ಮೃತರ ಖಾತೆಗೂ ಗೃಹಲಕ್ಷ್ಮಿ ಹಣ – ಸರ್ಕಾರ ಬಂದಾಗಿಂದ ಸುಮಾರು 12 ಕೋಟಿ ಜಮೆ

2 Min Read

ಬೀದರ್: ಕಾಂಗ್ರೆಸ್ ಸರ್ಕಾರದ (Congress Govt) ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಬೀದರ್ (Bidar) ಜನ್ರ ಪಾಲಿಗೆ ಇದ್ದು ಇಲ್ಲವಾಗಿದೆ. ಗೃಹಲಕ್ಷ್ಮಿ ಹಣದಲ್ಲೇ ಬದುಕಿರುವ ಬಡಪಾಯಿ ಮಹಿಳೆಯರಿಗೆ ಸರಿಯಾಗಿ ಹಣ ನೀಡದೇ ಸತ್ತವರ ಖಾತೆಗೆ 10 ಕೋಟಿ ರೂ. ಹಣ ನೀಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಹೌದು, ಹಣ ಬಿಡುಗಡೆ ವಿಳಂಬ ಸೇರಿ ತಾಂತ್ರಿಕ ಸಮಸ್ಯೆಗಳಿಂದ ಸದಾ ಚರ್ಚೆಗೆ ಬರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂಡು ಯಡವಟ್ಟು ಬಟಾಬಯಲಾಗಿದೆ. ಬೀದರ್ ಜಿಲ್ಲೆಯಲ್ಲಿ ಅಧಿಕಾರಿಗಳ ನಿಷ್ಕಾಳಜಿಯಿಂದ ಮೃತ 5327 ಯೋಜನಾ ಫಲಾನುಭವಿಗಳಿಗೆ ಸುಮಾರು 12 ಕೋಟಿ ರೂ. ಹಣ ಜಮೆಯಾಗಿ ಗೋಲ್ಮಾಲ್ ಮಾಡಿದ್ದಾರೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಡಿಕೆಶಿ – ಕುತೂಹಲ ಮೂಡಿಸಿದ ಔತಣಕೂಟ

ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ಸಹಾಯ ಧನ ನೀಡುವ ಮಹತ್ವಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಇಲ್ಲಿ ಮೃತಪಟ್ಟ ಮಹಿಳೆಯರ ಖಾತೆಗೆ ವರ್ಗಾವಣೆಯಾಗಿದೆ ಅನ್ನೋದು ಬಟಾ ಬಯಲಾಗ್ತಿದೆ. ಅದನ್ನು ವಾಪಸ್ ಪಡೆಯಲು ಸರ್ಕಾರ ಹರಸಾಹಸ ಪಡುತ್ತಿದೆ. ನಾವು ಇದೇ ಹಣದ ಮೇಲೆ ಜೀವನ ಮಾಡೋದು ಮೂರ್ನಾಲ್ಕು ತಿಂಗಳಿನಿಂದ ಗೃಹ ಲಕ್ಷ್ಮಿ ಹಣ ನೀಡಿಲ್ಲಾ. ಆದ್ರೆ ಸತ್ತಿರುವ 5 ಸಾವಿರಕ್ಕೂ ಅಧಿಕ ಮಹಿಳೆಯರ ಅಕೌಂಟ್‌ಗೆ ಕೋಟಿ ಕೋಟಿ ಹಣ ಹಾಕಿ, ಗೋಲ್ಮಾಲ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಬೀದರ್ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಬರುವ 5327 ಫಲಾನುಭವಿಗಳು ಮೃತಪಟ್ಟಿದ್ದು, ಅವರ ಒಟ್ಟಾರೆ ಕಂತುಗಳು 59,954 ಆಗಿದ್ದು, ಪ್ರತಿ ತಿಂಗಳು 2 ಸಾವಿರ ರೂ.ನಂತೆ ಸುಮಾರು 12 ಕೋಟಿ ರೂಪಾಯಿ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಇನ್ನೂ ಈ ಫಲಾನುಭವಿಗಳಿಗೆ ಯಾವುದೇ ದೋಷವಿಲ್ಲದೇ ಪ್ರತಿ ತಿಂಗಳು ಹಣ ಹೋಗಿದ್ದಲ್ಲಿ ಆ ಮೊತ್ತ 31.96 ಕೋಟಿ ರೂ. ಆಗಲಿದೆ. ಮೃತ ಫಲಾನುಭವಿಗಳ ಖಾತೆಗೂ ಗೃಹ ಲಕ್ಷ್ಮಿ ಹಣ ಹೋಗುತ್ತಿರುವುದು ಬಹಿರಂಗವಾಗುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ಹಣ ವಾಪಸ್ ಪಡೆಯಲು ಕ್ರಮಕ್ಕೆ ಮುಂದಾಗಿದೆ.

ಅಂಗನವಾಡಿ ಕಾರ್ಯಕರ್ತೆಯರಿಂದ ಮೃತರ ಮಾಹಿತಿಯನ್ನು ಪಡೆದು ಸೇವಾ ಸಿಂಧು ಪೋರ್ಟಲ್‌ನಲ್ಲಿ ನಮೂದಿಸಲು ಸೂಚಿಸಲಾಗಿದೆ. ಜೊತೆಗೆ ಈಗಾಗಲೇ ಜಮೆಯಾದ ಧನ ಸಹಾಯವನ್ನು ಸರ್ಕಾರಕ್ಕೆ ಪಾವತಿಸಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದ್ದು, ಅದರಂತೆ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಲು ಎಸ್‌ಎಲ್‌ಬಿಸಿ ಮೂಲಕ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಈ ಮಧ್ಯೆ, ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಸೂಕ್ರ ಕ್ರಮ ಕೈಗೊಳ್ಳುತ್ತೆವೆ ಎಂದು ಜಿ.ಪಂ ಸಿಇಓ ತೇಪೆ ಹಾಕಿದ್ದಾರೆ.ಇದನ್ನೂ ಓದಿ: ಮಿತ್ರದೇಶಗಳಲ್ಲಿ ಭಿನ್ನಮತ | ಇರಾನ್‌ನ 30 ತೈಲ ಘಟಕಗಳ ಮೇಲೆ ಇಸ್ರೇಲ್ ದಾಳಿ – ತರಾಟೆಗೆ ತೆಗೆದುಕೊಂಡ ಅಮೆರಿಕ

Share This Article