ತಿದ್ದ ಸಿಬ್ಬಂದಿಗೆ ಆತಂಕಕಾರಿ ಸಂಗತಿಯೊಂದು ಕಂಡುಬಂದಿದೆ. ಜಿಲ್ಲಾಡಳಿತ ಮತ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಬ್ಯುಸಿಯಾಗಿದ್ದರೆ, ಅತ್ತ 28 ಪ್ರವಾಸಿಗರ ತಂಡವೊಂದು ಮಕ್ಕಳ ಸಮೇತ ಕಾನೂನು ಬಾಹಿರವಾಗಿ ದಟ್ಟ ಅರಣ್ಯದೊಳಗೆ ಚಾರಣ ನಡೆಸುತ್ತಿರುವುದು ಪತ್ತೆಯಾಗಿದೆ. ಈ ಬೇಜವಾಬ್ದಾರಿತನ ಕಂಡು ಸಿಬ್ಬಂದಿ ಅವರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಇದನ್ನೂ ಓದಿ: ಕೇರಳದಿಂದ ಪ್ರವಾಸ ಬಂದಿದ್ದ 10ನೇ ತರಗತಿ ವಿದ್ಯಾರ್ಥಿನಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನಾಪತ್ತೆ

