ಆಲಿಕಲ್ಲಿನ ರಾಶಿ, ಗುಡುಗು, ಸಿಡಿಲಿನ ನರ್ತನ – ಮಳೆ ಅಬ್ಬರಕ್ಕೆ ನಲುಗಿದ ಶಿವಮೊಗ್ಗ

2 Min Read

ಶಿವಮೊಗ್ಗ: ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಬುಧವಾರ ಸಂಜೆ ಶಿವಮೊಗ್ಗ ನಗರದಲ್ಲಿ ಮಳೆ (Rain) ಸುರಿಯಿತು. ಕೆಲವು ಕಾಲ ಮಳೆಯೊಂದಿಗೆ ಸುರಿದ ಆಲಿಕಲ್ಲಿನ ಧಾರೆಯಿಂದ ಶಿವಮೊಗ್ಗದ (Shivamogga) ರಸ್ತೆಗಳು ಹಾಲ್ಬಣ್ಣಕ್ಕೆ ತಿರುಗಿದವು.

ಆಲಿಕಲ್ಲಿನ(Hailstorm) ಹೊಡೆತಕ್ಕೆ ಮನೆಯ ಮಾಡು, ಗಿಡ-ಮರ, ಮನೆಯ ಮುಂದೆ ನಿಲ್ಲಿಸಿದ ವಾಹನಗಳು ಸಿಲುಕಿ ನಲುಗಿದವು. ಜನಜೀವನ ಅಸ್ತವ್ಯಸ್ತಗೊಂಡಿತು. ಮನೆಯ ಎದುರು, ಕಾಂಪೌಂಡ್ ಒಳಗೆ ಬಿದ್ದ ಆಲಿಕಲ್ಲುಗಳ ಹೆಕ್ಕಿ, ಬೊಗಸೆಯಲ್ಲಿ ತುಂಬಿಕೊಂಡು ನಿವಾಸಿಗಳು ಸಂತಸಪಟ್ಟರು. ಇಷ್ಟೊಂದು ವಿಪರೀತ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದದ್ದು ಶಿವಮೊಗ್ಗದಲ್ಲಿ ಅಪರೂಪದ ಘಟನೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಮಳೆ- ಗಾಳಿಗೆ ಸುಲಿಕಿ ಹಲವಡೆ ತೆಂಗಿಮರಗಳು ಬಿದ್ದು ವಿದ್ಯುತ್ ಕಂಬ ನೆಲಕ್ಕೆ ಕಚ್ಚುವಂತೆ ಮಾಡಿವೆ. ಮರ ಮತ್ತು ಮರದ ಕೊಂಬೆಗಳೂ ಅಲ್ಲಲ್ಲಿ ಬಿದ್ದಿವೆ. ಅಶೋಕನಗರದ ಪೊಲೀಸ್ ವಸತಿಗೃಹದ ಬಳಿ ಬಳಿ ತೆಂಗಿನ ಮರ ವಿದ್ಯುತ್ ಲೈನ್ ಮೇಲೆ ಬಿದ್ದುದರಿಂದ ಎರಡು ವಿದ್ಯುತ್ ಕಂಬಗಳು ಮುಖ್ಯ ರಸ್ತೆಯ ಮೇಲೆ ಬಿದ್ದು ವಿದ್ಯುತ್ ಸ್ಥಗಿತವಾಗಿತ್ತು. ಜೊತೆಗೆ ಸಂಚಾರಕ್ಕೂ ಸಂಚಕಾರ ಎದುರಾಗಿದೆ. ಇದನ್ನೂ ಓದಿ: ಸಾಲು ಸಾಲು ರಜೆ ಊರಿಗೆ ಹೊರಡುವಾಗಲೇ ಆಲಿಕಲ್ಲು ಮಳೆ – ಬೆಂಗಳೂರಿನ ಹಲವು ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌

ಅಮೀರ್ ಅಹಮದ್ ವೃತ್ತದ ಸುತ್ತಮುತ್ತಲ ಕಟ್ಟಡದ ಮೇಲೆ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳು ಗಾಳಿಗೆ ಕಿತ್ತು ಹಾರಿ ವೃತ್ತದ ಮಧ್ಯೆ ಬಿದ್ದಿವೆ. ಇದನ್ನು ಪೊಲೀಸರು ಮಳೆ ನಿಂತ ಮೇಲೆ ತೆರವುಗೊಳಿಸಿದರು. ಇದೇ ರೀತಿ ಗೋಪಿ ವೃತ್ತದಲ್ಲಿ ಮರದ ಟೊಂಗೆಗಳು ಬಿದ್ದಿದ್ದವು. ವಿನೋಬನಗರ, ವಿದ್ಯಾನಗರ, ಚಾಲುಕ್ಯನಗರ, ಗೋಪಾಳಗೌಡ, ಜ್ಯೋತಿನಗರ, ಮಂಡ್ಲಿ, ಹರಕೆರೆ, ಸೋಮಿನಕೊಪ್ಪ ಮೊದಲಾದೆಡೆಯೂ ಅನೇಕ ಕಡೆ ಮರ ಅಥವಾ ಮರದ ಟೊಂಗೆಗಳು ಬಿದ್ದ್ದು, ವಿದ್ಯುತ್ ತಂತಿ ಹರಿದುಬಿದ್ದ ಘಟನೆಗಳು ವರದಿಯಾಗಿವೆ.

ಏಕಾಏಕಿ ಧಾರಾಕಾರ ಮಳೆ ಸುರಿದಿದ್ದರಿಂದ ಚರಂಡಿಗಳೆಲ್ಲ ಕಟ್ಟಿ ರಸ್ತೆ ಮೇಲೆಯೇ ಹೊಳೆಯಂತೆ ನೀರು ಹರಿಯಿತು. ಚರಂಡಿಗಳಲ್ಲಿ ಕಸ- ಕಡ್ಡಿಗಳು ಮತ್ತು ಪ್ಲಾಸ್ಟಿಕ್ ರಾಶಿ ತೇಲಿ ಹೋಗುತ್ತಿದ್ದುದ ಕಂಡುಬಂದಿತು. ಅನೇಕ ಕಡೆ ಮನೆಯಂಗಳಕ್ಕೆ ಗಲೀಜು ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಸಾಕಷ್ಟು ಕಡೆ ನೀರು ಬ್ಲಾಕ್ ಆಗಿ ನಿಂತಿದ್ದರಿಂದ ರಸ್ತೆ ಮೇಲೆ ಸಂಚರಿಸುವುದೇ ಕಷ್ಟವಾಯಿತಯ. ಅನೇಕ ತಗ್ಗುಪ್ರದೇಶಗಳಲ್ಲಿ ಅಂಗಡಿಗಳ ಎದುರು ಜಲಮಯವಾಗಿದ್ದು ಗೋಚರವಾಯಿತು. ಇಷ್ಟೊಂದು ಪ್ರಮಾಣದ ಮಳೆಯ ಮನ್ಸೂಚನೆ ಅರಿಯದ ಜನರು ಮಳೆಯಿಂದ ಶಾಕ್‌ಗೆ ಒಳಗಾಗುವಂತಾಯಿತು.

ನಗರದಾದ್ಯಂತ ವಿದ್ಯುತ್ ಇಲ್ಲದೆ ಸಂಜೆಯವರೆಗೂ ಜನರು ಪರಿತಪಿಸಬೇಕಾಯಿತು. ರಾತ್ರಿ 8ರ ವರೆಗೂ ಹಲವು ಬಡಾವಣೆಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಕತ್ತಲಾಗುತ್ತಿದಂತೆಯೇ ಮತ್ತೆ ಗುಡುಗು ಸಹಿತ ಮಳೆ ಬೀಳಲಾರಂಭಿಸಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆಗೆ ಯುಗಾದಿ ಹಬ್ಬದ ಮುನ್ನಾದಿನವೇ ಭರ್ಜರಿ ಮಳೆ ಬಂದು ನೆಮ್ಮದಿ ಮೂಡಿಸಿದೆ.

Share This Article