ಯುಗಾದಿ ವಿಶೇಷ – ಬೇವು ಬೆಲ್ಲವನ್ನು ಸೇವಿಸುವುದು ಯಾಕೆ?

2 Min Read

ಯುಗಾದಿ(Ugadi) ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ಹಿಂದಿನ ವರ್ಷದ ಸಾಧನೆಯನ್ನು ಪರಿಶೀಲಿಸಿ, ಈ ವರ್ಷಕ್ಕೆ ಬೇಕಾದ ಸಂವಿಧಾನನ್ನು ವಿಧಾಯ ಪೂರ್ವಕವಾಗಿ ಹಾಕಿಕೊಳ್ಳುವ ದಿನ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.

ಈ ಹಬ್ಬದಂದು ಬೆಲ್ಲ(Jaggery) ಮತ್ತು ಕಹಿಯಾದ ಬೇವು (Bevu) ಮಿಶ್ರಣವನ್ನು ಸೇವಿಸುವ ಆಚರಣೆ ಹಲವು ಕಡೆಗಳಲ್ಲಿ ಇದೆ. ಬೆಲ್ಲವನ್ನು ಎಲ್ಲರೂ ಸುಖಕರ, ಕಹಿ ಬೇವನ್ನು ದುಃಖಕರ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಜೀವನವು ಕ್ಷಣಕಾಲ ಉರಿದು ನಾಶವಾಗುವ ಮೇಣದ ಬತ್ತಿಯಲ್ಲ. ಸಂಪೂರ್ಣ ಸುಖ ಮತ್ತು ದು:ಖದ ನೆಲೆಯೂ ಅಲ್ಲ. ಪ್ರಕೃತಿಯ ಕತ್ತಲು-ಬೆಳಕಿನ ಚೆಲ್ಲಾಟದಂತೆಯೇ ಸುಖ-ದುಃಖ, ಶೀತ-ಉಷ್ಣ, ಲಾಭ-ನಷ್ಟಗಳಿಂದಲೂ ಬದುಕು ಕೂಡಿದೆ. ಇವುಗಳ ಸಂಕೇತವೇ ಬೇವು ಬೆಲ್ಲ.

ಜೀವನವು ಕೇವಲ ಸುಖ ಅಥವಾ ಕೇವಲ ಕಷ್ಟದಿಂದ ಕೂಡಿಲ್ಲ, ಅದು ಇವೆರಡರ ಮಿಶ್ರಣ ಎಂಬುದನ್ನು ಬೇವು-ಬೆಲ್ಲ ಸಂಕೇತಿಸುತ್ತದೆ. ಬೇವು ಜೀವನದಲ್ಲಿ ಬರುವ ಕಷ್ಟ, ನೋವು ಮತ್ತು ಸವಾಲುಗಳ ಸಂಕೇತವಾಗಿದ್ದರೆ ಬೆಲ್ಲ ಜೀವನದ ಸಂತೋಷ, ಯಶಸ್ಸು ಮತ್ತು ಸುಖದ ಸಂಕೇತ. ಜೀವನದಲ್ಲಿ ಎದುರಾಗುವ ಸುಖ-ದುಃಖಗಳನ್ನು ಸಮಾನ ಮನಸ್ಸಿನಿಂದ  ಸ್ವೀಕರಿಸಬೇಕು ಎಂಬ ಉದ್ದೇಶ ಇದರ ಹಿಂದಿದೆ.  ಇದನ್ನೂ ಓದಿ: ಯುಗಾದಿ ವಿಶೇಷ | ಶ್ರೀರಾಮನ ಪಟ್ಟಾಭಿಷೇಕ – ಕೆಡುಕಿಂದ ಒಳಿತಿನೆಡೆ ನಡೆವ ಸಂಕೇತ

ಬೇವು-ಬೆಲ್ಲ ವೈದ್ಯಕೀಯ ಗುಣಗಳನ್ನು ಹೊಂದಿದೆ. ಬೇವಿನ ಎಲೆಗಳನ್ನು ಸೇವಿಸುವದರಿಂದ ಸರ್ವ ಅನಿಷ್ಟಗಳೂ ನಾಶವಾಗುತ್ತದೆ. ಮಾನವ ವಜ್ರದೇಹಿಯಾಗಿ ಸಂಪತ್ತು ಉಂಟಾಗುತ್ತದೆ. ಆಯಸ್ಸು ವೃದ್ಧಿಯಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.

ಬೇವು-ಬೆಲ್ಲ ಸೇವಿಸುವಾಗ ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ |ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಮ್ ಎಂಬ ಶ್ಲೋಕವನ್ನು ಹೇಳಲಾಗುತ್ತದೆ. ನೂರು ವರ್ಷಗಳ ಆಯುಷ್ಯ, ವಜ್ರದಂತಹ ಸದೃಢ ದೇಹ, ಸಕಲ ಸಂಪತ್ತು ಮತ್ತು ಎಲ್ಲ ಅರಿಷ್ಟಗಳ ನಿವಾರಣೆಗಾಗಿ ನಾನು ಈ ಬೇವನ್ನ ಸೇವಿಸುತ್ತೇನೆ ಎಂಬ ಅರ್ಥ ಈ ಶ್ಲೋಕಕ್ಕೆ ಇದೆ.

Share This Article