ನವದೆಹಲಿ: ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಸಂಪುಟದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದ ಮೊಹ್ಸೀನಾ ಕಿದ್ವಾಯಿ (Mohsina Kidwai) ಅವರಿಂದು (ಏ.8) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮೊಹ್ಸೀನಾ ಕಿದ್ವಾಯಿ ಅವರು ತಮ್ಮ 94ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಸಂಜೆ 5ಗಂಟೆಗೆ ನಿಜಾಮುದ್ದೀನ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಅಳಿಯ ರಾಜಿ ಉರ್ ರೆಹಮಾನ್ ಕಿದ್ವಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ
1930ರ ಜನವರಿ 1ರಂದು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಜನಿಸಿದ ಮೊಹ್ಸೀನಾ ಕಿದ್ವಾಯಿ ಅವರು 1977ರಲ್ಲಿ ಮೀರತ್‌ನಿಂದ ಲೋಕಸಭೆಗೆ ಆಯ್ಕೆಯಾದರು. ಬಳಿಕ 1982ರಲ್ಲಿ ಮೊದಲ ಬಾರಿಗೆ ಕಾರ್ಮಿಕ ಸಚಿವರಾಗಿ (1982-83) ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು. ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (1983-84), ಗ್ರಾಮೀಣಾಭಿವೃದ್ಧಿ (1984), ಸಾರಿಗೆ (1986) ಮತ್ತು ನಗರಾಭಿವೃದ್ಧಿ (1986-89) ಸೇರಿದಂತೆ ವಿವಿಧ ನಿರ್ಣಾಯಕ ಖಾತೆಗಳನ್ನು ನಿರ್ವಹಿಸಿದರು. ನಂತರ 2004ರಿಂದ 2016ರವರೆಗೆ ರಾಜ್ಯಸಭಾ ಸಂಸದರಾಗಿ ಛತ್ತೀಸ್‌ಗಢವನ್ನು ಪ್ರತಿನಿಧಿಸಿದರು.
ಗಣ್ಯರ ಸಂತಾಪ:
ಮೊಹ್ಸೀನಾ ಕಿದ್ವಾಯಿ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಮಾಜಿ ಕೇಂದ್ರ ಸಚಿವೆ, ಮಾಜಿ ಸಂಸದೆ ಮೊಹ್ಸೀನಾ ಕಿದ್ವಾಯಿ ಅವರು ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಮತ್ತು ನಿಷ್ಠಾವಂತ ನಾಯಕಿಯಾಗಿದ್ದರು. ಅವರ ಸರಳತೆ, ಸೌಮ್ಯತೆ ಮತ್ತು ಗೌರವಾನ್ವಿತ ರಾಜಕೀಯ ಯಶಸ್ಸಿನಿಂದ ದೇಶದ ಹಲವಾರು ಮಹಿಳೆಯರಿಗೆ ಸ್ಫೂರ್ತಿ ನೀಡಿದರು ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಹಾಸ್ಟೆಲ್ ಬಳಿ ಡ್ರಗ್ಸ್ ಮಾರುತ್ತಿದ್ದ ಆರೋಪಿಗಳು ಅರೆಸ್ಟ್ – 10.5 ಲಕ್ಷ ಮೌಲ್ಯದ ಗಾಂಜಾ ಸೀಜ್

