ಕರ್ನಾಟಕಕ್ಕೆ ಬಿಜೆಪಿ ಹಾನಿಕಾರಕ; ಕೇಂದ್ರ ಸರ್ಕಾರದ ಸೇಡು ಬಯಲಾಗಿದೆ- ರಣದೀಪ್ ಸಿಂಗ್ ಸುರ್ಜೇವಾಲಾ

2 Min Read

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಹಾನಿಕಾರಕ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Surjewala) ಆಪಾದಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸುರ್ಜೇವಾಲಾ, ಮೋದಿ ಸರ್ಕಾರ ಮತ್ತು ಬಿಜೆಪಿಯ ಕನ್ನಡಿಗ ವಿರೋಧಿ ಸೇಡಿನ ರಾಜಕಾರಣ ಬಯಲಾಗಿದೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬರಬೇಕಾದ 2 ಲಕ್ಷ ಕೋಟಿ ಹಕ್ಕಿನ ಹಣಕ್ಕೆ ಕನ್ನ ಹಾಕಲಾಗಿದೆ. ರಾಜ್ಯಕ್ಕೆ ಕೃಷಿ, ನೀರಾವರಿ, ರಕ್ಷಣೆ, ಮೂಲಸೌಕರ್ಯ ಯೋಜನೆಗಳನ್ನು ತಡೆಯುವ ಮೂಲಕ ಕರ್ನಾಟಕದ ವಿರುದ್ಧ ಮೋದಿ ಸರ್ಕಾರದಿಂದ ವ್ಯವಸ್ಥಿತ ಪಿತೂರಿ ನಡೆಸಲಾಗಿದೆ. ಹೀಗಾಗಿಯೇ ಬಿಜೆಪಿ ಕರ್ನಾಟಕಕ್ಕೆ ಹಾನಿಕಾರಕ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನ 5 ಗ್ಯಾರಂಟಿಗಳಿಗೆ ಬಿಜೆಪಿ ವಿರೋಧಿಸುತ್ತಿದೆ. ಬಿಜೆಪಿ ಕರ್ನಾಟಕಕ್ಕೆ ದ್ರೋಹ ಬಗೆದಿದೆ. ಕನ್ನಡಿಗರ ಮತ ಪಡೆಯುವ ಅರ್ಹತೆ ಅವರಿಗಿಲ್ಲ ಎಂದು ಸುರ್ಜೇವಾಲಾ ಆರೋಪಿಸಿದರು. ಇದನ್ನೂ ಓದಿ: ನೂರಕ್ಕೆ ನೂರರಷ್ಟು ಸಮರ್ಥ್‌ ಗೆಲ್ಲಿಸುವ ಕೆಲಸ ಮಾಡ್ತೀನಿ: ಜಮೀರ್ ಅಹ್ಮದ್

1,97,257 ಕೋಟಿ ಮೊತ್ತದ ತೆರಿಗೆ ಮತ್ತು ಅನುದಾನದ ಪಾಲು ನಿರಾಕರಣೆ ಮಾಡಲಾಗಿದೆ. 14ನೇ ಮತ್ತು 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಬರಬೇಕಿದ್ದ 79,770 ಕೋಟಿ ಪಾಲಿನ ನಿರಾಕರಿಸಲಾಗಿದೆ. ಅವೈಜ್ಞಾನಿಕ ಜಿಎಸ್‌ಟಿ ಜಾರಿಯಿಂದ ಕರ್ನಾಟಕಕ್ಕೆ ಆಗಿರುವ ನಷ್ಟ 59,274 ಕೋಟಿ. ಹೊಸ ಜಿಎಸ್‌ಟಿ ಪರಿಷ್ಕರಣೆಯಿಂದ ಕರ್ನಾಟಕಕ್ಕೆ ಆಗಿರುವ ನೇರ ನಷ್ಟ 9,000 ಕೋಟಿ. ಜಲಜೀವನ್ ಮಿಷನ್ ಅಡಿಯಲ್ಲಿ 10,889 ಕೋಟಿ ಅನುದಾನ ಕೊಟ್ಟಿಲ್ಲ. ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ ಮತ್ತು ನಗರ ಸಂಸ್ಥೆಗಳಿಗೆ ನೀಡಬೇಕಾದ ವಿಶೇಷ ಅನುದಾನ 11,495 ಕೋಟಿ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿ ಬಿಡುಗಡೆ ಮಾಡದ ಹಣ 5,300 ಕೋಟಿ. 2025ರ ಪ್ರವಾಹ ಪರಿಹಾರದಲ್ಲಿ ಕೊಡಬೇಕಾದ ಬಾಕಿ 1,616 ಕೋಟಿ ಇನ್ನೂ ಕೊಟ್ಟಿಲ್ಲ. ಒಟ್ಟಾರೆಯಾಗಿ, ಬಿಜೆಪಿಯ ಹಣಕಾಸಿನ ಅನ್ಯಾಯದಿಂದ ಕರ್ನಾಟಕದ ಜನತೆಗೆ ಆಗಿರುವ ನೇರ ನಷ್ಟ 1,97,257 ಕೋಟಿ ಅಂತ ಇದೇ ವೇಳೆ ಸುರ್ಜೇವಾಲಾ ಅಂಕಿ ಅಂಶಗಳ ಸಮೇತ ಆರೋಪಿಸಿದರು.

ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ, ಆಲಮಟ್ಟಿ ಅಣೆಕಟ್ಟು ಎತ್ತರ, ಮೇಕೆದಾಟು, ಕಳಸಾ ಬಂಡೂರಿ ಇತ್ಯಾದಿ ಯೋಜನೆಗಳಿಗೆ ಅಗತ್ಯ ಅನುಮತಿ ಹಾಗೂ ಅನುದಾನ ಕೊಡದೇ ರಾಜ್ಯಕ್ಕೆ ಮತ್ತು ರಾಜ್ಯದ ರೈತರಿಗೆ ಕೇಂದ್ರ ವಂಚನೆ ಮಾಡ್ತಿದೆ. ಈ ಯೋಜನೆಗಳು ಉಪಚುನಾವಣೆ ನಡೆಯುತ್ತಿರುವ ದಾವಣಗೆರೆ, ಬಾಗಲಕೋಟೆ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಅವಶ್ಯಕ. ಆದರೆ ಮೋಸ, ತಾರತಮ್ಯ ನೀತಿ ತೋರಿಸ್ತಿರುವ ಬಿಜೆಪಿಗೆ ಉಪಕದನಗಳಲ್ಲಿ ಮತ ಕೇಳುವ ಯೋಗ್ಯತೆ ಇಲ್ಲ ಎಂದು ಸುರ್ಜೇವಾಲಾ ಕಿಡಿಕಾರಿದರು. ಇದನ್ನೂ ಓದಿ: ನಿಮ್ಮ ಗ್ಯಾರಂಟಿಗಳು ಜನರಿಗೆ ಇಷ್ಟವಾಗಿದ್ದರೆ ಐದೈದು ದಿನ ಪ್ರಚಾರ ಮಾಡೋ ಅಗತ್ಯ ಇತ್ತಾ? – ಸಿಎಂಗೆ ಹೆಚ್‌ಡಿಕೆ ಗುದ್ದು

Share This Article