ಹುಬ್ಬಳ್ಳಿ: ಜಿಲ್ಲೆಯಲ್ಲಿ ಮುಸ್ಲಿಂ ಜಿಮ್ ಟ್ರೈನರ್ನಿಂದ ಹಿಂದೂ ಯುವತಿಯರ ಮೇಲೆ ಲವ್ ಜಿಹಾದ್ (Love Jihad) ಆರೋಪ ಕೇಳಿಬಂದಿದೆ. ಈ ಸಂಬಂಧ ಎರಡು ಕುಟುಂಬಗಳ ನಡುವೆ ಗಲಾಟೆ ಆಗಿದ್ದು, ಶ್ರೀರಾಮಸೇನೆ ಇದರಲ್ಲಿ ಎಂಟ್ರಿಯಾಗಿದೆ. ಎರಡು ಕುಟುಂಬಗಳು ಆರೋಪ-ಪ್ರತ್ಯಾರೋಪ ಮಾಡಿದ್ದಾರೆ. ಕುಟುಂಬಗಳಿಂದ ದೂರು ಪಡೆದು ತನಿಖೆ ಮಾಡಲು ಪೊಲೀಸರು ಮುಂದಾಗಲಿದ್ದಾರೆ.
ತನ್ನ ಜಿಮ್ಗೆ ಬರುತ್ತಿದ್ದ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಅವರನ್ನು ಲವ್ ಜಿಹಾದ್ ಬಲೆಗೆ ಹಾಕಿಕೊಳ್ಳುತ್ತಿದ್ದ ಆರೋಪವೊಂದು ಮುಸ್ಲಿಂ ಜಿಮ್ ಟ್ರೈನರ್ ಮೇಲೆ ಕೇಳಿಬಂದಿದೆ. ಮಸಲ್ ಫ್ಯಾಕ್ಟರಿ ಜಿಮ್ ಟ್ರೈನರ್ ಸಮೀರ್ ಮುಲ್ಲಾ ಎನ್ನುವ ಯುವಕನ ಮೇಲೆ ಈ ಗಂಭೀರ ಆರೋಪ ಕೇಳಿಬಂದಿದೆ. ತನ್ನ ಜೀಮ್ಗೆ ಬರುತ್ತಿದ್ದ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಸಮೀರ್, ಅವರನ್ನು ಪುಸಲಾಯಿಸಿ ಅವರ ಜೊತೆಗೆ ಸಲುಗೆ ಬೆಳೆಸುತ್ತಿದ್ದ. ಬಳಿಕ ಅವರ ಜೊತೆ ಖಾಸಗಿ ಕ್ಷಣಗಳ ಫೋಟೋ ಮತ್ತು ವಿಡಿಯೋ ತೆಗೆದುಕೊಂಡು, ಅದನ್ನು ಇಟ್ಟುಕೊಂಡು ಯುವತಿಯರಿಗೆ ಬ್ಲಾಕ್ ಮೇಲೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಹುಬ್ಬಳ್ಳಿ ಪ್ರಕರಣ – ಜಿಮ್ ಟ್ರೈನರ್ ವಿರುದ್ಧ ಕ್ರಮಕ್ಕೆ ಸೂಚಿಸಿದ ಪರಮೇಶ್ವರ್
ಸಮೀರ್ ಇದೇ ರೀತಿಯಲ್ಲಿ ಹುಬ್ಬಳ್ಳಿ ವಿಕಾಸ್ ನಗರದ ಯುವತಿ ಜೊತೆಗೆ ಸ್ನೇಹ ಬೆಳಸಿ, ಬಳಿಕ ಆಕೆಯ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿರುವ ಆರೋಪ ಕೇಳಿಬಂದಿದೆ. ಇದರಿಂದ ಸಮೀರ್ ಮನೆಗೆ ತೆರಳಿದ ಶ್ರೀರಾಮಸೇನೆ, ಭಜರಂಗದ ಕಾರ್ಯಕರ್ತರು ಈ ಬಗ್ಗೆ ವಿಚಾರಿಸಿ ಬಳಿಕ ಆತನನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಮೀರ್ ಕುಟುಂಬಸ್ಥರು, ಯುವತಿಯ ಮನೆಗೆ ನುಗ್ಗಿ ಆಕೆ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿ ಸ್ಥಳೀಯರು, ಯುವಕ, ಯುವತಿಯ ಕುಟುಂಬಸ್ಥರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪರಸ್ಪರ ಗಲಾಟೆ ಮಾಡಿಕೊಂಡ ಪರಿಣಾಮ ಹುಬ್ಬಳ್ಳಿಯಲ್ಲಿ ಬಿಗುವಿನ ವಾತವರಣವಿದೆ.
ಜಿಮ್ ಟ್ರೈನರ್ ಸಮೀರ್ ನನ್ನ ಮಗಳಿಗೆ ತಲೆ ಕೆಡಿಸಿದ್ದಾನೆ. ನನ್ನ ಮಗಳಿಗೂ ಸಮೀರ್ಗೂ ಯಾವುದೇ ಸಂಬಂಧ ಇಲ್ಲ. ಕಳೆದ ನಾಲ್ಕೈದು ದಿನದಿಂದ ನನ್ನ ಮಗಳಿಗೆ ಸಮೀರ್ ಮತ್ತು ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದಾರೆ ಅಂತ ಯುವತಿ ಪೋಷಕರು ಆರೋಪ ಮಾಡಿದ್ದಾರೆ. ಇತ್ತ, ಸಮೀರ್ ಹಾಗೂ ಯುವತಿ ಇಬ್ಬರು ಮೂರು ವರ್ಷದಿಂದ ರಿಲೇಶನ್ ಶಿಪ್ನಲ್ಲಿದ್ದಾರೆ. ಯುವತಿಯ ಕುಟುಂಬಸ್ಥರು ನಮ್ಮೊಂದಿಗೆ ಅನ್ಯೋನ್ಯವಾಗಿದ್ದರು. ನಾವೆಲ್ಲ ಸೇರಿಯೇ ಪ್ರವಾಸಕ್ಕೆ, ಶಾಪಿಂಗ್ಗೆ ಹೋಗ್ತಿದ್ವಿ, 23 ವರ್ಷದ ನನ್ನ ತಮ್ಮನನ್ನು ಬೆಳಗ್ಗೆ 7 ಗಂಟೆಗೆ ಎಸ್ಎಸ್ಕೆ ಸಮಾಜದವರು ನಮ್ಮ ಮನೆಗೆ ಬಂದು ಕಿಡ್ನ್ಯಾಪ್ ಮಾಡಿದ್ದಾರೆ. ನನ್ನ ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಜೀಮ್ ಟ್ರೈನರ್ ಸಹೋದರಿ ತೈಸಿಮ್ ಮುಲ್ಲಾ ಆರೋಪಿಸಿದ್ದಾರೆ.
ಈ ವೇಳೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಯುವತಿ ಕುಟುಂಬಸ್ಥರು, ಹಿಂದೂಪರ ಸಂಘಟನೆಗಳ ಮುಖಂಡರ ಜೊತೆಗೆ ಮಾತುಕತೆ ನಡೆಸಿದ ಬಳಿಕ, ಪರಿಸ್ಥಿತಿ ಬಹಳಷ್ಟು ಸೂಕ್ಷ್ಮವಾಗಿದೆ. ಎರಡು ಕಡೆಯಿಂದ ಏನು ದೂರು ಬರುತ್ತೆ ಅದನ್ನು ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದಿದ್ದಾರೆ. ಸದ್ಯ ಸಮೀರ್ ಕಿಮ್ಸ್ ಆಸ್ಪತ್ರೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎರಡು ಕಡೆಯ ದೂರು ಬಳಿಕ ಪ್ರಕರಣ ದಾಖಲಿಕೊಂಡು ಪೊಲೀಸರ ತನಿಖೆ ಮಾಡಲಿದ್ದಾರೆ. ಪೊಲೀಸ ತನಿಖೆಯಿಂದ ಸತ್ಯಾಂಶ ಬಹಿರಂಗವಾಗಬೇಕಿದೆ.ಇದನ್ನೂ ಓದಿ: ಜ್ಯೂಸ್ನಲ್ಲಿ ಮತ್ತಿನ ಔಷಧ ಬೆರಸಿಕೊಟ್ಟು ಸಮೀರ್ ಅತ್ಯಾಚಾರ ಮಾಡಿದ್ದಾನೆ – ಸಂತ್ರಸ್ತೆ ಸ್ಫೋಟಕ ಹೇಳಿಕೆ

