ಕೊಪ್ಪಳ: ಹನುಮ ಜಯಂತಿ (Hanuman Jayanti) ಹಿನ್ನೆಲೆ ಇಂದು ಅಂಜನಾದ್ರಿಗೆ (Anjanadri) ಹನುಮ ಮಾಲಾಧಾರಿಗಳು ಆಗಮಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು.
ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದ (Koppal) ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜಯಂತಿ ಅಂಗವಾಗಿ ಹನುಮಮಾಲೆಯನ್ನು ಧಾರಣೆ ಮಾಡಿರುವ ನೂರಾರು ಮಾಲಾಧಾರಿಗಳು ಆಗಮಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು. ಇದನ್ನೂ ಓದಿ: ಹುಚ್ಚುರಾಯಸ್ವಾಮಿ ರಥೋತ್ಸವದಲ್ಲಿ ಭಾಗಿಯಾದ ಬಿಎಸ್‌ವೈ ಕುಟುಂಬ
ಹನುಮ ಜಯಂತಿಯ ಅಂಗವಾಗಿ 11 ದಿನಗಳ ಮುಂಚಿತವಾಗಿಯೇ ಹನುಮಮಾಲೆಯನ್ನು ಧಾರಣೆ ಮಾಡಿರುತ್ತಾರೆ. ಮಾಲಾಧಾರಿಗಳು ಕಠಿಣ ವ್ರತವನ್ನು ಕೈಗೊಂಡು ಹನುಮನ ಆರಾಧನೆಯನ್ನು ಮಾಡುತ್ತಾರೆ. ಹನುಮ ಜಯಂತಿಯಂದು ಮಾಲಾಧಾರಿಗಳು ಇರುಮುಡಿಯೊಂದಿಗೆ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ, ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಮಾಲೆಯನ್ನು ವಿಸರ್ಜನೆ ಮಾಡಿದರು.
ಇನ್ನೂ ಹನುಮ ಜಯಂತಿ ಇರುವ ಕಾರಣಕ್ಕೆ ತಾಲೂಕು ಸೇರಿದಂತೆ ನಾನಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ, ಹನುಮನ ದರ್ಶನ ಪಡೆದುಕೊಂಡಿದ್ದಾರೆ.
ವಿಶೇಷ ಪೂಜೆ ಸಲ್ಲಿಕೆ:
ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜಯಂತಿ ಅಂಗವಾಗಿ ಆಂಜನೇಯಸ್ವಾಮಿ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ. ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ, ಹನುಮಾನ ಚಾಲಿಸ್ ಪಠಣ ಸೇರಿದಂತೆ ನಾನಾ ಧಾರ್ಮಿಕ ಪೂಜೆ ಮಾಡಲಾಗಿದೆ. ನಂತರ ಹನುಮ ಮಾಲಾಧಾರಿಗಳು ಮಾಲೆ ವಿಸರ್ಜನೆ ಅಂಗವಾಗಿ ಬೆಟ್ಟದ ಮೇಲ್ಭಾಗದಲ್ಲಿ ಲೋಕ ಕಲ್ಯಾಣಕ್ಕಾಗಿ ಹೋಮ, ಹವನ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಾಲೆ ವಿಸರ್ಜನೆಗೆ ಬಂದಿರುವ ಮಾಲಾಧಾರಿಗಳು ಹನುಮನ ದರ್ಶನ ಪಡೆದುಕೊಂಡು ಮಾಲೆ ವಿಸರ್ಜಿಸಿದರು. ಇದನ್ನೂ ಓದಿ: ಯೋಗೇಶ್ ಗೌಡ ಹತ್ಯೆ ಕೇಸ್ – ಏ.9ಕ್ಕೆ ತೀರ್ಪು ಕಾಯ್ದಿರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ


