ಒಂದೆಡೆ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಇದರ ನಡುವೆ ಪೂರ್ವ ಏಷ್ಯಾದಲ್ಲಿ ಭೌಗೋಳಿಕ ರಾಜಕೀಯ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ತೈವಾನ್ (Taiwan) ಮೇಲೆ ಚೀನಾ (China) ಯಾವುದೇ ಕ್ಷಣದಲ್ಲಿ ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ತಕ್ಕ ಉತ್ತರ ಕೊಡಲು ತೈವಾನ್ ಸಹ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
2025ರ ಅಂಕಿಅಂಶಗಳ ಪ್ರಕಾರ, ಚೀನಾ ಸೇನೆಯು ದಿನಕ್ಕೆ ಸುಮಾರು 10ಕ್ಕೂ ಹೆಚ್ಚು ಬಾರಿ ತೈವಾನ್ ವಾಯುಪ್ರದೇಶ ಮತ್ತು ಜಲಪ್ರದೇಶದೊಳಗೆ ನುಸುಳಿದೆ. ಇದು 2024ಕ್ಕೆ ಹೋಲಿಸಿದರೆ 22% ರಷ್ಟು ಹೆಚ್ಚಳ ಕಂಡಂತಾಗಿದೆ. ವರ್ಷದಲ್ಲಿ 3,700ಕ್ಕೂ ಹೆಚ್ಚು ಬಾರಿ ಮಿಲಿಟರಿ ತರಬೇತಿ ಸೋಗಿನಲ್ಲಿ ಆಕ್ರಮಣ ನಡೆದಿದೆ. ಏಪ್ರಿಲ್ 2025ರಲ್ಲಿ ನಡೆದ ತರಬೇತಿ ವೇಳೆ ತೈವಾನ್‌ನ ಗಾವೊಕ್ಸಿಯಾಂಗ್‌ನಲ್ಲಿರುವ ಯೋಂಗ್’ಆನ್ ನೈಸರ್ಗಿಕ ಅನಿಲ ಟರ್ಮಿನಲ್ಸ್ ಸೇರಿದಂತೆ ಪ್ರಮುಖ ಇಂಧನ ಮೂಲಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ಮಿಲಿಟರಿ ಬಜೆಟ್ ಹೆಚ್ಚಿಸಿದ ತೈವಾನ್
ಚೀನಾ ಬೆದರಿಕೆ ಹೆಚ್ಚಾಗುತ್ತಿದ್ದಂತೆ ಸುಮಾರು 370000 ಕೋಟಿ ರೂ. ವಿಶೇಷ ರಕ್ಷಣಾ ಬಜೆಟ್‌ನ್ನು ಮಿಲಿಟರಿಗಾಗಿ ಮೀಸಲಿಟ್ಟಿದೆ. ಇದು ತೈವಾನ್‌ನ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್ ಆಗಿದೆ. ದೀರ್ಘಾವಧಿಯ ದೇಶೀಯ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಬಲಪಡಿಸುವುದು ಮತ್ತು ಸನ್ನದ್ಧತೆಯನ್ನು ಹೆಚ್ಚಿಸುವುದು ಬಜೆಟ್‌ನ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಪುಟ್ಟ ದ್ವೀಪ ರಾಷ್ಟ್ರ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಚೀನಾದ ವಿರುದ್ಧ ಯುದ್ಧಕ್ಕೂ ಸೈ ಎಂದು ತೊಡೆ ತಟ್ಟಿದೆ.
ತೈವಾನ್ ಎಲ್ಲಿದೆ?
ತೈವಾನ್ ದ್ವೀಪ ಸಮೂಹವು ಅಧಿಕೃತವಾಗಿ ರಿಪಬ್ಲಿಕ್ ಆಫ್ ಚೈನಾದಲ್ಲಿದೆ ಎಂದು ಚೀನಾ ವಾದಿಸಿತ್ತಿದೆ. ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರದ ಭಾಗದಲ್ಲಿದೆ. ತೈಪೆ ಇದರ ರಾಜಧಾನಿಯಾಗಿದೆ.
ತೈವಾನ್‌ನಲ್ಲಿ ಇರುವ ಆಸ್ಟ್ರೋನೇಷಿಯನ್ ಬುಡಕಟ್ಟು ಜನ. ಅವರು ದಕ್ಷಿಣ ಚೀನಾದಿಂದ ಬಂದವರು ಎಂದು ಭಾವಿಸಲಾಗಿದೆ. 17 ನೇ ಶತಮಾನದಿಂದ, ಗಮನಾರ್ಹ ಸಂಖ್ಯೆಯ ವಲಸಿಗರು ಚೀನಾದಿಂದ ಬರಲು ಪ್ರಾರಂಭಿಸಿದರು. ಹೆಚ್ಚಿನವರು ಫುಜಿಯಾನ್ (ಫುಕಿಯನ್) ಪ್ರಾಂತ್ಯದಿಂದ ಹೊಕ್ಲೋ ಚೈನೀಸ್ ಅಥವಾ ಹಕ್ಕಾ ಚೈನೀಸ್, ಹೆಚ್ಚಾಗಿ ಗುವಾಂಗ್‌ಡಾಂಗ್‌ನಿಂದ ಬಂದವರು.
1949ರಲ್ಲಿ ಚೀನಾದಿಂದ ಬೇರೆಯಾಗಿದ್ದ ತೈವಾನ್
ತೈವಾನ್ ದ್ವೀಪವು ಹಿಂದೆ ಚೀನಾದ ಭಾಗವೇ ಆಗಿತ್ತು. ಆದರೆ 1949 ರಲ್ಲಿ ನಡೆದ ಅಂತರ್ಯುದ್ಧದ ಸಮಯದಲ್ಲಿ ತೈವಾನ್ ಚೀನಾದಿಂದ ಬೇರ್ಪಟ್ಟಿತ್ತು. ಆದರೆ, ಚೀನಾ ತೈವಾನ್ ದ್ವೀಪವನ್ನು ತನ್ನ ಸ್ವಂತ ಪ್ರದೇಶ ಎಂದು ಹೇಳುತ್ತದೆ. ಅಷ್ಟೇ ಅಲ್ಲ ತೈವಾನ್ ವಶಕ್ಕೆ ಪಡೆಯಲು ಮಿಲಿಟರಿ ಕಾರ್ಯಾಚರಣೆ ಮಾಡಲು ಹಿಂಜರಿಯುವುದಿಲ್ಲ ಎಂದೂ ಘೋಷಿಸಿದೆ.
ಚೀನಾ ಒತ್ತಡಕ್ಕೆ ಮಣಿಯದ ತೈವಾನ್
ಚೀನಾ ಎಷ್ಟೇ ಒತ್ತಡ ಹೇರಿದರೂ ಅದರ ಭಾಗವಾಗುವುದಿಲ್ಲ ಎಂದು ತೈವಾನ್ ಈಗಾಗಲೇ ಘೋಷಿಸಿದೆ. ಮತ್ತೊಂದು ಕಡೆ ತೈವಾನನ್ನು ತನ್ನ ಜತೆ ವಿಲೀನಗೊಳಿಸಲು ಚೀನಾ ಒತ್ತಡ ಹೇರುತ್ತಿದೆ. ಬೆದರಿಕೆಯ ತಂತ್ರವಾಗಿ ತೈವಾನ್ ಜಲಸಂಧಿಯ ಮೇಲೆ ಚೀನಾದ ಹಲವಾರು ವಿಮಾನಗಳು ಕಳೆದ ತಿಂಗಳು ಹಾರಾಡಿದ್ದವು.
ಭಯದಲ್ಲೇ ಇರುವ ತೈವಾನ್
1949ರಿಂದಲೇ ತೈವಾನ್ ತನ್ನನ್ನು ತಾನು ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. ಪ್ರಜಾಪ್ರಭುತ್ವ ಸರ್ಕಾರ ಅಸ್ಥಿತ್ವದಲ್ಲಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಯಕರು ಮತ್ತು ಅದರ ಸಶಸ್ತ್ರ ಪಡೆಗಳಲ್ಲಿ ಸುಮಾರು 300,000 ಸಕ್ರಿಯ ಪಡೆಗಳನ್ನು ಹೊಂದಿದೆ. ಪ್ರಜಾಪ್ರಭುತ್ವ ದೇಶವಾಗಿರುವ ತೈವಾನ್ ಸದಾ ಚೀನಾ ದಾಳಿಯ ಭೀತಿಯಲ್ಲಿಯೇ ಬದುಕುತ್ತಿದೆ.
ಚೀನಾದ ಆಸೆ ಚಿಗುರಿಸಿದ ಉಕ್ರೇನ್ ಮೇಲಿನ ರಷ್ಯಾ ದಾಳಿ
ಉಕ್ರೇನ್ ಮೇಲೆ ರಷ್ಯಾ ದಾಳಿಯ ನಂತರ ತೈವಾನ್ ವಿಚಾರದಲ್ಲಿ ಚೀನಾ ಕಠಿಣ ಧೋರಣೆ ತಳೆದಿದೆ. ಉಕ್ರೇನ್ ಅನ್ನು ಹದ್ದುಬಸ್ತಿನಲ್ಲಿಡಲು ರಷ್ಯಾ ತೆಗೆದುಕೊಳ್ಳುತ್ತಿರುವ ಕ್ರಮಗಳ ಮಾದರಿಯಲ್ಲಿಯೇ ತೈವಾನ್ ವಿಚಾರದಲ್ಲಿ ವರ್ತಿಸಲು ಚೀನಾ ಮುಂದಾಗಿದೆ. ತೈವಾನ್‌ನ ಸುತ್ತಮುತ್ತಲೂ ಮಿಲಿಟರಿ ಚಟುವಟಿಕೆ ಹೆಚ್ಚಿಸಿದೆ. ತೈವಾನ್‌ನ ಭೂ ಪ್ರದೇಶದ ಮಾದರಿಯನ್ನೇ ಮರುಸೃಷ್ಟಿಸಿ ಹಲವು ಬಾರಿ ಚೀನಾ ಸೇನೆ ಅಣಕು ದಾಳಿಯ ಕಾರ್ಯಾಚರಣೆ ನಡೆಸಿತ್ತು.
ತೈವಾನ್ ಗಡಿಯಲ್ಲೇ ಬೀಡು ಬಿಟ್ಟಿರುವ ಚೀನಾ
ಕಳೆದ ಜನವರಿ 23ರಂದು ಚೀನಾದ 23 ಯುದ್ಧ ವಿಮಾನಗಳು ತೈವಾನ್ ವಾಯುಗಡಿ ಉಲ್ಲಂಘಿಸಿದ್ದವು. ಕಳೆದ ವರ್ಷ, 2021ರಲ್ಲಿ ಒಟ್ಟು 969 ಬಾರಿ ತೈವಾನ್ ವಾಯುಗಡಿಯಲ್ಲಿ ಚೀನಾದ ಯುದ್ಧವಿಮಾನಗಳು ಹಾರಾಟ ನಡೆಸಿದ್ದವು. 2020ರಲ್ಲಿ 380 ಬಾರಿ ಚೀನಾದ ಯುದ್ಧವಿಮಾನಗಳು ತೈವಾನ್ ವಾಯುಗಡಿ ಉಲ್ಲಂಘಿಸಿದ್ದವು. 2022ರಲ್ಲಿ ಈವರೆಗೆ ತೈವಾನ್ ಮೇಲೆ 465 ಬಾರಿ ಚೀನಾದ ಯುದ್ಧ ವಿಮಾನಗಳು ಹಾರಾಡಿವೆ.
ಚೀನಾ ಧೋರಣೆಗೆ ವಿರೋಧಿಸಿದ್ದ ಅಮೆರಿಕ
ತೈವಾನ್ ವಿಚಾರದಲ್ಲಿ ಚೀನಾ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಮೆರಿಕ ಅಗತ್ಯ ಬಿದ್ದರೆ ಮಧ್ಯಪ್ರವೇಶಿಸುವುದಾಗಿ ಎಚ್ಚರಿಸಿತ್ತು.
ಚೀನಾ – ತೈವಾನ್ ಯುದ್ಧದಿಂದ ಜಗತ್ತಿಗೆ ನಷ್ಟ
ಪ್ರಪಂಚದ ಹೆಚ್ಚಿನ ದೈನಂದಿನ ಎಲೆಕ್ಟ್ರಾನಿಕ್ ಉಪಕರಣಗಳು ತೈವಾನ್‌ನಿಂದಲೇ ಬರುತ್ತವೆ. ಒಂದೇ ತೈವಾನೀಸ್ ಕಂಪನಿ ಪ್ರಪಂಚದ ಅರ್ಧದಷ್ಟು ಸೆಮಿಕಂಡಕ್ಟರ್ ಮಾರುಕಟ್ಟೆಯನ್ನು ಹೊಂದಿದೆ.



