ಬೆಂಗಳೂರು ಜೀವನಾಡಿ ಸಾರಥಿಗಳಿಗೆ ಸಂಕಷ್ಟ – ನಸುಕಿನಲ್ಲೇ ಕ್ಯೂ ನಿಂತ್ರೂ ಸಿಗ್ತಿಲ್ಲ ಆಟೋ ಗ್ಯಾಸ್

4 Min Read

– ರಾಜಧಾನಿಯಲ್ಲಿ ಆಟೋ ಚಾಲಕರ ಗೋಳಾಟ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಎಲ್‌ಪಿಜಿ (LPG) ಸಮಸ್ಯೆ ಉದ್ಭವಿಸಿದೆ. ಆಟೋಗ್ಯಾಸ್ ಸಿಗದೇ ಚಾಲಕರ ಪರದಾಟ ಆ ದೇವರಿಗೆ ಪ್ರೀತಿ.. ಸಂಸಾರದ ಬಂಡಿ ಸಾಗಿಸೋಕೆ ಸಾರಥಿಗಳು ಒದ್ದಾಡ್ತಿದ್ದಾರೆ. ಹಗಲು-ರಾತ್ರಿ ಗ್ಯಾಸ್‌ಗಳ ಮುಂದೆ ಕ್ಯೂ ನಿಲ್ಲೋದೇ ಆಯ್ತು. ಗ್ಯಾಸ್ ತುಂಬಿ ಆಟೋ (Auto) ಓಡಿಸೋದೆ ಆಮೇಲಿನ ಮಾತು. ಯಾವ ಬಂಕ್ ಮುಂದೆ ನೋಡಿದ್ರೂ ಕಿಲೋಮೀಟರ್‌ಗಟ್ಟಲೇ ಹನುಮನ ಬಾಲದಂತೆ ಆಟೋಗಳ ಸಾಲು ಸಾಮಾನ್ಯವಾಗಿ ಬಿಟ್ಟಿದೆ. ಯಾವ ಬಂಕ್ ನೋಡಿದ್ರೂ ಕನಿಷ್ಠ 100 ರಿಂದ 200 ಆಟೋಗಳು ಇದ್ದೇ ಇರ್ತವೆ. ಮನೆ ಮಕ್ಕಳು ಬೀದಿಯಲ್ಲಿ ನಿಲ್ಲೋ ಸ್ಥಿತಿ ಬಂದೊದಗಿದೆ.

ಬೆಳಗಿನ ಜಾವ 3 ಗಂಟೆಗೆ ಬಂದು ಕ್ಯೂ ನಿಂತ್ರೂ ಗ್ಯಾಸ್ ಸಿಗ್ತಿಲ್ಲ. ನಿದ್ದೆ, ತಿಂಡಿ, ಊಟ, ಎಲ್ಲಾ ಬಿಟ್ಟು ಗ್ಯಾಸ್ ಗಾಗಿ ಕಾದು ಕಾದು ಬಂಕ್ ಮುಂದೆಯೇ ನಿದ್ರೆ ಮಾಡುವ ಪರಿಸ್ಥಿತಿ ಇದೆ. ಗೊರಗುಂಟೆ ಪಾಳ್ಯದ ಗ್ಯಾಸ್ ಬಂಕ್ (Gas Bunk) ಬಳಿ ಕಿಮೀ ಕ್ಯೂ ಕಂಡು ಬಂತು. ಆರ್‌ಎಂಸಿ ಯಾರ್ಡ್, ಗೋವರ್ಧನ್‌ವರೆಗೂ ಸಾಲು ಮುಂದುವರಿದಿತ್ತು. ಸ್ಟಾಕ್ ಖಾಲಿ ಆಗಿದ್ರೂ ಆಟೋ ಚಾಲಕರು ಕಾದು ನಿಂತಿದ್ರು.

ಸುಬ್ರಹ್ಮಣ್ಯ ನಗರ ಇಂಡಿಯನ್ ಆಯಿಲ್ (Indian Oil) ಬಂಕ್ ಬಳಿ ಕಿಮೀ ಗಟ್ಟಲೇ ಸಾಲು ಕಂಡು ಬಂತು. ಸುಬ್ರಹ್ಮಣ್ಯ ನಗರದ ಬಂಕ್‌ನಲ್ಲಿ ಆಟೋ ಗ್ಯಾಸ್ ಲಭ್ಯವಿದ್ದು, 400 ರೂಪಾಯಿಗಷ್ಟೇ ಆಟೋ ಗ್ಯಾಸ್ ವಿತರಿಸಲಾಗಿದೆ. ಇದನ್ನೂ ಓದಿ: ಭಾರತಕ್ಕೆ ಬೇಕಾದ ತೈಲ, ಎಲ್‌ಎನ್‌ಜಿ ಪೂರೈಕೆಗೆ ಉತ್ಪಾದನೆ ಜಾಸ್ತಿ ಮಾಡಲು ಸಿದ್ಧ: ಭಾರತಕ್ಕೆ ರಷ್ಯಾ ಭರವಸೆ

ಬೆಂಗಳೂರಿನಲ್ಲಿ ಪರಿಸ್ಥಿತಿ ಹೇಗಾಗಿದೆ ಎಂದ್ರೆ ಅದೃಷ್ಟ ಇದ್ದವರಿಗೆ ಮಾತ್ರ ಎಲ್‌ಪಿಜಿ ಸಿಗ್ತಿದೆ. ಬೆಳಿಗ್ಗೆ 6 ಗಂಟೆಗೆ ಬಂದು ಕಿಲೋಮೀಟರ್‌ಗಟ್ಟಲೆ ಕ್ಯೂ ನಿಂತು ಗಂಟೆಗಟ್ಟಲೆ ಕಾದರೆ ಮಾತ್ರ ಆಟೋಗೆ ಎಲ್‌ಪಿಜಿ ಸಿಗ್ತಿದೆ. ಬೆಳಿಗ್ಗೆ 6 ಗಂಟೆಯಿಂದ ಬಂದ್ರೆ 12 ಗಂಟೆ ಸುಮಾರಿಗೆ ಎಲ್‌ಪಿಜಿ ಸಿಗುತ್ತಿದೆ. ದಿನವಿಡಿ ಕಾದರೆ ನಾವು ದುಡಿಮೆ ಮಾಡುವುದು ಯಾವಾಗ ಅನ್ನೋದು ಆಟೋ ಚಾಲಕರ ಅಳಲಾಗಿದೆ. ಫುಲ್ ಟ್ಯಾಂಕ್ ಮಾಡಿ ಎಂದರೆ 300, 400 ರೂಪಾಯಿ ಲೆಕ್ಕದಲ್ಲಿ ಗ್ಯಾಸ್ ತುಂಬುತ್ತಿದ್ದಾರೆ. ಗ್ಯಾಸ್ ಸಮಸ್ಯೆ ಚಾಲಕರಿಗೆ ಪರದಾಟವಾದ್ರೆ ಬಂಕ್ ಸಿಬ್ಬಂದಿಗೂ ಪೀಕಲಾಟ ಎಂಬಂತಾಗಿದೆ.

ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯ ಗ್ಯಾಸ್ ಬಂಕ ಬಳಿ ಆಟೋ ಕ್ಯೂ ಮುಂದುವರಿದಿದೆ. ಎರಡು ದಿನಗಳಿಂದ ಆಟೋ ಕ್ಯೂ ಮುಗೀತಿಲ್ಲ. ಟೋಲ್ ಗೇಟ್ ಸರ್ಕಲ್ ನಿಂದ ಹೊಸಹಳ್ಳಿ ರಸ್ತೆವರೆಗೂ ಆಟೊಗಳ ಸಾಲು ಕಂಡು ಬಂದಿದೆ. ಬೆಂಗಳೂರಿನಲ್ಲಿ ಆಟೋ, ಕ್ಯಾಬ್ ಗ್ಯಾಸ್ ಸಮಸ್ಯೆ ತೀವ್ರವಾಗಿ ಕಾಡ್ತಿದೆ. ಶೇಷಾದ್ರಿಪುರಂ ಗ್ಯಾಸ್ ಬಂಕ್ ಮುಂದೆ ಆಟೋ, ಕ್ಯಾಬ್‌ಗಳು ಬೆಳ್ಗೆ 5 ಗಂಟೆಯಿಂದಲೇ ಪಾಳಿಯಲ್ಲಿ ನಿಂತಿದ್ವು.

ನೇಣು ಹಾಕಿಕೊಳ್ಳೋದೊಂದೇ ದಾರಿ
ಬೆಂಗಳೂರಿನ ಬಹುತೇಕ ಗ್ಯಾಸ್ ಬಂಕ್‌ಗಳ ಮುಂದೆ ನೋ ಸ್ಟಾಕ್ ಬೋರ್ಡ್ ಸಾಮಾನ್ಯವಾಗಿದೆ. ಆಟೋದಲ್ಲಿ ಗ್ಯಾಸ್ ಇಲ್ಲದೇ ಚಾಲಕರು ಬಂಕ್‌ಗಳ ಮುಂದೆ ಆಟೋಗಳು ತಳ್ಳಿಕೊಂಡು ಬರ್ತಿದ್ದಾರೆ. ಗ್ಯಾಸ್ ಸಮಸ್ಯೆ ಪರಿಹರಿಸದಿದ್ರೆ ನಾವು ವೋಟ್‌ ಹಾಕಲ್ಲ ಅಂತ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟೋ ಗ್ಯಾಸ್ ಸಮಸ್ಯೆ ಜಾಸ್ತಿ ಆಗ್ತಿದೆ. ಗ್ಯಾಸ್ ಬೆಲೆಯೂ ಈಗ ಜಾಸ್ತಿ ಮಾಡಿದ್ದಾರೆ. ಆಟೋ ಮೀಟರ್ ದರ ಜಾಸ್ತಿ ಮಾಡಬೇಕು ಅಂತ ಆಗ್ರಹಿಸಿದ್ದಾರೆ. ಗ್ಯಾಸ್ ಸಮಸ್ಯೆ ಪರಿಹಾರ ಮಾಡದೇ ಹೋದ್ರೆ ನಾವು ನೇಣು ಹಾಕಿಕೊಳ್ಳೋದೊಂದೇ ದಾರಿ ಅಂತ ನೋವಿನ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಇರಾನ್‌ ಸಮುದ್ರ ಬಳಸದೇ ಹಾರ್ಮುಜ್ ಜಲಸಂಧಿ ಪ್ರವೇಶಿಸಿದ ಮೂರು ಒಮಾನ್ ಹಡಗುಗಳು

ಕಾಸು ಕೊಟ್ಟವರಿಗಷ್ಟೇ ಫುಲ್ ಟ್ಯಾಂಕ್
ಮೊದಲೇ ಎಲ್‌ಪಿಜಿ ಸಿಗದೇ ಆಟೋ ಚಾಲಕರು ಒದ್ದಾಡ್ತಿದ್ದಾರೆ. ಬದುಕಿನ ಬಂಡಿ ಸಾಗಿಸೋದೆ ದುಸ್ತರವಾಗಿದೆ. ಅಂಥಾದ್ರಲ್ಲಿ ಕಾಸು ಕೊಟ್ಟವರಿಗೆ ಗ್ಯಾಸು ಅನ್ನೊ ಆರೋಪ ಕೇಳಿ ಬಂದಿದೆ. ನೃಪತುಂಗ ರಸ್ತೆಯ ಬಂಕ್‌ನಲ್ಲಿ ಫುಲ್ ಟ್ಯಾಂಕ್‌ಗೆ 100 ರೂಪಾಯಿ ಕೊಟ್ಟವರಿಗಷ್ಟೇ ಗ್ಯಾಸ್ ಕೊಡಲಾಗ್ತಿದೆ ಎಂದು ಚಾಲಕರು ಸರ್ಕಾರಿ ಸ್ವಾಮ್ಯದ ಬಂಕ್ ವಿರುದ್ಧವೇ ಲಂಚದ ಆರೋಪ ಮಾಡಿದ್ದಾರೆ. ಇನ್ನು ಬಂಕ್ ಮ್ಯಾನೇಜರ್, ಆರೋಪ ನಿರಾಕರಿಸಿದ್ದಾರೆ. ಇನ್ನು ಲಾಲ್‌ಬಾಗ್ ಪಶ್ಚಿಮ ಗೇಟ್ ಬಳಿಯ ಬಂಕ್‌ನಲ್ಲೂ ಚಿತ್ರಣವೇನೂ ಭಿನ್ನವಾಗಿರಲಿಲ್ಲ. ನಯಾರಾ ಪೆಟ್ರೋಲ್ ಬಂಕ್ ಬಳಿ ಆಟೋಗಳ ಕ್ಯೂ ಕಂಡು ಬಂತು. ನಿನ್ನೆ ಒಂದೇ ದಿನ ಆಟೋಗಳಿಗೆ ಏಳು ಸಾವಿರ ಲೀಟರ್ ಗ್ಯಾಸ್ ಹಾಕಲಾಗಿದೆ.

ಒಂದ್ಕಡೆ ಆಟೋ ಗ್ಯಾಸ್ ಗಾಗಿ ಡ್ರೈವರ್ ಗಳ ಪರದಾಟ ಮುಂದುವರಿದ್ರೆ, ಮತ್ತೊಂದ್ ಕಡೆ ಕೆಲ ಆಟೋಗಳಲ್ಲಿ ಮೀಟರ್‌ಗಿಂತ 10% ಹೆಚ್ಚು ಹಣ ಕೊಡಲು ಮನವಿ ಮಾಡಿಕೊಳ್ಳಲಾಗ್ತಿದೆ. ಆಟೋ ಗ್ಯಾಸ್ ದರ ಏರಿಕೆ ಅಭಾವದಿಂದ ಹೆಚ್ಚವರಿ ಹಣಕ್ಕೆ ಪ್ರಯಾಣಿಕರ ಬಳಿ ಮನವಿ ಮಾಡ್ತಿದ್ದಾರೆ. ಆಟೋ ಚಾಲಕರೊಬ್ರು ಈ ರೀತಿ ಸ್ಟೀಕರ್ ಅಂಟಿಸಿದ್ದಾರೆ. ಇದನ್ನೂ ಓದಿ: ಭಾರತದತ್ತ ಹೊರಟಿದ್ದ ಇರಾನ್ ಕಚ್ಚಾ ತೈಲ ಹೊತ್ತ ಹಡಗು ಚೀನಾದತ್ತ ಪ್ರಯಾಣ

ಬೆಂಗಳೂರಲ್ಲಿ ಆಟೋಗಳ ಓಡಾಟ ಸಂಖ್ಯೆ ಇಳಿಕೆ
ಎಲ್‌ಪಿಜಿ ಅಭಾವದಿಂದಾಗಿ ರಾಜಧಾನಿಯಲ್ಲಿ ಆಟೋ ಸಂಚಾರ ಸ್ತಬ್ಧವಾಗುವ ಹಂತಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಆಟೋಗಳ ಓಡಾಟ ಸಂಖ್ಯೆ ಇಳಿಕೆಯಾಗಿದೆ. ಬೆರಳೆಣಿಕೆ ಅಷ್ಟು ಆಟೋಗಳು ಮಾತ್ರ ಓಡಾಡ್ತಿವೆ. ಗ್ಯಾಸ್ ಇಲ್ಲದೇ ಆಟೋಗಳು ನಿಂತಲ್ಲೇ ನಿಂತಿವೆ. ಬೆಂಗಳೂರಿನಲ್ಲಿ ಶೇ.40 ರಷ್ಟು ಆಟೋಗಳ ಓಡಾಟ ಸ್ಥಗಿತವಾಗಿವೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಆಟೋ ಇರ್ತಾ ಇದ್ವು. ಆದರೆ ಗ್ಯಾಸ್ ಅಭಾವದಿಂದ ಆಟೋಗಳ ಓಡಾಟ ಕಡಿಮೆ ಆಗಿವೆ.

Share This Article