ಹಿಂದೂ ಮಹಾಸಾಗರ ಡೀಗೊ ಗಾರ್ಸಿಯಾ ಬೇಸ್ ಮೇಲೆ ಇರಾನ್ ದಾಳಿ – 4,000 ಕಿಮೀ ದೂರಕ್ಕೆ ಕ್ಷಿಪಣಿ ಹಾರಿಸಿ ದಾಳಿ

1 Min Read

– ಯುಎಸ್-ಯುಕೆ ನೆಲೆಯ ಮೇಲೆ ಮಿಸೈಲ್‌ ಮಳೆ

ಟೆಹ್ರಾನ್‌: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ (Israel – US vs Iran War) 22ನೇ ದಿನವೂ ಮುಂದುವರಿದಿದೆ. ತೈಲಯುದ್ಧವಾಗಿ ಮಾರ್ಪಟ್ಟಿರುವ ಕಾಳಗ ಘನಘೋರ ಸ್ವರೂಪ ಪಡೆದುಕೊಂಡಿದೆ. ರಣರಂಗದಲ್ಲಿ ಒಂಟಿತೋಳವಾಗಿರುವ ಇರಾನ್, ಗಲ್ಫ್‌ನ ಅಮೆರಿಕ ಮಿತ್ರರಾಷ್ಟ್ರಗಳ ಮೇಲೆ ಭೀಕರ ದಾಳಿ ಮುಂದುವರಿಸಿದೆ.

ಕೊಲ್ಲಿಯುದ್ಧ ಇದೀಗ ಹಿಂದೂ ಮಹಾಸಾಗರಕ್ಕೂ ವ್ಯಾಪಿಸಿದೆ. ಹಿಂದೂ ಮಹಾಸಾಗರದಲ್ಲಿ ಅಮೆರಿಕ-ಯುಕೆ ಮಿಲಿಟರಿ ನೆಲೆಯಿರುವ ಅತ್ಯಂತ ರಹಸ್ಯ ದ್ವೀಪವಾದ ಡಿಯಾಗೋ ಗಾರ್ಸಿಯಾ ಬೇಸ್‌ (Diego Garcia Base) ಮೇಲೆ ಇರಾನ್ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿ ದಾಳಿ ನಡೆಸಿದೆ. ಇದು ಟೆಹ್ರಾನ್‌ನಿಂದ 4,000 ಕಿ.ಮೀ ದೂರದಲ್ಲಿದೆ. ಎರಡೂ ಕ್ಷಿಪಣಿಗಳು ನೆಲೆಯನ್ನ ಅಪ್ಪಳಿಸಿಲ್ಲ.

ಇನ್ನೂ ಇರಾಕ್‌ನ ಬಾಗ್ದಾದ್ ಅಂತಾರಾಷ್ಟ್ರೀಯ ಏರ್‌ಪೋರ್ಟ್ ಬಳಿ ರಾಜತಾಂತ್ರಿಕ ಮತ್ತು ಲಾಜಿಸ್ಟಿಕ್ಸ್ ಕೇಂದ್ರಗಳ ಗುರಿಯಾಗಿಸಿ ಮೂರು ಡ್ರೋನ್‌ಗಳ ದಾಳಿ ನಡೆಸಿದೆ. ಬೆಂಕಿ ಹೊತ್ತಿಕೊಂಡ ಪರಿಣಾಮ ಅಮೆರಿಕ ಸಿಬ್ಬಂದಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ.

ಇನ್ನು ಗುಪ್ತಚರ ಕೇಂದ್ರದ ಕಚೇರಿ ಮೇಲೂ ಅಟ್ಯಾಕ್ ಮಾಡಿದೆ. ಸೌದಿ ಅರೇಬಿಯಾದ ಪೂರ್ವ ಭಾಗದಲ್ಲಿ 10 ಡ್ರೋನ್ ಹಾರಿಸಿದೆ. ಆದರೆ ಎಲ್ಲಾ ಡ್ರೋನ್‌ಗಳನ್ನು ಸೌದಿ ಹೊಡೆದುರುಳಿಸಿದೆ. ರಿಯಾದ್‌ನಲ್ಲಿ ಉತ್ತರಪ್ರದೇಶ ಮೂಲದ ಕಾರ್ಮಿಕ ಬಲಿಯಾಗಿರೋ ಬಗ್ಗೆ ವರದಿಯಾಗಿದೆ. ಮಾರ್ಚ್ 12ರಂದು ಇರಾನ್‌ನ ಡ್ರೋನ್ ಉತ್ಪಾದನಾ ಘಟಕದ ಮೇಲೆ ಅಮೆರಿಕ ದಾಳಿ ಮಾಡಿರುವ ಫೋಟೊ ಬಿಡುಗಡೆ ಮಾಡಿದೆ.

ಇಸ್ರೇಲ್‌ನ ರಿಶಾನ್ ಲಿಜಿಯಾನ್ ಪ್ರದೇಶದಲ್ಲಿ ಇರಾನ್ ಕ್ಷಿಪಣಿ ದಾಳಿಗೆ ಕಟ್ಟಡಗಳು ಛಿದ್ರ ಛಿದ್ರಗೊಂಡಿವೆ. ದಾಳಿಯ ಭೀಕರತೆ ಮತ್ತಷ್ಟು ಹೆಚ್ಚಾಗಿರಲಿದೆ ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿದೆ.

Share This Article