ಧಾರವಾಡ: ಇತ್ತೀಚೆಗೆ ನಗರದ (Dharwad) ಸವದತ್ತಿ ರಸ್ತೆಯಲ್ಲಿ ನಡೆದ ಹಿಟ್ & ರನ್ (Hit And Run) ಕೇಸ್‍ನಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಇದು ಹಿಟ್ & ರನ್ ಕೇಸ್ ಅಲ್ಲವೇ ಅಲ್ಲ ಬದಲಿಗೆ ಇದು ಪ್ರೀಪ್ಲ್ಯಾನ್ ಮರ್ಡರ್ ಎಂದು ಪೊಲೀಸರು ತನಿಖೆ ಮಾಡಿದ್ದರು. ಪೊಲೀಸರಿಗೆ ಥಾರ್ ಮಹಿಳೆಗೆ ಡಿಕ್ಕಿ ಹೊಡೆಯುತಿದ್ದ ದೃಶ್ಯ ಬಸ್ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದು, ಇದು ಪ್ರಕರಣದ ಇಡೀ ಚಿತ್ರಣವನ್ನೇ ಬದಲಿಸಿದೆ.
ಲಲಿತಾ ಹತ್ತರಗಿ ಎಂಬವರಿಗೆ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ್ದರು. ಈ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಆಕೆಯ ಪತಿಯೇ ಆರೋಪಿ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಉದಯ ಹತ್ತರಗಿ ಮತ್ತು ಲಲಿತಾ ಹತ್ತರಗಿ 10 ವರ್ಷದ ಹಿಂದೆ ಮದುವೆಯಾಗಿದ್ದರು. ಕಾರಣಾಂತರಗಳಿಂದ ಇಬ್ಬರೂ ಬೇರೆ ಬೇರೆಯಾಗಿದ್ದರು. ಲಲಿತಾ ತನಗೆ ಜೀವನಾಂಶ ಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಳು. 2024ರಲ್ಲಿ ಲಲಿತಾಳಿಗೆ ಉದಯ ಒಂದೂವರೆ ಎಕರೆ ಜಮೀನು ನೀಡಬೇಕು ಎಂದು ಕೋರ್ಟ್ ಕೂಡ ಆದೇಶ ಮಾಡಿತ್ತು. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ನ್ಯಾಯಾಲಯದ ಆದೇಶದ ನಂತರ ಲಲಿತಾ ಪದೇ ಪದೇ ಉದಯಗೆ ಕರೆ ಮಾಡಿ ತನ್ನ ಜೀವನಾಂಶ ಕೊಡುವಂತೆ ಕೇಳುತ್ತಲೇ ಇದ್ದಳು. ಇದರಿಂದ ಲಲಿತಾಳನ್ನು ಹೇಗಾದರೂ ಮಾಡಿ ಮುಗಿಸಲೇಬೇಕು ಎಂದು ಉದಯ್ ಪಣ ತೊಟ್ಟಿದ್ದ.
ಈ ಇಬ್ಬರೂ ಬೇರೆ ಬೇರೆಯಾದ ನಂತರ ಲಲಿತಾ ಧಾರವಾಡ ತಾಲೂಕಿನ ಸೋಮಾಪುರದಲ್ಲಿ ವಾಸವಾಗಿದ್ದಳು. ಈ ಎಲ್ಲ ಬೆಳವಣಿಗೆ ಬಗ್ಗೆ ಮೊದಲಿಗೆ ಉದಯ ತನ್ನ ಸಂಬಂಧಿ ನಾಗಪ್ಪ ಪಡೇಕರ ಜೊತೆ ಚರ್ಚೆ ಮಾಡಿ ಲಲಿತಾಳ ಕಥೆ ಮುಗಿಸಲು ನಿರ್ಧಾರ ಮಾಡಿ, 40 ಲಕ್ಷ ರೂ. ಸುಪಾರಿ ಸಹ ಕೊಟ್ಟಿದ್ದ. ಪ್ಲ್ಯಾನ್ ಮಾಡಿ ಲಲಿತಾಳನ್ನು ಸವದತ್ತಿ ರಸ್ತೆ ಬಳಿ ಇರುವ ದುರ್ಗಾದೇವಿ ದೇವಸ್ಥಾನದ ಹತ್ತಿರ ಕರೆಯಿಸಿಕೊಂಡ ಉದಯ್ ಆಕೆಯನ್ನು ಥಾರ್ ವಾಹನ ಹಾಯಿಸಿ ಕೊಲೆ ಮಾಡುವಂತೆ ಸುಪಾರಿ ಕೊಟ್ಟವರಿಗೆ ಹೇಳಿದ್ದ.
ಅದರಂತೆ ಸುಪಾರಿ ಕಿಲ್ಲರ್ಸ್ ಲಲಿತಾಳ ಮೇಲೆ ಥಾರ್ ವಾಹನ ಹಾಯಿಸಿ ಕೊಲೆ ಮಾಡಿ, ಇದೊಂದು ಹಿಟ್ & ರನ್ ಎಂಬಂತೆ ಬಿಂಬಿಸಿದ್ದರು. ಆದರೆ, ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಇದೇ ದೃಶ್ಯದ ಸಹಾಯದಿಂದ ಇದೀಗ ಈ ಇಡೀ ಕಥಾ ಹಂದರ ಬಯಲಾಗಿದೆ. ನಾಲ್ಕು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


