ಕಾರವಾರ: ಉತ್ತರ ಕನ್ನಡ (Uttarakannada) ಜಿಲ್ಲೆಯ ಮುಂಡಗೋಡು ತಾಲೂಕಿನ ಕೊಳಗಿ ಅರಣ್ಯದಲ್ಲಿ ರುಂಡವಿಲ್ಲದೇ ಬಿದ್ದಿದ್ದ ವೃದ್ಧೆಯ ಬೆತ್ತಲೆ ದೇಹದ ಹಂತಕನನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಫೆಬ್ರವರಿ 20 ರಂದು ಕೊಳಗಿ ಅರಣ್ಯದಲ್ಲಿ ಬೆತ್ತಲಾಗಿ ಬಿದ್ದಿದ್ದ ರುಂಡವಿಲ್ಲದ ವೃದ್ಧೆ ಶವ ಪತ್ತೆಯಾಗಿತ್ತು. ಪೊಲೀಸರು ವೃದ್ಧೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದರು. ನಂತರ ಮಹಿಳೆ ಗುರುತು ಹಾಗೂ ಆರೋಪಿ ಪತ್ತೆಗಾಗಿ ಗೋಕರ್ಣದ ಸಿಪಿಐ ಶ್ರೀಧರ್ ನೇತ್ರತ್ವದ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ಧಾರವಾಡ | ಹಿಟ್ & ರನ್ ಕೇಸ್‌ಗೆ ಬಿಗ್ ಟ್ವಿಸ್ಟ್ – ಬಸ್‌ನ ಡ್ಯಾಶ್ ಕ್ಯಾಮೆರಾದಿಂದ ಕೊಲೆ ರಹಸ್ಯ ಬಯಲು
ಹತ್ಯೆಯಾದ ವೃದ್ಧೆಯನ್ನು ಶಿವಕ್ಕ ಸೋಮಣ್ಣ ಗೌಡ ಪಾಟೀಲ್ (80) ಎಂದು ಗುರುತಿಸಲಾಗಿತ್ತು. ಅವರು ಮುಂಡಗೋಡು ತಾಲೂಕಿನ ಮಳಿಗೆಯಲ್ಲಿ ಕಿರಾಣಿ ಅಂಗಡಿ ನಡೆಸುತಿದ್ದರು. ಹತ್ಯೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ಶಿವಮೊಗ್ಗ (Shivamogga) ಜಿಲ್ಲೆಯ ಸೊರಬ ತಾಲೂಕಿನ ಮನ್ಮನೆಯ ಕೃಷ್ಣಪ್ಪ ಎಂದು ಗುರುತಿಸಲಾಗಿದೆ.
ಈತ ಶಿವಕ್ಕ ಹಾಕಿಕೊಂಡಿದ್ದ ಬಂಗಾರದ (Gold) ಒಡವೆಮೇಲೆ ಕಣ್ಣುಹಾಕಿದ್ದು ನಂತರ ಹತ್ಯೆ ಮಾಡಿ ಆಭರಣಗಳನ್ನು ಎಗರಿಸಿ ಮಹಿಳೆಯ ಗುರುತು ಸಿಗಬಾರದು ಎಂದು ಆಕೆಯ ರುಂಡ ಕತ್ತರಿಸಿ ದೇಹದ ಬಟ್ಟೆಗಳನ್ನು ತೆಗೆದು ವಿವಸ್ತ್ರಗೊಳಿಸಿದ್ದ. ಇನ್ನು ಆಕೆಯ ರುಂಡವನ್ನು ಹಣಗಲ್ ತಾಲೂಕು ಶಿವಪುರದಲ್ಲಿ ಎಸೆದು ಹೋಗಿದ್ದ. ಕೆಲವು ಸಾಕ್ಷಿಗಳ ಆಧಾರದಲ್ಲಿ ಆತನನ್ನು ಪತ್ತೆ ಮಾಡಿದ್ದು, ಕೊನೆಗೂ ಆತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಈತ ಸೊರಬದಲ್ಲಿ ಸಹ ಕೊಲೆ ಮಾಡಿದ ಆರೋಪ ಎದುರಿಸುತಿದ್ದು, ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಇದನ್ನೂ ಓದಿ: ಕಡಿಮೆ ಬೆಲೆಗೆ ಚಿನ್ನದ ಆಸೆ ತೋರಿಸಿ ಉದ್ಯಮಿಯಿಂದ 20 ಲಕ್ಷ ದರೋಡೆ

