IPL 2026 | ಗೆದ್ದರೂ ಸಿಗದ ಪಟ್ಟ – ಗಂಟೆಗಳಲ್ಲೇ ಆರ್‌ಸಿಬಿ ದಾಖಲೆ ಪುಡಿಗಟ್ಟಿದ ಚೆನ್ನೈ

2 Min Read

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಸೂಪರ್‌ ಸಂಡೇ ನಡೆದ ಆರ್‌ಸಿಬಿ vs ಸಿಎಸ್‌ಕೆ ನಡುವಿನ ಪಂದ್ಯವು ಅಭಿಮಾನಿಗಳ ಕಣ್ಣಿಗೆ ರಸದೌತಣ ನೀಡಿತು.

ಈ ಪಂದ್ಯದಲ್ಲಿ ಬರೋಬ್ಬರಿ 30 ಸಿಕ್ಸರ್​ಗಳು, 35 ಬೌಂಡರಿ ಸಿಡಿದವು. ಈ ಪೈಕಿ ಆರ್‌ಸಿಬಿ (RCB) 19 ಸಿಕ್ಸ್, 14 ಫೋರ್‌ ಬಾರಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ (CSK) 11 ಸಿಕ್ಸ್, 21 ಫೋರ್‌ ಸಿಡಿಸಿತು. ಇದಾಗ್ಯೂ ಸಿಎಸ್​ಕೆ ತಂಡದ ಹೆಸರಿಗೆ ವಿಶೇಷ ದಾಖಲೆಯೊಂದು ಸೇರ್ಪಡೆಯಾಗಿದೆ.

9 ಬ್ಯಾಟರ್‌ಗಳಿಂದ ಸಿಡಿದ ಸಿಕ್ಸರ್‌
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್​ವೊಂದರಲ್ಲಿ 9 ಬ್ಯಾಟರ್​ಗಳು ಸಿಕ್ಸ್​ ಸಿಡಿಸಿದ ವಿಶ್ವ ದಾಖಲೆಯೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನದಾಗಿಸಿಕೊಂಡಿದೆ. ಅಂದರೆ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡದ 9 ಬ್ಯಾಟರ್​ಗಳು ಸಿಕ್ಸ್ ಬಾರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಯಾವುದೇ ತಂಡಕ್ಕೂ ಸಾಧ್ಯವಾಗದ ಅಪರೂಪದ ದಾಖಲೆಯೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ನಿರ್ಮಿಸಿದೆ.

ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸರ್ಫರಾಝ್ ಖಾನ್, ಕಾರ್ತಿಕ್ ಶರ್ಮಾ, ಶಿವಂ ದುಬೆ, ಜೇಮೀ ಓವರ್ಟನ್, ಪ್ರಶಾಂತ್ ವೀರ್, ನೂರ್ ಅಹ್ಮದ್ ಮತ್ತು ಅಂಶುಲ್ ಕಾಂಬೋಜ್ ಸಿಕ್ಸರ್‌ ಬಾರಿಸಿ ಈ ದಾಖಲೆಗೆ ಕಾರಣವಾಗಿದ್ದಾರೆ.

ಗಂಟೆಗಳಲ್ಲೇ ಆರ್‌ಸಿಬಿ ದಾಖಲೆ ಉಡೀಸ್‌
ಇನ್ನೂ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಆರ್‌ಸಿಬಿ 20 ಓವರ್‌ಗಳಲ್ಲಿ 250 ರನ್‌ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ 5 ಬಾರಿಯ ಚಾಂಪಿಯನ್ ಸಿಎಸ್​ಕೆ ವಿರುದ್ಧ 250 ರನ್​ ಕಲೆಹಾಕಿದ ಮೊದಲ ತಂಡವೆಂಬ ಹೆಗ್ಗಳಿಕೆ ಪಡೆದುಕೊಂಡಿತು. ಇದರೊಂದಿಗೆ 36 ಬಾರಿ 200+ ರನ್‌ ಗಳಿಸಿ, ಸಿಎಸ್‌ಕೆ ದಾಖಲೆಯನ್ನ ಸಮಬಲಗೊಳಿಸಿತ್ತು. ಆದ್ರೆ ತನ್ನ ಇನ್ನಿಂಗ್ಸ್‌ ಆಡಿದ ಚೆನ್ನೈ ಅಗ್ರ ಬ್ಯಾಟರ್‌ಗಳ ವೈಫಲ್ಯದ ಹೊರತಾಗಿಯೂ 19.4 ಓವರ್‌ಗಳಲ್ಲಿ 207 ರನ್‌ ಗಳಿಸಿ ಆರ್‌ಸಿಬಿ ದಾಖಲೆಯನ್ನ ಉಡೀಸ್‌ ಮಾಡಿತು. ಈ ಸ್ಕೋರ್‌ನೊಂದಿಗೆ ಚೆನ್ನೂ 37 ಬಾರಿ 200+ ರನ್‌ ಗಳಿಸಿದ ದಾಖಲೆ ನಿರ್ಮಿಸಿತು.

ಐಪಿಎಲ್‌ನಲ್ಲಿ ಸಿಎಸ್‌ಕೆ 37 ಬಾರಿ, ಆರ್‌ಸಿಬಿ 36 ಬಾರಿ, ಪಂಜಾಬ್‌ ಕಿಂಗ್ಸ್‌ 33 ಬಾರಿ, ಮುಂಬೈ ಇಂಡಿಯನ್ಸ್‌ 32 ಬಾರಿ ಮತ್ತು ಕೆಕೆಆರ್‌ 30 ಬಾರಿ 200+ ಸ್ಕೋರ್‌ ಮಾಡಿದ ಸಾಧನೆ ಮಾಡಿವೆ.

ಈ ದಾಖಲೆಯ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಪಂದ್ಯದಲ್ಲಿ ಸೋಲನುಭವಿಸಿದೆ. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್​ಗಳಲ್ಲಿ 250 ರನ್ ಕಲೆಹಾಕಿದರೆ, ಸಿಎಸ್​ಕೆ ತಂಡವು 19.4 ಓವರ್​ಗಳಲ್ಲಿ 207 ರನ್​ಗಳಿ ಆಲೌಟ್ ಆಯಿತು. ಈ ಮೂಲಕ ಆರ್​ಸಿಬಿ ತಂಡವು 43 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Share This Article