KPSC Row| ಒಂದೇ ಕೊಠಡಿಯಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಪಾಸ್‌ – ವಿವಾದಕ್ಕೆ ಉತ್ತರ ಕೊಟ್ಟ ಕೃಷ್ಣಬೈರೇಗೌಡ

2 Min Read

– ಕೆಪಿಎಸ್‌ಸಿ ಅಕ್ರಮ ಕುರಿತು ತನಿಖೆಗೆ, ಮರುಪರೀಕ್ಷೆಗೆ ಬಿಜೆಪಿ ಆಗ್ರಹ
– ಆಯೋಗದ ಸುಧಾರಣೆಗೆ ಸದನ ಸಮಿತಿ ರಚನೆಗೆ ನಿರ್ಧಾರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದದಲ್ಲಿ (KPSC) ಸುಧಾರಣೆ ತರಲು ಸದನ ಸಮಿತಿ ರಚನೆಗೆ ಸರ್ಕಾರ ತೀರ್ಮಾನ ಮಾಡಿದೆ‌. ವಿಧಾನಸಭೆಯಲ್ಲಿ ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದ ಚರ್ಚೆಗೆ ಉತ್ತರ ಕೊಡುವಾಗ ಸಚಿವ ಕೃಷ್ಣಬೈರೇಗೌಡ(Krishna Byre Gowda) ಈ ವಿಚಾರವನ್ನು ತಿಳಿಸಿದ್ದಾರೆ.

ಸರ್ವಪಕ್ಷಗಳ ಎಂಟು ಸದಸ್ಯರು ಇರುವ ಸದನ ಸಮಿತಿ ರಚನೆಗೆ ಸಿಎಂ ನಿರ್ಧರಿಸಿದ್ದಾರೆ. ಕೆಪಿಎಸ್‌ಸಿ ಪರೀಕ್ಷಾ ವ್ಯವಸ್ಥೆ ಸರಿಪಡಿಸಲು ಈ ಸದನ ಸಮಿತಿ ಕೊಡುವ ಶಿಫಾರಸುಗಳನ್ನು ಜಾರಿ‌ ಮಾಡಲಾಗುವುದು ಎಂದು ಉತ್ತರಿಸಿದರು.

ಒಂದೇ ಕೊಠಡಿಯಲ್ಲಿ 11-12 ಜನ ಆಯ್ಕೆ ಆಗಿದ್ದಾರೆ. ಅದರಲ್ಲೂ ಒಂದೇ‌ ಕುಟುಂಬದ 3-4 ಜನ ಅರ್ಹತಾ ಪರೀಕ್ಷೆಗೆ ಆಯ್ಕೆ ಆಗಿದ್ದಾರೆ ಎನ್ನುವುದು ಈಗ ಬಂದಿರುವ ಆರೋಪ. ಇದರ ಬಗ್ಗೆ ಕೆಪಿಎಸ್‌ಸಿಯ ಆ ಕೊಠಡಿಯಲ್ಲಿ ಇದ್ದ ಸಿಸಿಟಿವಿ (CCTV) ಪರಿಶೀಲನೆ ಆಗಿದೆ.‌ ಆ ರೀತಿಯ ಅನುಮಾನಾಸ್ಪದ ಏನೂ ತಪ್ಪು ನಡೆದಿಲ್ಲ ಎಂದು ಕೆಪಿಎಸ್‌ಸಿ ತಿಳಿಸಿದೆ ಎಂದು ಹೇಳಿದರು.

ಒಂದೇ ಕುಟುಂಬದ 3-4 ಜನ ಆಯ್ಕೆ ಬಗ್ಗೆ ಅನುಮಾನ ಇದೆ. ಕಾವ್ಯಾ ಆರ್, ಐಶ್ವರ್ಯ ಆರ್‌ ಹಾಗೂ ನೀಹಾರಿಕಾ ಆರ್, ಪವಿತ್ರ ಆರ್, ಅಕ್ಷತಾ ಹಿರೇಮಠ್ ಹೆಸರುಗಳಿವೆ. ಆ ಕೊಠಡಿಯಲ್ಲಿದ್ದ ಕೆಲವರ ಹೆಸರಿನಲ್ಲಿ R ಇನಿಷಿಯಲ್, P ಇನಿಷಿಯಲ್, ಹಿರೇಮಠ್ ಸರ್‌ನೇಮ್ ಬಂದಿದೆ. ಇವರು ಯಾರು ಒಂದೇ ಕುಟುಂಬಕ್ಕೆ ಸೇರಿದವರಲ್ಲ, ಬೇರೆ ಬೇರೆ ಜಿಲ್ಲೆಯವರು ಎಂದು ಹೇಳುವ ಮೂಲಕ ಅಕ್ರಮ ನಡೆದಿಲ್ಲ ಎಂಬ ಅರ್ಥದಲ್ಲಿ ಪರೋಕ್ಷವಾಗಿ ಕೃಷ್ಣಬೈರೇಗೌಡ ಉತ್ತರ ನೀಡಿದರು. ಇದನ್ನೂ ಓದಿ: ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗುತ್ತಿವೆ – ಮಧ್ಯವರ್ತಿಗಳಿಲ್ಲದೆ ಆಟೋ ಮ್ಯುಟೇಶನ್: ಕೃಷ್ಣಭೈರೇಗೌಡ

 

ಕೆಪಿಎಸ್‌ಸಿ ಸುಧಾರಣೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಹೋಟಾ ಸಮಿತಿಯ ಶಿಫಾರಸುಗಳ ಅನುಷ್ಠಾನ ಮಾಡಿದ್ದೇವೆ. ಪ್ರತೀವರ್ಷ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಒಂದು ಡೆಡ್‌ಲೈನ್ ಸರ್ಕಾರ ನೀಡುತ್ತದೆ. ಪ್ರತೀ ವರ್ಷ ಒಂದು ನಿರ್ದಿಷ್ಟ ತಿಂಗಳು, ನಿರ್ದಿಷ್ಟ ವಾರ, ನಿರ್ದಿಷ್ಟ ದಿನವೇ ಕೆಪಿಎಸ್‌ಸಿ ಪರೀಕ್ಷೆ ನಡೆಯಬೇಕು. ಇದಕ್ಕೆ ಒಂದು ದಿನಾಂಕವನ್ನು ಕೆಪಿಎಸ್‌ಸಿ ಜತೆ ಚರ್ಚಿಸಿ ಕೊಡುತ್ತೇವೆ ಎಂದರು.

ಮುಂದಿನ ಐದು ವರ್ಷಕ್ಕೆ ಎಷ್ಟು ಹುದ್ದೆಗಳ ನೇಮಕಾತಿ ಮಾಡಬೇಕು ಎನ್ನುವ ಬಗ್ಗೆಯೂ ನಿಗದಿ ಮಾಡಲು ಸಿಎಂ ಸೂಚನೆ ಕೊಟ್ಟಿದ್ದಾರೆ. ದಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು ಡಿಐಪಿಆರ್ ಇಲಾಖೆ ಜತೆ ಚರ್ಚಿಸಿ ನಿರ್ಧರಿಸುತ್ತೇವೆ. ಇದರಿಂದನೂ ಎಷ್ಟೋ ಸಮಸ್ಯೆ ಕಡಿಮೆ ಆಗಲಿದೆ. ಪ್ರತೀ ವರ್ಷ ಪರೀಕ್ಷೆ, ಐದು ವರ್ಷ ಎಷ್ಟು ಹುದ್ದೆಗಳ ನೇಮಕ ಎನ್ನುವ ತೀರ್ಮಾನ – ಇವೆರಡೂ ಪರಿಣಾಮಕಾರಿ ಸುಧಾರಣೆಗಳು ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಸರ್ಕಾರದ ಉತ್ತರ ಒಪ್ಪದ ಬಿಜೆಪಿ ಸದಸ್ಯರು ಅಕ್ರಮ ಆರೋಪ ಸಂಬಂಧ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು. ಮರುಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

Share This Article