ಬೆಂಗಳೂರು: ಕುಮಾರಸ್ವಾಮಿಯವರಿಗೆ (H.D Kumaraswamy) ಗೂಢಚರ್ಯೆಯ ಪಾಠವನ್ನು ಅವರ ಪೂಜ್ಯ ತಂದೆಯವರೇ (H.D Devegowda) ಹೇಳಿಕೊಟ್ಟಿರಬಹುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆರೋಪಿಸಿದ್ದಾರೆ.
ಫೋನ್ ಕದ್ದಾಲಿಕೆ (Phone Tapping) ಆರೋಪ ಮಾಡಿದ್ದ ಹೆಚ್‌ಡಿಕೆಗೆ ಮಾಧ್ಯಮ ಹೇಳಿಕೆ ಮೂಲಕ ಅವರು ಟಾಂಗ್ ಕೊಟ್ಟಿದ್ದಾರೆ. ತನ್ನನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿಯವರ ವಿರುದ್ಧವೇ ಅವರು ಗೂಢಚರ್ಯೆ ಮಾಡಿದ್ದರು. ಆ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತನ್ನ ಬೆಂಬಲವನ್ನು ಹಿಂದೆಗೆದುಕೊಂಡಿರುವುದು ಇತಿಹಾಸದ ಪುಟಗಳಲ್ಲಿದೆ. ಈ ಅಪನಂಬಿಕೆ ಮತ್ತು ಸಣ್ಣತನಗಳಿಂದಾಗಿ ಕನ್ನಡಿಗರೊಬ್ಬರು ಇನ್ನಷ್ಟು ಕಾಲ ಪ್ರಧಾನಿಯಾಗುವ ಅವಕಾಶ ತಪ್ಪಿಹೋಯಿತು ಎನ್ನುವುದು ವಿಷಾದನೀಯ ವಾಸ್ತವ ಎಂದು ಗೌಡರ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಾಕ್ಷಿ ಕೊಡಿ – ಹೆಚ್‌ಡಿಕೆಗೆ ಪೊನ್ನಣ್ಣ ತಿರುಗೇಟು
2004ರಿಂದ 2013ರ ವರೆಗಿನ ಒಂಬತ್ತು ವರ್ಷಗಳ ಅವಧಿಯಲ್ಲಿ ರಾಜ್ಯ ಐದು ಮುಖ್ಯಮಂತ್ರಿಗಳನ್ನು ಕಂಡಿದೆ. 2018ರಿಂದ 2023ರ 5 ವರ್ಷಗಳ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನ ಕಾಣುವಂತಾಗಿದೆ. ಇವರೊಳಗಿನ ಪರಸ್ಪರ ಅಪನಂಬಿಕೆ, ದ್ವೇಷ, ಅಸೂಯೆ, ಬೆನ್ನಿಗೆ ಚೂರಿ ಹಾಕುವ ಕುತಂತ್ರಗಳೇ ಕಾರಣ ಎಂದು ಕುಟುಕಿದ್ದಾರೆ.
2018ರಲ್ಲಿ ಹೆಚ್‌ಡಿಕೆ ಸಿಎಂ ಆಗಿದ್ದಾಗ ಆದಿಚುಂಚನಗಿರಿಯ ಶ್ರೀಗಳ ಫೋನನ್ನೆ ಕದ್ದಾಲಿಸಿದ್ದಾರೆ ಎಂದು ಈಗಿನ ರಾಜಕೀಯ ಸಂಗಾತಿ ಬಿ.ವೈ ವಿಜಯೇಂದ್ರ ಅವರೇ ಆರೋಪ ಮಾಡಿದ್ದರು. ಇದರ ಬಗ್ಗೆ ತನಿಖೆ ಮಾಡಿದ್ದ ಸಿಬಿಐ, ಒಬ್ಬ ಸ್ವಾಮೀಜಿಗಳದ್ದಷ್ಟೇ ಅಲ್ಲ, ಬದಲಿಗೆ ಏಳು ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ತಿಳಿಸಿತ್ತು. ನಂಬಿಕೆಗೆ ತಾನು ಅರ್ಹ ಅಲ್ಲ ಎಂದು ಸಾಬೀತು ಮಾಡಿರುವ ಕುಮಾರಸ್ವಾಮಿವರನ್ನು ಬಿಜೆಪಿಯವರು (BJP) ಸುಮ್ಮನೆ ಬಿಟ್ಟಾರೆಯೇ? ಅವರ ವಿರುದ್ಧವೂ ಗೂಢಚಾರರನ್ನು ಬಿಟ್ಟಿರಬಹುದು. ಇಂತಹ ದುರ್ಬುದ್ಧಿಗಾಗಿಯೇ ರಾಜ್ಯದ ಜನತೆ ಈ ಎರಡೂ ಪಕ್ಷಗಳನ್ನು ತಿರಸ್ಕರಿಸಿರುವುದು ಎನ್ನುವುದು ನೆನಪಿರಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನು ಪಾಪರ್ ಮಾಡಲು ಮುಂದಾದ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್


