ಸಂಜು ಬ್ಯಾಟಿಂಗ್‌, ಬುಮ್ರಾ ಬೌಲಿಂಗ್‌, ಅಕ್ಷರ್‌ ಸ್ಟನ್ನಿಂಗ್‌ ಕ್ಯಾಚ್‌ – 7 ರನ್‌ಗಳ ರೋಚಕ ಜಯ, 4ನೇ ಬಾರಿ ಟೀಂ ಇಂಡಿಯಾ ಫೈನಲಿಗೆ

3 Min Read

ಮುಂಬೈ: ಸಂಜು ಸ್ಯಾಮ್ಸನ್‌ ಸ್ಫೋಟಕ ಬ್ಯಾಟಿಂಗ್‌, ಅಕ್ಷರ್‌ ಪಟೇಲ್‌ ಸ್ಟನ್ನಿಂಗ್‌ ಕ್ಯಾಚ್‌, ಕೊನೆಯಲ್ಲಿ ಬುಮ್ರಾ ಬೌಲಿಂಗ್‌ ಕಮಾಲ್‌ನಿಂದ ಇಂಗ್ಲೆಂಡ್‌ (England) ವಿರುದ್ಧ ಭಾರತ 7 ರನ್‌ಗಳ ರೋಚಕ ಜಯ ಸಾಧಿಸಿ ನಾಲ್ಕನೇ ಬಾರಿ ಟಿ20 ವಿಶ್ವಕಪ್‌ ಫೈನಲ್‌ (T20 World Cup) ಪ್ರವೇಶಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಭಾರತ (Team India) 7 ವಿಕೆಟ್‌ ನಷ್ಟಕ್ಕೆ 253 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಬೆಥೆಲ್‌ ಸ್ಫೋಟಕ ಶತಕ ಸಿಡಿಸಿಯೂ 7 ವಿಕೆಟ್‌ ನಷ್ಟಕ್ಕೆ 246 ರನ್‌ ಹೊಡೆದು ಸೋಲನ್ನು ಒಪ್ಪಿಕೊಂಡಿತು.

ಕೊನೆಯ 3 ಮೂರು ಓವರ್‌ನಲ್ಲಿ ಇಂಗ್ಲೆಂಡ್‌ ಗೆಲ್ಲಲು 45 ರನ್‌ ಬೇಕಿತ್ತು. 18ನೇ ಓವರ್‌ ಎಸೆದ ಬುಮ್ರಾ (6 ರನ್‌ ನೀಡಿದರೆ 19 ನೇ ಓವರ್‌ ಎಸೆದ ಪಾಂಡ್ಯ (Hardik Pandya) 9 ರನ್‌ ನೀಡಿ ಸ್ಯಾಮ್‌ ಕರ್ರನ್‌ ಅವರ ವಿಕೆಟ್‌ ಪಡೆದರು. ಬೌಂಡರಿ ಗೆರೆಯಲ್ಲಿ ತಿಲಕ್‌ ವರ್ಮಾ ಕರ್ರನ್‌ ಅವರ ಕ್ಯಾಚ್‌ ಹಿಡಿದು ಪಂದ್ಯಕ್ಕೆ ರೋಚಕ ತಿರುವು ನೀಡಿದರು.  ಇದನ್ನೂ ಓದಿ: ಸ್ಫೋಟಕ ಅರ್ಧಶತಕ ಸಿಡಿಸಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ಸಂಜು ಸ್ಯಾಮ್ಸನ್‌

20ನೇ ಓವರ್‌ ಎಸೆಯಲು ಬಂದಿದ್ದು ಶಿವಂ ದುಬೆ. ದುಬೆಯ ಮೊದಲ ಎಸೆತವನ್ನು ಬೆಥೆಲ್‌ ಲಾಂಗ್‌ ಆಫ್‌ ಕಡೆಗೆ ಹೊಡೆದು ಎರಡು ರನ್‌ ಓಡಲು ಮುಂದಾದರು. ಈ ವೇಳೆ ಉತ್ತಮ ಫೀಲ್ಡಿಂಗ್‌ ಮಾಡಿದ ಪಾಂಡ್ಯ ನೇರವಾಗಿ ವಿಕೆಟ್‌ ಕೀಪರ್‌ ಕಡೆಗೆ ಥ್ರೋ ಮಾಡಿದರು. ಸಂಜು ಸ್ಯಾಮ್ಸನ್‌ ಕೈಗೆ ಚೆಂಡು ಸಿಗುತ್ತಿದ್ದಂತೆ ವಿಕೆಟ್‌ಗೆ ತಾಗಿಸಿದರು. ಪರಿಣಾಮ ಬೆಥೆಲ್‌ 105 ರನ್‌ (48 ಎಸೆತ, 8 ಬೌಂಡರಿ, 7 ಸಿಕ್ಸ್‌) ಹೊಡೆದು ಔಟಾಗುತ್ತಾರೆ. ಬೆಥೆಲ್‌ ಔಟಾಗುತ್ತಿದ್ದಂತೆ ಪಂದ್ಯ ಭಾರತದ ಕಡೆಗೆ ತಿರುಗಿತು.

ಕೊನೆಯಲ್ಲಿ ಜೋಫ್ರಾ ಅರ್ಚರ್‌ ಮೂರು ಸಿಕ್ಸ್‌ ಹೊಡೆದರೂ ಭಾರತ 7 ರನ್‌ಗಳಿಂದ ಗೆದ್ದು ಫೈನಲ್‌ ಪ್ರವೇಶಿಸಿತು. ಅಕ್ಷರ್‌ ಪಟೇಲ್‌ ಫಿಲ್‌ ಸಾಲ್ಟ್‌, ಹ್ಯಾರಿ ಬ್ರೂಕ್‌, ಮತ್ತು ವಿಲ್‌ ಜಾಕ್ಸ್‌ ಅವರ ಕ್ಯಾಚ್ ಹಿಡಿದಿದ್ದು ಪಂದ್ಯಕ್ಕೆ ರೋಚಕ ತಿರುವು ನೀಡಿತು. ಫೈನಲ್‌ ಪಂದ್ಯ ಭಾನುವಾರ ನ್ಯೂಜಿಲೆಂಡ್‌ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯಲಿದೆ.

ಇಂಗ್ಲೆಂಡ್‌ ಆರಂಭದಿಂದಲೇ ಸ್ಫೋಟಕ ಬ್ಯಾಟ್‌ ಬೀಸಲು ಆರಂಭಿಸಿತು. ಒಂದು ಹಂತದಲ್ಲಿ 95 ರನ್‌ಗಳಿಂದ 4 ವಿಕೆಟ್‌ ಕಳೆದುಕೊಂಡರೂ ಬೆಥೆಲ್‌ ಮತ್ತು ಜ್ಯಾಕ್ಸ್‌ 5ನೇ ವಿಕೆಟಿಗೆ 39 ಎಸೆತಗಳಲ್ಲಿ 77 ರನ್‌ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಅತ್ಯುತ್ತಮವಾಗಿ ಆಟವಾಡಿದ ಜ್ಯಾಕ್ಸ್‌ 35 ರನ್‌(20 ಎಸೆತ, 4 ಬೌಂಡರಿ, 2 ಸಿಕ್ಸ್)‌ ಹೊಡೆದು ಔಟಾದರು.

ಇದಕ್ಕೂ ಮೊದಲು ಇಂಗ್ಲೆಂಡ್‌ ಪರ ಫಿಲ್‌ ಸಾಲ್ಟ್‌ 5 ರನ್‌, ಜೋಸ್‌ ಬಟ್ಲರ್‌ 25 ರನ್‌(17 ಎಸೆತ, 4 ಬೌಂಡರಿ, 1 ಸಿಕ್ಸ್‌), ಟಾಮ್ ಬ್ಯಾಂಟನ್ 17 ರನ್‌(5 ಎಸೆತ, 1 ಬೌಂಡರಿ, 2 ಸಿಕ್ಸ್‌) ಹೊಡೆದು ವಿಕೆಟ್‌ ಒಪ್ಪಿಸಿದರು.

ಅಭಿಷೇಕ್‌ ಶರ್ಮಾ 9 ರನ್‌ ಗಳಿಸಿ ಔಟಾದರೂ ಎರಡನೇ ವಿಕೆಟಿಗೆ ಸಂಜು ಸ್ಯಾಮ್ಸನ್‌ ಮತ್ತು ಇಶನ್‌ ಕಿಶನ್‌ 45 ಎಸೆತಗಳಲ್ಲಿ 97 ರನ್‌ ಜೊತೆಯಾಟವಾಡಿದರು. ಸಂಜು ಸ್ಯಾಮ್ಸನ್‌ 26 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ ಅಂತಿಮವಾಗಿ 42 ಎಸೆತಗಳಲ್ಲಿ 89 ರನ್‌(8 ಬೌಂಡರಿ, 7 ಸಿಕ್ಸ್‌) ಹೊಡೆದು ಔಟಾದರು.


ಇಶನ್‌ ಕಿಶನ್‌ 39 ರನ್‌(18 ಎಸೆತ, 4 ಬೌಂಡರಿ, 2 ಸಿಕ್ಸ್‌), ಶಿವಂ ದುಬೆ 43 ರನ್‌(25 ಎಸೆತ, 1 ಬೌಂಡರಿ, 4 ಸಿಕ್ಸ್‌) ಹಾರ್ದಿಕ್‌ ಪಾಂಡ್ಯ 27 ರನ್‌(12 ಎಸೆತ, 3 ಬೌಂಡರಿ, 2 ಸಿಕ್ಸ್‌), ತಿಲಕ್‌ ವರ್ಮಾ 21 ರನ್‌(7 ಎಸೆತ, 3 ಸಿಕ್ಸ್‌) ಹೊಡೆದ ಪರಿಣಾಮ ಭಾರತ 253 ರನ್‌ ಗಡಿಯನ್ನು ದಾಟಿತು.

ಭಾರತದ ರನ್‌ ಏರಿದ್ದು ಹೇಗೆ?
50 ರನ್‌ – 27 ಎಸೆತ
100 ರನ್‌ – 51 ಎಸೆತ
150 ರನ್‌ – 76 ಎಸೆತ
200 ರನ್‌ – 101 ಎಸೆತ
250 ರನ್‌ – 118 ಎಸೆತ

ಇಂಗ್ಲೆಂಡ್‌ ರನ್‌ ಏರಿದ್ದು ಹೇಗೆ?
50 ರನ್‌ – 31 ಎಸೆತ
100 ರನ್‌ – 49 ಎಸೆತ
150 ರನ್ – 74 ಎಸೆತ
200 ರನ್‌ – 101 ಎಸೆತ

Share This Article