ನವದೆಹಲಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ(Soujanya Rape and Murder Case) ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) ಇಂದು ರಾಜ್ಯ ಸರ್ಕಾರ ಮತ್ತು ಸಿಬಿಐಗೆ (CBI) ನೋಟಿಸ್ ನೀಡಿದೆ.
ಈ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಸೌಜನ್ಯ ತಾಯಿ ಕುಸುಮಾವತಿ (Kusumavathi) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ ಜಾರಿ ಮಾಡಿ ಏಪ್ರಿಲ್ 28ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ.
ಈ ಹಿಂದೆ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪುರಾವೆ ಇಲ್ಲ ಎಂದು ಹೇಳಿ ಮರು ತನಿಖೆಗೆ ಅದೇಶಿಸಲು ನಿರಾಕರಿಸಿತ್ತು. ಆದರೆ ಇದೀಗ ಸುಪ್ರೀಂ ಕೋರ್ಟ್‌ಗೆ ವೈದ್ಯಕೀಯ ಪುರಾವೆ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಚಿನ್ನದ ದರ ದಾಖಲೆಯ ಕುಸಿತ – ಏರಿದ್ದ ಚಿನ್ನದ ಬೆಲೆ ದಿಢೀರ್ ಇಳಿಕೆಗೆ ಕಾರಣ ಏನು?
2012ರ ಅಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಧರ್ಮಸ್ಥಳದ ಬಳಿ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು. ಮರುದಿನ ಆಕೆಯ ಮೃತದೇಹ ನೇತ್ರಾವತಿ ಸ್ನಾನಘಟ್ಟದ ಬಳಿಯ ಪೊದೆಯಲ್ಲಿ ಸಿಕ್ಕಿತ್ತು.
ಸೌಜನ್ಯ ಪ್ರಕರಣವನ್ನು 2013ರಲ್ಲಿ ಸಿಬಿಐಗೆ ವರ್ಗಾಯಿಸಲಾಗಿತ್ತು. ಸೌಜನ್ಯ ಅತ್ಯಾಚಾರ ಕೊಲೆ ನಡೆದ ಎರಡು ದಿನದ ಬಳಿಕ ಸಂತೋಷ್ ರಾವ್ ಎಂಬಾತನ ಬಂಧನ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಬಿ ಸಂತೋಷ್ ಅವರು 2023ರಲ್ಲಿ ತನಿಖೆಯಲ್ಲಿನ ಲೋಪದೋಷಗಳನ್ನು ಗುರುತಿಸಿ ಸಂತೋಷ್ ರಾವ್‌ನನ್ನು ಖುಲಾಸೆಗೊಳಿಸಿ ಮಹತ್ವದ ತೀರ್ಪು ನೀಡಿದ್ದರು. ಇಲ್ಲಿಯವರೆಗೆ ಸೌಜನ್ಯಳನ್ನು ಅತ್ಯಾಚಾರ ಮಾಡಿದವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ.

