ಬೆಂಗಳೂರಿನಲ್ಲಿ RCB vs CSK ಹಣಾಹಣಿ – ಚಿನ್ನಸ್ವಾಮಿ ಪಿಚ್‌ ರಿಪೋರ್ಟ್‌ ಹೇಗಿದೆ?

3 Min Read

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಜೊತೆಗೆ ತಮ್ಮದೇ ಪ್ರತಿಷ್ಠೆ ಮೆರೆಯುತ್ತಿರುವ ಆರ್‌ಸಿಬಿ vs ಸಿಎಸ್‌ಕೆ (RCB vs CSK) ತಂಡಗಳು ಇಂದು ಸೆಣಸಾಡಲು ಸಜ್ಜಾಗಿವೆ. ಕಳೆದ ಆವೃತ್ತಿಯಲ್ಲಿ ಲೀಗ್‌ನ 2 ಪಂದ್ಯಗಳಲ್ಲಿ ಆರ್‌ಸಿಬಿ ವಿರುದ್ಧ ಸೋತಿದ್ದ ಚೆನ್ನೈ ಸೇಡುತೀರಿಸಿಕೊಳ್ಳುವ ಜೊತೆಗೆ ಈ ಆವೃತ್ತಿಯಲ್ಲಿ ಮೊದಲ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ. ಆದ್ರೆ ಮೊದಲ ಪಂದ್ಯದಲ್ಲೇ ಅಬ್ಬರಿಸಿರುವ ಹಾಲಿ ಚಾಂಪಿಯನ್ಸ್‌ ಸಿಎಸ್‌ಕೆ ವಿರುದ್ಧ ಮತ್ತೊಂದು ಗೆಲುವಿಗಾಗಿ ಎದುರುನೋಡುತ್ತಿದೆ.

ಹೇಗಿದೆ ಪಿಚ್‌ ರಿಪೋರ್ಟ್‌?
ಇಡೀ ದೇಶದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಷ್ಟು (Chinnaswamy Stadium) ಸಮತೋಲಿತ ಪಿಚ್ ಮತ್ತೊಂದಿಲ್ಲ ಎಂಬ ಮಾತಿದೆ. ಆದ್ರೆ ವೈಟ್ ಬಾಲ್ ಕ್ರಿಕೆಟ್ ಅದರಲ್ಲೂ ಟಿ20 ವಿಚಾರಕ್ಕೆ ಬಂದಾಗ ಮಾತ್ರ ಇದು ಪಕ್ಕಾ ಬ್ಯಾಟಿಂಗ್ ಸ್ನೇಹಿ ಪಿಚ್. ಇನ್ನು ಬೌಂಡರಿಗಳಂತೂ ತೀರಾ ಚಿಕ್ಕದಾಗಿರುವುದರಿಂದ ಸಿಕ್ಸರ್ ಗಳ ಸುರಿಮಳೆಯಾಗುವುದು ಖಚಿತ.

ಪಿಚ್ ನಲ್ಲಿ ಸ್ಥಿರವಾದ ವೇಗ ಮತ್ತು ಬೌನ್ಸ್‌ ಇದೆ. ಹಾಗಾಗಿ ವೇಗದ ಬೌಲರ್ ಗಳು ಸರಿಯಾದ ಜಾಗದಲ್ಲಿ ಚೆಂಡು ಎಸೆದಲ್ಲಿ ಲಾಭ ಪಡೆಯಬಹುದು. ಇಲ್ಲಿನ ಮೊದಲ ಇನ್ನಿಂಗ್ಸ್ ಸರಾಸರಿ 179 ಇರುವ ಕಾರಣಕ್ಕೆ ಮತ್ತು ಸಂಜೆ ಬಳಿಕ ಇಬ್ಬನಿ ಬೀಳುವ ಸಾಧ್ಯತೆ ಇರುವುದರಿಂದ ಟಾಸ್ ವಿಜೇತರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

ಆರ್‌ಸಿಬಿಯೇ ಬಲಿಷ್ಠ
ಇತ್ತಂಡಗಳ ಬಲಾಬಲ ಲೆಕ್ಕ ಹಾಕಿದರೆ ಆರ್‌ಸಿಬಿ ಹೆಚ್ಚು ಬಲಿಷ್ಠವಾಗಿ ಕಂಡುಬರುತ್ತೆ. ಪ್ರಧಾನ ವೇಗಿ ಜೋಶ್ ಹೇಜಲ್ವುಡ್ , ಕಳೆದ ಸೀಸನ್ ನಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿದ್ದ ಯಶ್ ದಯಾಳ್ ಅವರು ತಂಡದಲ್ಲಿ ಇಲ್ಲದಿರುವುದು ದೊಡ್ಡ ಹೊಡೆತ ನೀಡಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಜಾಕೋಬ್ ಡಫಿ ಹೇಜಲ್ವುಡ್ ಅವರಿಗೆ ಪರ್ಫೆಕ್ಟ್ ಬದಲಿ ಆಟಗಾರರಾಗಿ ಮೂಡಿಬಂದಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಅವರು ತಮ್ಮ ಪಾಲಿನ ಕೆಲಸ ಅಚ್ಚುಕಟ್ಟಾಗ ಮಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಅಭಿನಂದನ್ ಸಿಂಗ್ ಅವರನ್ನ ಆಡಿಸಲು ತಂಡದ ಮ್ಯಾನೇಜ್ ಮೆಂಟ್ ಮನಸು ಮಾಡದೇ ಇದ್ದಲ್ಲಿ ಆಗ ಯುವ ವೇಗಿ ಮಂಗೇಶ್ ಯಾದವ್ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗಬಹುದು.

ಇನ್ನೂ ಆರ್‌ಸಿಬಿಯ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಹೀಗಾಗಿ ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳಿಗೆ ಹೆಚ್ಚು ಕೆಲಸ ಉಳಿದಿರಲಿಲ್ಲ. ಆರಂಭಿಕ ಫಿಲ್ ಸಾಲ್ಟ್ ಆಟಕ್ಕೆ ಕುದುರಿಕೊಳ್ಳುವುದನ್ನ ಆರ್‌ಸಿಬಿ ಫ್ಯಾನ್ಸ್‌ ಕೂಡ ಎದುರು ನೋಡ್ತಿದ್ದಾರೆ.

ಸಿಎಸ್‌ಕೆ ನಲ್ಲಿ ಏನು ಸಮಸ್ಯೆ?
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಂದಲ್ಲಿ ತಂಡದಲ್ಲಿ ಯಾವುದೂ ಸರಿಯಿಲ್ಲ ಎಂಬುದಂತೂ ಸ್ಪಷ್ಚ. ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಬ್ಯಾಟಿಂಗ್ ಸಂಪೂರ್ಣ ನೆಲಕಚ್ಚಿದ್ದರಿಂದ ಬೌಲರ್ ಗಳು ಯಾವ ಮ್ಯಾಜಿಕನ್ನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ಪಂಜಾಬ್ ವಿರುದ್ಧ 2ನೇ ಪಂದ್ಯದಲ್ಲಿ ಬ್ಯಾಟರ್ ಗಳು ಉತ್ತಮ ಆಟ ಪ್ರದರ್ಶಿಸಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದರೂ ಅದನ್ನು ಉಳಿಸಿಕೊಳ್ಳಲು ಬೌಲಿಂಗ್ ವಿಭಾಗದಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಧೋನಿ ಇಲ್ಲ ಎಂಬುದೊಂದೇ ತಂಡದ ಸಮಸ್ಯೆಯಾಗಿ ಉಳಿದಿಲ್ಲ.

ಏತನ್ಮಧ್ಯೆ ಬಹಳ ಲೆಕ್ಕಾಚಾರ ಇಟ್ಟಿಕೊಂಡು ಚೆನ್ನೈ ಫ್ರಾಂಚೈಸಿಯು ಟ್ರೇಡ್ ಮೂಲಕ ಖರೀದಿಸದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರಿಂದ ಉತ್ತಮ ಪ್ರದರ್ಶನ ಬಾರದೇ ಇರುವುದ ಸಹ ತಂಡದ ಮ್ಯಾನೇಜ್ ಮೆಂಟ್ ನ ಚಿಂತೆಗೆ ಕಾರಣವಾಗಿದೆ. ಆದರೆ ಯುವ ಆಟಗಾರ ಆಯುಷ್ ಮ್ಹಾತ್ರೆ ಭರವಸೆ ಮೂಡಿಸಿರುವುದು ತಂಡದ ಪ್ಲಸ್ ಪಾಯಿಂಟ್ ಆಗಿದೆ.

Share This Article