ಬಳ್ಳಾರಿ ಕಾಲೇಜಿನಲ್ಲಿ ಗಾಂಜಾ, ಡ್ರಗ್ಸ್ ಸಪ್ಲೈ ಆರೋಪ – ಎಬಿವಿಪಿಯಿಂದ ಪ್ರತಿಭಟನೆ, ಪೀಠೋಪಕರಣ ಧ್ವಂಸ

1 Min Read

ಬಳ್ಳಾರಿ: ವಿದ್ಯಾರ್ಥಿಗಳಿಗೆ (Students) ಗಾಂಜಾ, ಡ್ರಗ್ಸ್‌ ವಿತರಣೆಯಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ABVP) ಸಂಘಟನೆಯ ವಿದ್ಯಾರ್ಥಿಗಳು ಪಿಪ್ಯೂಲ್ ಟ್ರೀ ಖಾಸಗಿ ಕಾಲೇಜು ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾಕಾರರು, ಶಾಲಾ ಸಿಬ್ಬಂದಿ ಹಾಗೂ ಪೊಲೀಸರ ನಡುವೆ ವಾಗ್ವಾದ ಶುರುವಾಗಿ ಕೊನೆಗೆ ದೊಡ್ಡ ಗಲಾಟೆಯೇ ನಡೆದು, ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತ್ತು.‌‌

ಆರಂಭದಲ್ಲಿ 30ಕ್ಕೂ ಹೆಚ್ಚು ಪ್ರತಿಭಟನಾಕಾರರು ಪ್ರತಿಭಟನೆಗೆ ಇಳಿದಿದ್ದರು. ಸ್ವಲ್ಪ ಹೊತ್ತಲ್ಲೇ ಪ್ರತಿಭಟನಾಕಾರರು ಶಾಲೆಗೆ ನುಗ್ಗಲು ಯತ್ನಿಸಿದ್ದರು. ಕೂಡಲೇ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ಮಾಡಿದರು.

ಲಾಠಿ ಪ್ರಹಾರಕ್ಕೆ ಸಿಟ್ಟಾದ ಎಬಿವಿಪಿ ಕಾರ್ಯಕರ್ತರು ಕಾಲೇಜಿನ ಆವರಣಕ್ಕೆ ನುಗ್ಗಿ ಕಿಟಕಿ, ಗ್ಲಾಸ್, ಹೂಕುಂಡ ಸೇರಿ ಅನೇಕ ವಸ್ತಗನ್ನು ಒಡೆದು ಹಾಕಿದ್ದಾರೆ. ಕೂಡಲೇ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಎಬಿವಿಪಿ ಸದಸ್ಯರನ್ನು ವಶಕ್ಕೆ ಪಡೆದರು.  ಇದನ್ನೂ ಓದಿ:  ಬೆಂಬಲಿಗ ಶಾಸಕರ ಡಿನ್ನರ್ ಮೀಟಿಂಗ್ ಶಕ್ತಿ ಪ್ರದರ್ಶನ ಅಲ್ಲ: ಡಿ.ಕೆ.ಶಿವಕುಮಾರ್

ಪಿಪ್ಯೂಲ್ ಟ್ರೀ ಶಾಲೆ ಹಾಗೂ ಕಾಲೇಜಿನ ಕೆಲವು ಮಕ್ಕಳು ಅನೇಕ ದಿನಗಳಿಂದ ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಶಾಲಾ ಆವರಣದಲ್ಲೇ ಮಾದಕ ವಸ್ತುಗಳನ್ನು ಸೇವಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದನ್ನು ಪ್ರಶ್ನೆ ಮಾಡಲು ಎಬಿವಿಪಿ ಮುಂದಾಗಿತ್ತು. ಆದರೆ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದರಿಂದ ಶಾಲೆ, ಕಾಲೇಜಿನ ಆಸ್ತಿಪಾಸ್ತಿಗೆ ಹಾನಿಯಾಗಿದೆ.

ಶಾಲೆಯ ಆಡಳಿತ‌ ಮಂಡಳಿ ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾವುದೇ ಗಾಂಜಾ, ಡ್ರಗ್ಸ್‌ ವಿತರಣೆ ಆಗುತ್ತಿಲ್ಲ. ಇದೆಲ್ಲ ಸುಳ್ಳು ಎಂದು ಹೇಳಿ ದೂರು ನೀಡಲು ಮುಂದಾಗಿದೆ.

ಘಟನಾ ಸ್ಥಳಕ್ಕೆ ಬಳ್ಳಾರಿ ಎಸ್‌ಪಿ ಸುಮನ್ ಡಿ ಪನ್ನೇಕರ್ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಪ್ರತಿಭಟನೆ ನೋಡಿದರೆ ಗಲಾಟೆ ಮಾಡಲೆಂದೇ ಬಂದಂತೆ ಕಾಣುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Share This Article