– ಬೆಂಗಾವಲು ಪಡೆಯ ಮೇಲೆ ಅಟ್ಯಾಕ್; ಗನ್ ಮ್ಯಾನ್ಗೆ ಥಳಿತ
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆ ಮಲಪ್ಪುರಂನಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಅವರ ಕಾರನ್ನು ತಡೆದು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಈ ವೇಳೆ ಮಧ್ಯಪ್ರವೇಶಿಸಿದ ಶಶಿ ತರೂರ್ ಅವರ ಗನ್ ಮ್ಯಾನ್ (Gun Man) ಮೇಲೂ ಹಲ್ಲೆ ನಡೆಸಲಾಗಿದೆ.
ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆ ಮಲಪ್ಪುರಂ ಜಿಲ್ಲೆಯ ವಂಡೂರಿನ ಚೆಲ್ಲಿತೋಡೆಯಲ್ಲಿ ಪ್ರಚಾರಕ್ಕೆ (Wandoor to campaign) ಆಗಮಿಸಿದ್ದ ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸಂಸದ ಶಶಿ ತರೂರ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಇದನ್ನೂ ಓದಿ: ಅನ್ನರಾಮಯ್ಯ ಅಲ್ಲ ಕನ್ನರಾಮಯ್ಯ, ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ಕನ್ನ: ಆರ್.ಅಶೋಕ್ ಟೀಕೆ
ಆಗಿದ್ದೇನು?
ಶಶಿ ತರೂರ್ ಅವರು ಕಾಂಗ್ರೆಸ್ ಅಭ್ಯರ್ಥಿ ಎಪಿ ಅನಿಲ್ ಕುಮಾರ್ (AP Anil Kumar) ಪರ ಪ್ರಚಾರಕ್ಕಾಗಿ ವಂಡೂರಿಗೆ ಬಂದಿದ್ದರು. ಅಲ್ಲಿಗೆ ಬೈಕ್ಗಳಲ್ಲಿ ಬಂದ ಜನರ ಗುಂಪೊಂದು ಬೆಂಗಾವಲು ವಾಹನ ತಡೆದು, ಶಶಿ ತರೂರ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಗನ್ ಮ್ಯಾನ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಗನ್ ಮ್ಯಾನ್ ಸ್ವತಃ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಮಲಪ್ಪುರಂನ ವಂಡೂರಿನಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಕಾರನ್ನು ತಡೆದ ವ್ಯಕ್ತಿ ಸೇರಿ ಮೂವರನ್ನು ಬಂಧಿಸಲಾಗಿದೆ. ಜೊತೆಗೆ ತರೂರ್ ಅವರನ್ನು ತಡೆದ ಗುಂಪು ಪ್ರಯಾಣಿಸುತ್ತಿದ್ದ 2 ಕಾರುಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ತಡೆದ ಯುವಕನನ್ನು ಕಾಳಿಕಾವು ನಿವಾಸಿ ಉಮರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇರಾನ್ಗೆ ಶಾಕ್: ನೌಕಾಪಡೆ ಉಪ ಗುಪ್ತಚರ ಮುಖ್ಯಸ್ಥ ಬೆಹ್ನಾಮ್ ರೆಝಾಯ್ ಹತ್ಯೆ – ಖಚಿತಪಡಿಸಿದ IRGC
ಒಟ್ಟು ಐವರ ವಿರುದ್ಧ ಪ್ರಕರಣ (FIR) ದಾಖಲಾಗಿದ್ದು, ಶಂಕಿತರನ್ನ ವಿಚಾರಣೆ ನಡೆಸಲಾಗುತ್ತಿದೆ. ಇನ್ನುಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ. ದಾಳಿಯ ಹಿಂದೆ ಯಾವುದೇ ರಾಜಕೀಯ ದ್ವೇಷ, ಪಿತೂರಿ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದಾಳಿಕೋರರು ಉದ್ದೇಶಪೂರ್ವಕವಾಗಿ ತೊಂದರೆ ಉಂಟುಮಾಡಲು ಪ್ರಯತ್ನಿಸಿದಂತೆ ಕಾಣುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ.


