ಚೀನಾಗೆ ತೆರಳುತ್ತಿದ್ದ ಟ್ಯಾಂಕರ್‌ ದಿಢೀರ್‌ ಯೂಟರ್ನ್‌ – ಮಂಗಳೂರಿಗೆ ಬರುತ್ತಿದೆ ರಷ್ಯಾ ತೈಲ

1 Min Read

ನವದೆಹಲಿ: ಚೀನಾಕ್ಕೆ (China) ತೆರಳುತ್ತಿದ್ದ ರಷ್ಯಾದ (Russia) ತೈಲ ತುಂಬಿದ ಟ್ಯಾಂಕರ್ ದಕ್ಷಿಣ ಚೀನಾ ಸಮುದ್ರದಲ್ಲಿ ಯೂಟರ್ನ್‌ ಹೊಡೆದು ಮಂಗಳೂರಿನತ್ತ (Mangaluru) ಬರುತ್ತಿದೆ.

ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರದ ಬಂದರಿನಿಂದ ಯುರಲ್ಸ್ ಕಚ್ಚಾತೈಲವನ್ನು ಅಕ್ವಾ ಟೈಟಾನ್‌ (Aqua Titan) ಹಡಗಿಗೆ ಲೋಡ್‌ ಮಾಡಲಾಗಿತ್ತು. ಈಗ ಈ ಹಡಗು ಯೂಟರ್ನ್‌ ಹೊಡೆದಿದ್ದು ಮಾರ್ಚ್‌ 21 ರಂದು ನವಮಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ.

ಮಾರ್ಚ್ ಮಧ್ಯದಲ್ಲಿ ಆಗ್ನೇಯ ಏಷ್ಯಾದಲ್ಲಿ ಸಂಚರಿಸುತ್ತಿದ್ದಾಗ ಚೀನಾದ ರಿಝಾವೊ ಬಂದರು ತನ್ನ ಗಮ್ಯ ಸ್ಥಾನ ಎಂದು ಅಕ್ವಾ ಟೈಟಾನ್‌ ತೋರಿಸುತ್ತಿತ್ತು.

 

ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ತೈಲ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ವಾರ ಭಾರತ ರಷ್ಯಾದಿಂದ 30 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ.

ವೋರ್ಟೆಕ್ಸಾ ಲಿಮಿಟೆಡ್ ಪ್ರಕಾರ ರಷ್ಯಾದ ತೈಲವನ್ನು ಹೊತ್ತುಕೊಂಡು ಚೀನಾಗೆ ಸಾಗಿಸುತ್ತಿದ್ದ ಕನಿಷ್ಠ ಏಳು ಟ್ಯಾಂಕರ್‌ಗಳು ಪ್ರಯಾಣ ಮಧ್ಯೆ ಗಮ್ಯಸ್ಥಾನವನ್ನು ಬದಲಾಯಿಸಿ ಭಾರತದತ್ತ ಪ್ರಯಾಣಿಸುತ್ತಿವೆ.

Share This Article