ಹೋಟೆಲಿನ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ – ಪಾಕ್‌ ಆಟಗಾರನಿಗೆ ಬಿತ್ತು ದಂಡ

1 Min Read

ಕೊಲಂಬೋ: ಟಿ20 ವಿಶ್ವಕಪ್‌ (T20 World Cup) ಟೂರ್ನಿಯಾಡಲು ಶ್ರೀಲಂಕಾಗೆ (Sri Lanka) ಬಂದಿದ್ದ ಪಾಕಿಸ್ತಾನದ (Pakistan) ಆಟಗಾರನೊಬ್ಬ ಕ್ಯಾಂಡಿಯ ಹೋಟೆಲಿನ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆತಿಥೇಯ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಕೊನೆಯ ಸೂಪರ್ 8 ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿದೆ. ಮಹಿಳಾ ಸಿಬ್ಬಂದಿ ಕೂಗುತ್ತಾ ಸಹಾಯಕ್ಕಾಗಿ ಕರೆ ಮಾಡಿದಾಗ ಹೋಟೆಲ್ ಸಿಬ್ಬಂದಿ ಆಕೆಯ ರಕ್ಷಣೆಗೆ ಬಂದು ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೈದ್ ಚೀಮಾ ಅವರಿಗೆ ವಿಷಯ ತಿಳಿಸಿದ್ದಾರೆ.

ಗೋಲ್ಡನ್ ಕ್ರೌನ್ ಹೋಟೆಲ್‌ನ ಆಡಳಿತ ಮಂಡಳಿ ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿ ಆತನ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿತು. ಆಟಗಾರನ ಪರವಾಗಿ ನವೈದ್ ಚೀಮಾ ಕ್ಷಮೆಯಾಚಿಸಿದರು. ಬಳಿಕ ಅನುಚಿತ ವರ್ತನೆ ತೋರಿದ ಆಟಗಾರನಿಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಶ್ರೀಲಂಕಾ ವಿರುದ್ಧ 5 ರನ್‌ಗಳಿಂದ ಪಂದ್ಯ ಗೆದ್ದಿದ್ದದ್ದರೂ ನೆಟ್‌ ರನ್‌ ರೇಟ್‌ ಕಡಿಮೆ ಇದ್ದ ಕಾರಣ ಪಾಕ್‌ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ತಂಡ ಭಾನುವಾರ ಮತ್ತು ಸೋಮವಾರ ಪಾಕಿಸ್ತಾನಕ್ಕೆ ತೆರಳಿತ್ತು.  ಇದನ್ನೂ ಓದಿ: T20 ವಿಶ್ವಕಪ್‌ ಸೆಮಿಸ್‌ ಕದನ – ಸತತ 3ನೇ ಬಾರಿ ಭಾರತಕ್ಕೆ ಆಂಗ್ಲರೇ ಎದುರಾಳಿ!

ಈ ಆಟಗಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಶಿಸ್ತು ಸಮಿತಿಯ ಮುಂದೆ ಹಾಜರಾಗುವ ಸಾಧ್ಯತೆಯಿದೆ ಮತ್ತು ಅವರಿಗೆ ಹೆಚ್ಚಿನ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

ಪಾಕಿಸ್ತಾನಿ ಆಟಗಾರರು ಪ್ರವಾಸದ ಸಮಯದಲ್ಲಿ ಅಸಭ್ಯ ವರ್ತನೆ ತೋರುವುದು ಹೊಸದೆನಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪಾಕಿಸ್ತಾನ ಶಾಹೀನ್ಸ್ ತಂಡದ ಯುವ ಬ್ಯಾಟರ್ ಹೈದರ್ ಅಲಿಯನ್ನು ಕಳೆದ ವರ್ಷ ಮ್ಯಾಂಚೆಸ್ಟರ್ ಪೊಲೀಸರು ಬಂಧಿಸಲಾಗಿತ್ತು. ಹೈದರ್‌ನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಿಡುಗಡೆ ಮಾಡಲಾಗಿತ್ತು.

ಕೆಲವು ವರ್ಷಗಳ ಹಿಂದೆ ಮಲೇಷ್ಯಾ ಪ್ರವಾಸದಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಪಾಕಿಸ್ತಾನ ತಂಡದ ಮಸಾಜ್ ಪಟು ಮಲಾಂಗ್ ಅಲಿ ಅವರ ಮೇಲೂ ದೂರು ದಾಖಲಾಗಿ ದಂಡ ವಿಧಿಸಲಾಗಿತ್ತು.

Share This Article