ಕರ್ನಾಟಕ ಬಂದ್: ಯಾರು ಬೆಂಬಲ ನೀಡಿದ್ದಾರೆ? ಯಾರು ನೀಡಿಲ್ಲ? ಇನ್ನೂ ನಿರ್ಧಾರ ಪ್ರಕಟಿಸದ ಸಂಘಟನೆಗಳು ಯಾವುವು?

Public TV
2 Min Read

ಬೆಂಗಳೂರು: ರಾಜ್ಯದ ಜನರಿಗೆ, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹಾಗೂ ನೆಲ-ಜಲ, ನಾಡು-ನುಡಿ ರಕ್ಷಣೆಗಾಗಿ ಅನೇಕ ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಇದೇ ಜೂನ್ 12 ಕ್ಕೆ ಕನ್ನಡ ಒಕ್ಕೂಟ ರಾಜ್ಯ ಬಂದ್‍ಗೆ ಕರೆ ನೀಡಿದೆ. ಬಂದ್ ಗೆ ಬೆಂಬಲಿಸಿ ಅಂತಾ ವಾಟಾಳ್ ನಾಗರಾಜ್ ಬೀದಿ ಬೀದಿ ಸುತ್ತುತ್ತಿದ್ರೆ, ಬಂದ್‍ನಿಂದ ಜನರಿಗೆ ತೊಂದರೆಯಾಗುತ್ತೆ ಅಂತಾ ಕೆಲ ಕನ್ನಡ ಪರ ಸಂಘಟನೆಗಳು ಬಂದ್ ವಿರೋಧಿಸಿದ್ದಾರೆ.

ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶ, ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಗಡೀಪಾರು, ಮೇಕೆದಾಟು, ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ 12 ರಂದು ಬಂದ್ ನಡೆಸಲು ಕನ್ನಡ ಒಕ್ಕೂಟ ಮುಂದಾಗಿದೆ. ಶುಕ್ರವಾರದಂದು ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಬೀದಿ ಬೀದಿ ಸುತ್ತಿ ಬಂದ್‍ಗೆ ಬೆಂಬಲಿಸಿ ಅಂತಾ ಪ್ರಚಾರ ಮಾಡಿದ್ರು. ಬಂದ್ ಮಾಡಿದ್ರೇನೇ ಸರ್ಕಾರದ ಗಮನಕ್ಕೆ ಬರೋದು. ಬಂದ್ ಮಾಡಿದ್ರೆ ಏನೂ ನಷ್ಟವಾಗಿಲ್ಲ. ಜನರೇ ಸ್ವಪ್ರೇರಣೆಯಿಂದ ಬೆಂಬಲ ನೀಡ್ತಾರೆ. ಹಲವು ಕನ್ನಡ ಪರ ಸಂಘಟನೆಗಳು ಸೇರಿ ಬಂದ್‍ಗೆ ಕರೆ ನೀಡಿದ್ದೇವೆ, ಇದು ಯಶಸ್ವಿಯಾಗುತ್ತೆ ಅಂತಾ ವಾಟಾಳ್ ಹೇಳಿದ್ರು.

ಒಂದು ಕಡೆ ವಾಟಾಳ್ ನಾಗರಾಜ್ ಬೆಂಬಲಿಗರು ಬಂದ್‍ಗೆ ಕರೆ ನೀಡಿದ್ರೆ, ಮತ್ತೊಂದೆಡೆ ಕೆಲ ಕನ್ನಡ ಪರ ಸಂಘಟನೆಗಳಿಂದ ಬಂದ್‍ಗೆ ವಿರೋಧ ವ್ಯಕ್ತವಾಗಿದೆ. ಬಂದ್‍ನಿಂದ ರಾಜ್ಯದ ಬೊಕ್ಕಸಕ್ಕೆ ಬರೆ ಬೀಳುತ್ತೆ. ನಮ್ಮ ರಾಜ್ಯಕ್ಕೆ ಇದ್ರಿಂದ ನಷ್ಟವುಂಟಾಗೋದು. ಇದರ ಬದಲು ಸತ್ಯಾಗ್ರಹ ಮಾಡೋಣ. ಬೆರಳೆಣಿಕೆಯಷ್ಟು ಸಂಘಟನೆಗಳು ಮಾತ್ರ ಬಂದ್‍ಗೆ ಬೆಂಬಲ ನೀಡುತ್ತಿದ್ದು, ಸುಮಾರು 100 ಕನ್ನಡ ಪರ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡುತ್ತಿಲ್ಲ. ನಾವೂ ಕೂಡ ನೀರಿಗಾಗಿ, ರೈತರ ಪರ ಹೋರಾಡುತ್ತೇವೆ. ಆದ್ರೆ ಈ ರೀತಿ ಬಂದ್ ಮಾಡೋದಿಲ್ಲ. ಬದಲಾಗಿ ಜೂನ್ 11 ರಂದು ಟೌನ್ ಹಾಲ್ ಮುಂದೆ ಸತ್ಯಾಗ್ರಹ ಮಾಡ್ತೀವಿ. ಆದ್ರೆ ಬಂದ್‍ಗೆ ನಮ್ಮ ಬೆಂಬಲವಿಲ್ಲ ಅಂತಾ ಕರ್ನಾಟಕ ಯುವಶಕ್ತಿ ರಾಜ್ಯಧ್ಯಕ್ಷ ಕೆಎನ್ ಲಿಂಗೇಗೌಡ ಹೇಳಿದ್ರು.

ಬಂದ್‍ಗೆ ಯಾರೆಲ್ಲಾ ಬೆಂಬಲವಿದೆ?: ಡಾ. ರಾಜ್ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಳಗ), ಕನ್ನಡ ಸೇನೆ, ಕರುನಾಡ ಜಾಗೃತಿ ವೇದಿಕೆ, ವಾಟಾಳ್ ನಾಗರಾಜ್, ಹೋಟೆಲ್ ಮಾಲೀಕರ ಸಂಘಟನೆ, ಮಾಲ್ ಗಳು, ಅಂಗಡಿ ಮುಂಗಟ್ಟುಗಳು, ಚಿತ್ರಮಂದಿರಗಳು, ತರಕಾರಿ ಮಾರುಕಟ್ಟೆ ಹಾಗೂ ಇನ್ನೂ ಹಲವು ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿವೆ.

ಬಂದ್‍ಗೆ ಯಾರ ಬೆಂಬಲವಿಲ್ಲ?: ಕರ್ನಾಟಕ ಯುವಶಕ್ತಿ, ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆ, ಅಖಿಲ ಭಾರತ ಕಾರ್ಮಿಕ ಕ್ರಿಯಾ ಹಿತರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ಕನ್ನಡ ಸೇನೆ ಹಾಗೂ ಇತರರು ಬಂದ್‍ಗೆ ಬೆಂಬಲ ನೀಡಿಲ್ಲ.

ಇನ್ನೂ ನಿರ್ಧಾರ ತೆಗೆದುಕೊಳ್ಳದ ಸಂಸ್ಥೆಗಳು: ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಆಟೋ ಸಂಘಟನೆಗಳು, ಟ್ಯಾಕ್ಸಿ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಬೇಕೋ ಬೇಡ್ವೋ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ನಮಗೆ ಬಂದ್ ಬೇಕಾ?: ಸಮಾನ್ಯ ಜನರಿಗೆ ಕಾಡುತ್ತಿರುವುದು ಬಂದ್ ಬೇಕಾ? ಎಂಬ ಪ್ರಶ್ನೆ. ವಾರದ ಮೊದಲ ದಿನವೇ ಬಂದ್ ಆದ್ರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕೆಲಸಕ್ಕೆ ಹೊಗೋದಕ್ಕೆ, ಶಾಲೆಗೆ ಹೋಗುವ ಮಕ್ಕಳಿಗೆ, ದೂರದ ಊರಿಂದ ಬರುವ ಪ್ರಯಾಣಿಕರಿಗೆ, ಹೋಟೆಲ್ ಊಟವನ್ನೇ ನಂಬಿಕೊಂಡಿರೋ ಎಷ್ಟೋ ಜನಕ್ಕೆ ಈ ಬಂದ್‍ನಿಂದ ಸಮಸ್ಯೆಯಾಗುತ್ತೆ. ಜೊತೆಗೆ ಕನ್ನಡ ಸಂಘಟನೆಯಲ್ಲಿಯೇ ಬಂದ್ ಗೆ ಪರ ವಿರೋಧ ವ್ಯಕ್ತವಾಗಿರೋದ್ರಿಂದ ಈ ಬಂದ್ ಬೇಕಾ? ಎಂಬ ಪ್ರಶ್ನೆ ಕೇಳಿಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *