ವಿಂಡೀಸ್‌ ವಿರುದ್ಧ ಆಫ್ರಿಕಾಗೆ 9 ವಿಕೆಟ್‌ಗಳ ಭರ್ಜರಿ ಜಯ – ಭಾರತದ ಸೆಮಿ ಆಸೆ ಜೀವಂತ

2 Min Read

ಅಹಮದಾಬಾದ್‌: ಸೂಪರ್‌ 8 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌(West Indies) ವಿರುದ್ದ ದಕ್ಷಿಣ ಆಫ್ರಿಕಾ(South Africa) 9 ವಿಕೆಟ್‌ಗಳ ಭರ್ಜರಿ ಜಯಗಳಿಸಿ ಬಹುತೇಕ ಸೆಮಿಫೈನಲ್‌ ಪ್ರವೇಶಿಸಿದೆ. ವಿಂಡೀಸ್‌ ಸೋತಿರುವ ಕಾರಣ ಭಾರತದ (Team India) ಸೆಮಿಫೈನಲ್‌ ಆಸೆ ಜೀವಂತವಾಗಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ವೆಸ್ಟ್‌ ಇಂಡೀಸ್‌ 8 ವಿಕೆಟ್‌ ನಷ್ಟಕ್ಕೆ 176 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಆಫ್ರಿಕಾ ನಾಯಕ ಏಡನ್‌ ಮಾರ್ಕ್ರಾಮ್ (Aiden Markram) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 16.1 ಓವರ್‌ಗಳಲ್ಲಿ 177 ರನ್‌ ಹೊಡೆದು ಜಯ ಸಾಧಿಸಿತು.

ಮಾರ್ಕ್ರಾಮ್ ಮತ್ತು ಕ್ವಿಂಟಾನ್‌ ಡಿ ಕಾಕ್‌ ಸ್ಫೋಟಕ ಆರಂಭ ನೀಡಿದರು. ಇಬ್ಬರು 48 ಎಸೆತಗಳಲ್ಲಿ 95 ರನ್‌ ಜೊತೆಯಾಟವಾಡುವ ಮೂಲಕ ಭದ್ರವಾದ ಅಡಿಪಾಯ ಹಾಕಿದರು. ಡಿ ಕಾಕ್‌ ಅವರು 47 ರನ್‌(24 ಎಸೆತ, 4 ಬೌಂಡರಿ, 4 ಸಿಕ್ಸ್‌) ಹೊಡೆದು ಔಟಾದರು.

ಎರಡನೇಯವರಾಗಿ ಕ್ರೀಸ್‌ಗೆ ಬಂದ ರಿಕಲ್ಟನ್‌ ವಿಂಡೀಸ್‌ ಬೌಲರ್‌ಗಳನ್ನು ದಂಡಿಸಿದರು. ಮಾರ್ಕ್ರಾಮ್ ಮತ್ತು ರಿಕಲ್ಟನ್‌ 50 ಎಸೆತಗಳಲ್ಲಿ 82 ರನ್‌ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಮಾರ್ಕ್ರಾಮ್ ಔಟಾಗದೇ 82 ರನ್‌(46 ಎಸೆತ, 7 ಬೌಂಡರಿ, 4 ಸಿಕ್ಸ್‌), ರಿಕಲ್ಟನ್‌ ಔಟಾಗದೇ 45 ರನ್‌ (28 ಎಸೆತ, 4 ಬೌಂಡರಿ, 2 ಸಿಕ್ಸ್‌) ಚಚ್ಚಿದರು.

ಕೊನೆಯಲ್ಲಿ ಸ್ಫೋಟಕ ಆಟ:
ವಿಂಡೀಸ್‌ ಆರಂಭದಲ್ಲಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿ 83 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿತ್ತು. ಆದರೆ 8ನೇ ವಿಕೆಟಿಗೆ ಜೇಸನ್‌ ಹೋಲ್ಡರ್‌ ಮತ್ತು ರೊಮಾರಿಯೊ ಶೆಫರ್ಡ್ 57 ಎಸೆತಗಳಲ್ಲಿ 89 ರನ್‌ ಜೊತೆಯಾಟವಾಡಿದ್ದರಿಂದ ತಂಡದ ಮೊತ್ತ ಏರಿಕೆಯಾಗಿತ್ತು. ಹೋಲ್ಡರ್‌ 49 ರನ್‌(31 ಎಸೆತ, 4 ಬೌಂಡರಿ, 3 ಸಿಕ್ಸ್‌), ಶೆಫರ್ಡ್ ಔಟಾಗದೇ 52 ರನ್‌(37 ಎಸೆತ, 3 ಬೌಂಡರಿ, 4 ಸಿಕ್ಸ್‌) ಹೊಡೆದರು.

 

ಭಾರತದ ಆಸೆ ಜೀವಂತ
ದಕ್ಷಿಣ ಆಫ್ರಿಕಾ ವಿರುದ್ಧ ಸೋತಿರುವ ಭಾರತ ಇಂದು ಜಿಂಬಾಬ್ವೆ ವಿರುದ್ಧ ಪಂದ್ಯವಾಡಲಿದ್ದರೆ ಭಾನುವಾರ ವಿಂಡೀಸ್‌ ವಿರುದ್ಧ ಆಡಲಿದೆ. ಈ ಎರಡು ಪಂದ್ಯವನ್ನು ಭಾರತ ಗೆದ್ದರೆ ಸುಲಭವಾಗಿ ಸೆಮಿ ಫೈನಲ್‌ ಪ್ರವೇಶಲಿದೆ. ಭಾರತ ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧ ಗೆದ್ದು ಸದ್ಯ 2.890 ನೆಟ್‌ ರನ್‌ ರೇಟ್‌ ಹೊಂದಿದೆ ಬಹುತೇಕ ಸೆಮಿ ಪ್ರವೇಶಿಸಿದೆ.

Share This Article